ಅನಧಿಕೃತ ಸ್ಥಗಿತಗೊಳಿಸಿದ್ದ ಚರಂಡಿ ತೆರವು
ಕ.ಪ್ರ. ವಾರ್ತೆ , ಆಳಂದ , ಮೇ 21
ಆಳಂದ: ಪಟ್ಟಣದ ವಾರ್ಡ್ 19ರ ರಸ್ತೆಯಲ್ಲಿರುವ ಚರಂಡಿ ಒಳಹರಿವು ಸ್ಥಗಿತಗೊಂಡಿತ್ತು. ಪುರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಅನಧಿಕೃತವಾಗಿ ರಸ್ತೆಯ ಚರಂಡಿಯನ್ನು ಬಂದ್ ಮಾಡಿರುವುದರಿಂದ ಸುತ್ತಲಿನ ಮನೆಗಳಿಗೂ ಚರಂಡಿ ನೀರು ತಾಗಿ ಕಿರಿಕಿರಿ ಉಂಟಾಗಿರುವ ಹಿನ್ನೆಲೆಯಲ್ಲಿ ಚರಂಡಿಯನ್ನು ತೆರವುಗೊಳಿಸಲಾಯಿತು.
ಮನ್ಸೂರಲಿ ಬಿಚ್ಚು ಉಸ್ತಾದ್ ಎಂಬುವರು ತಮ್ಮ ಮನೆಯ ಹತ್ತಿರ ಹಾದು ಹೋಗಿರುವ ಚರಂಡಿಯನ್ನು ಬಂದ್ ಮಾಡಿ ಸಾರ್ವಜನಿಕರಿಗೆ ಅನಾನುಕೂಲ ಮಾಡಿದರು. ಪುರಸಭೆ ಅಧಿಕಾರಿಗಳು ಅದನ್ನು ಸರಿಪಡಿಸುವಂತೆ ತಾಕೀತು ಮಾಡಿದರೂ ಇದಕ್ಕೆ ಸ್ಪಂದಿಸಲಿಲ್ಲ.
ಮುಖ್ಯಾಧಿಕಾರಿಗಳು ಸಂಬಂಧಿಸಿದ ವ್ಯಕ್ತಿಗೆ ನೋಟಿಸ್ ಜಾರಿ ಮಾಡಿದರೂ ಕ್ಯಾರೇ ಎನ್ನಲಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ್, ಕಿರಿಯ ಅಭಿಯಂತರ ಚನ್ನಬಸಪ್ಪ ಸಿಬ್ಬಂದಿ ಜಗೆ ಜೆಸಿಬಿ, ಟ್ರ್ಯಾಕ್ಟರ್, ಬ್ಲಾಸ್ಟಿಂಗ್ ಯಂತ್ರಗಳ ಸಹಾಯದಿಂದ ರಸ್ತೆಗೆ ಅಡ್ಡಲಾಗಿ ಬಂದ್ ಮಾಡಿದ ಇಟ್ಟಿಗೆ, ಜಲ್ಲಿಯಿಂದ ಕಟ್ಟಿದ್ದು, ಸಿಮೆಂಟ್, ಕಾಂಕ್ರಿಟ್ನಿಂದ ತಯಾರಿಸಿದ ಚರಂಡಿಯನ್ನು ಒಡೆದು ಸುಗಮಗೊಳಿಸಿದರು.
ಸದಸ್ಯ ಲಿಂಗರಾಜ ಪಾಟೀಲ್, ಸಿಬ್ಬಂದಿ ಹಸನಪ್ಪ, ಜೆ.ವಿಲ್ಸ್ನ, ಶಂಕರ ಹತ್ತರಕಿ, ಮಹ್ಮದ ಇದ್ರಿಸ್ ಇತರ ಸಿಬ್ಬಂದಿ ಇದ್ದರು.
ಕುಡಿವ ನೀರಿಗಾಗಿ ಹಾಹಾಕಾರ
ಗುಲ್ಬರ್ಗ: ಬೇಸಿಗೆಯಲ್ಲಿ ಜನ- ಜಾನುವಾರುಗಳಿಗೆ ಕುಡಿವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸರ್ಕಾರ ನಿರ್ದೇಶನ ನೀಡಿದೆ. ಆದರೆ ಜಿಪಂ ಸೇರಿದಂತೆ ತಾಪಂ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಕುಡಿವ ನೀರಿನ ಹಾಹಾಕಾರ ಎದ್ದಿದೆ ಎಂದು ಜಿಪಂ ಸದಸ್ಯ ಸಿದ್ಧಾರ್ಥ ಬಸರಿಗಿಡ ಹೇಳಿದರು.
ತಾಲೂಕಿನ ಮಾತೊಳ್ಳಿ, ಆನೂರ, ಚಿಂಚೋಳಿ ಸೇರಿದಂತೆ 20 ಹಳ್ಳಿಗಳಲ್ಲಿ ಕುಡಿವ ನೀರಿನ ಕೊರತೆಯಿರುವುದು ಕಂಡುಬಂದಿದೆ. ಮಾತೊಳ್ಳಿ ಗ್ರಾಮದ ಹೊರವಲಯದ ಬಾವಿಯಿಂದ ನೀರು ತರಲು ಹೋದ ಮಹಿಳೆ ಕಾಲು ಜಾರಿ ಬಾವಿಯೊಳಗೆ ಬಿದ್ದಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಅಲ್ಲಿದ್ದ ಕೆಲವರು ರಕ್ಷಿಸಿದ್ದಾರೆ.
ರಸ್ತೆಯೂ ಹಾಳು: ಇನ್ನೂ ಗ್ರಾಮದ ರಸ್ತೆಗಳೂ ಜನರ ಬಲಿಗಾಗಿ ಬಾಯ್ತೆರೆದು ನಿಂತಿದೆ. ಕಳಪೆ ಮಟ್ಟದ ವಸ್ತುಗಳನ್ನು ಬಳಸಿ ರಸ್ತೆ ಕಾಮಗಾರಿ ನಡೆಸಿರುವುದಕ್ಕೆ ವಾಹನ ಸಂಚಾರ ಕಷ್ಟವಾಗಿದೆ. ಡಾಂಬರ್ ಕಿತ್ತು ಹೋಗಿದ್ದು, ಗುಂಡಿಗಳು ಬಿದ್ದಿವೆ. ಅಪಘಾತಕ್ಕೆ ಆಹ್ವಾನಿಸುತ್ತಿವೆ. ಕೂಡಲೇ ಅದನ್ನು ಸಂಪೂರ್ಣವಾಗಿ ಸರಿಪಡಿಸಬೇಕೆಂದರು.
ಕಳೆದ ತಿಂಗಳು ತಾಲೂಕಿನಾದ್ಯಂತ ಆಲಿಕಲ್ಲು ಮಳೆಯಾಗಿದ್ದರಿಂದ ತಾಲೂಕಿನಲ್ಲಿ ಬೆಳೆದ ಶೇ.70 ದ್ರಾಕ್ಷಿ ಬೆಳೆ ಸೇರಿದಂತೆ ಅನೇಕ ಬೆಳೆಗಳು ಹಾನಿಯಾಗಿವೆ. ಇದುವರೆಗೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಹಿಂಗಾರು ಬಿತ್ತನೆ ಕಾಲ ಸಮೀಪಿಸಿದೆ. ಕೃಷಿ ಇಲಾಖೆಯಿಂದ ಯಾವುದೇ ಬಿತ್ತನೆ ಬೀಜದ ವಿತರಣೆಗೆ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳನ್ನು ಸಂಪರ್ಕಿಸಿದರೆ ಜಿಪಂ.ನಿಂದ ಬೀಜ ವಿತರಣೆ ಅನುಮೋದನೆ ಬಂದಿಲ್ಲ ಎನ್ನುತ್ತಾರೆ.
ಸಾಮಾನ್ಯ ಸಭೆ ಕರೆಯದ ಜಿಪಂ: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಸರಿಯಾಗಿ ನಡೆಯುತ್ತಿಲ್ಲ. ಸಭೆ ಕರೆದು ದಿಢೀರನೆ ಮುಂದಕ್ಕೆ ಹಾಕಲಾಗುತ್ತದೆ. ಕೇಳಿದರೆ ಮದುವೆ ಕಾಲವಿದೆ ಎಂದು ಸಬೂಬು ಹೇಳುತಿದ್ದಾರೆ. ನಾವು ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮದುವೆಯಂದು ಕಾಲಹರಣ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಶಿವು ಪ್ಯಾಟಿ, ಮಾಂತಪ್ಪ ಬಬಲಾದ, ಶಿವರುದ್ರಪ್ಪ, ಸಿದ್ರಾಮಪ್ಪ ಇದ್ದರು.
ರಾವೂರ: ಜೂನ್ನಲ್ಲಿ ಸಾಹಿತ್ಯ ಸಮ್ಮೇಳನ
ಚಿತ್ತಾಪುರ: ತಾಲೂಕಿನ ರಾವೂರಲ್ಲಿ ಜೂನ್ ತಿಂಗಳಲ್ಲಿ ವಲಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಲಯ ಕಸಾಪ ಅಧ್ಯಕ್ಷ ಡಾ. ಮಲ್ಲಿನಾಥ ತಳವಾರ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಲಯ ಕಸಾಪ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಸಭೆಯಲ್ಲಿ ಪ್ರಥಮ ವಲಯ ಸಮ್ಮೇಳನ ಯಶ್ವಸಿಯಾಗಲು ಸ್ವಾಗತ ಸಮಿತಿ ಹಾಗೂ ಉಪಸಮಿತಿಗಳನ್ನು ರಚಿಸಲಾಗುವುದು. ರಾವೂರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ಜನರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಶಿಕ್ಷಕರು ಭಾಗವಹಿಸುವಂತೆ ಪ್ರಚಾರ ಕೈಗೊಳ್ಳಲು ನಿರ್ಣಯಿಸಲಾಯಿತು. ಶೀಘ್ರದಲ್ಲಿ ಮತ್ತೊಂದು ಸಭೆ ಕರೆದು ಸ್ವಾಗತ ಸಮಿತಿ ರಚಿಸಲು ನಿರ್ಣಯಿಸಲಾಯಿತು. ಸಮ್ಮೇಳನ ಯಶ್ವಸಿಗೆ ಎಲ್ಲ ಸದಸ್ಯರು ಹಗಲಿರಳು ದುಡಿಯಲು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಸಿದ್ದು ಬಾಳಿ, ಮಲ್ಲಿಕಾರ್ಜುನ ಸೇಡಂ, ಸಂಘ ಸಂಸ್ಥೆ ಪ್ರತಿನಿಧಿ ಶರಣು ಜ್ಯೋತಿ, ಖಾಜಖಾನ್, ಬಸವರಾಜ ಬಲವಾಟ, ಮಹಾಂತೇಶ ಬಾಳಿ, ಈರಣ್ಣಾ ಕಲ್ಯಾಣಿ, ರಾಮಯ್ಯ ಗುತ್ತೆದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಾಸ್ಟೆಲ್ಗೆ ಅರ್ಜಿ ಕರೆ
ಗುಲ್ಬರ್ಗ: ಸೇಡಂ ತಾಲೂಕ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖಾತರ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ತಾಲೂಕಿನ ಮೆಟ್ರಿಕ್ ಪೂರ್ವ ಬಾಲಕರ- ಬಾಲಕೀಯರ ವಸತಿ ನಿಲಯಗಳಲ್ಲಿ 2014- 15ನೇ ಸಾಲಿಗೆ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳಾದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಸೇಡಂ ಟೌನ್, ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳಾದ ಸೇಡಂ ಟೌನ್, ಮುಧೋಳ, ಇಟಕಲ್, ಕುರಕುಂಟಾ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಅಲ್ಪಸಂಖ್ಯಾತ ಬಾಲಕಿಯರ ನಿಲಯ ಸೇಡಂ ಟೌನ್ ನಿಲಯಗಳಿಗೆ ಅರ್ಜಿ ಸಲ್ಲಿಸಬಹುದು.
ನಿಗದಿತ ಅರ್ಜಿ ಮೂನೆಯನ್ನು ತಾಲೂಕು ಬಿಸಿಎಂ ಕಚೇರಿಯಿಂದ ಅಥವಾ ಸಂಬಂಧಿಸಿದ ಹಾಸ್ಟೆಲ್ಗಳಿಂದ ಉಚಿತವಾಗಿ ಪಡೆದು ಭರ್ತಿ ಮಾಡಿ ದಾಖಲಾತಿಗಳೊಂದಿಗೆ ಜೂ.10ರೊಳಗಾಗಿ ಸಂಬಂಧಿಸಿದ ವಸತಿ ನಿಲಯದ ಮೇಲ್ವಿಚಾರಕರು ಹಾಗೂ ತಾಲೂಕು ಹಿಂದುಳಿಗ ವರ್ಗಗಳ ವಿಸ್ತರಣಾಧಿಕಾರಿಗಳು ಸೇಡಂ ಇವರಿಗೆ ಸಲ್ಲಿಸಬೇಕು.
ಈಗಾಗಲೇ ಹಾಸ್ಟೆಲ್ ಪ್ರವೇಶ ಪಡೆದವರು ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಆಯಾ ವಸತಿ ನಿಲಯದ ಮೇಲ್ವಿಚಾರಕರು ಹಾಗೂ ತಾಲೂಕು ಹಿಂದುಳಿಗ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ರೈತರಿಗೆ ಆಧುನಿಕ ಕೃಷಿ ಮಾಹಿತಿ ಅಗತ್ಯ
ಶಹಾಬಾದ್: ಹಲವು ತಲೆಮಾರಿನಿಂದ ಕೃಷಿಯನ್ನೇ ತಮ್ಮ ಜೀವನದ ಆಧಾರವಾಗಿಟ್ಟುಕೊಂಡು ಬದುಕುತ್ತಿರುವ ರೈತರಿಗೆ ಆಧುನಿಕ ಕೃಷಿ ಬಗ್ಗೆ ಮಾಹಿತಿ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕೆಂದು ತಾಪಂ ಸದಸ್ಯ ನಿಂಗಣ್ಣ ಹುಳಗೋಳ ಹೇಳಿದರು.
ನಗರದ ರೈತ ಸಂಪರ್ಕ ಕೇಂದ್ರದಿಂದ ಆಯೋಜಿಸಿದ್ದ ಕೃಷಿ ಮಾಹಿತಿ ಆಂದೋಲನ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮರತೂರ ತಾಪಂ ಸದಸ್ಯ ಸಂಜುಕುಮಾರ ಭಾವಿಕಟ್ಟಿ ಮಾತನಾಡಿ, ರೈತರ ಅಭಿವೃದ್ಧಿಗಾಗಿ ಕೃಷಿ ಇಲಾಖೆ ಇಂತಹ ಆಂದೋಲನದ ಮೂಲಕ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ. ಇದರಿಂದ ರೈತರು ಸಮರ್ಪಕ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಈಗಾಗಲೇ ಯೋಜನೆಗೆ ಚಿತ್ತಾಪುರದಲ್ಲಿ ಚಾಲನೆ ನೀಡಲಾಗಿದ್ದು, ಮೇ 22ರಂದು ಕಡಬೂರ, ಚಾಮನೂರ, ಕೋಲಕುಂದಾ ಸೂಗೂರ(ಎನ್), ಮಳಗ, ಇಂಗಳಗಿ ಹಾಗೂ ಕುಂದನೂರ ಗ್ರಾಮದಲ್ಲಿ ಮಾಹಿತಿ ಆಂದೋಲನ ನಡೆಯಲಿದೆ ಎಂದು ಕೃಷಿ ಅಧಿಕಾರಿ ಸಯ್ಯದ್ ಪಟೇಲ್ ತಿಳಿಸಿದ್ದಾರೆ.
ನಗರ ಬಿಜೆಪಿ ಅಧ್ಯಕ್ಷ ಶಾಂತರೆಡ್ಡಿ ದಂಡಗುಲಕರ್, ಮಹಾದೇವ ತರನಳ್ಳಿ, ಎಸ್.ಐ. ಡಾಂಗೆ, ಶಶಿಕಾಂತ ಭರಣಿ, ಮಹ್ಮದ್ ಗೌಸೋದ್ದಿನ್, ರುಕುಂ ಪಟೇಲ್, ಹಣಮಂತ ತರನಳ್ಳಿ, ಶಾಂತಪ್ಪ ಪೂಜಾರಿ, ವಿಶ್ವನಾಥ ಮಾಪಣ್ಣ ಹಾಗೂ ಸುತ್ತಲಿನ ಗ್ರಾಮಗಳ ರೈತರಿದ್ದರು.
ದೋರನಹಳ್ಳಿ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಲು ಒತ್ತಾಯ
ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸುವಂತೆ ಕರವೇ ತಾಲೂಕು ಘಟಕದ ಅಧ್ಯಕ್ಷ ಭೀಮು ಶಾಖಾಪುರ ನೇತೃತ್ವದಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 3ನೇ ವಾರ್ಡ್ನ ಮರೆಮ್ಮ ದೇವಿ ದೇವಸ್ಥಾನದ ಹತ್ತಿರ ನಾಗನಕೇರಿ ಏರಿಯಾದಲ್ಲಿ ಪೈಪ್ಲೈನ್ ಮುಖಾಂತರ ಕುಡಿಯುವ ನೀರು ಕೊಳಚೆ ತುಂಬಿಕೊಂಡು ಬರುತ್ತಿದ್ದು, ಇದನ್ನು ಸರಿಪಡಿಸಬೇಕು. ಪ್ರತಿಯೊಂದು ಅಂಗನವಾಡಿ ಕೇಂದ್ರದ ಹತ್ತಿರ ಬೋರ್ವೆಲ್ ವ್ಯವಸ್ಥೆ ಮಾಡಬೇಕು. ಗ್ರಾಮದ ಸುತ್ತಮುತ್ತ ಇರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲವಾಗಿ ವಿದ್ಯಾರ್ಥಿ ವಸತಿ ನಿಲಯ ನಿರ್ಮಿಸಬೇಕು. ಶೌಚಾಲಯ ಸರಿಪಡಿಸಬೇಕು. ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದ್ದು ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯೆವಸ್ಥೆ ಮಾಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಕಾರ್ಯನಿರ್ವಾಹಕ ಅಧಿಕಾರಿಗಳು ತಕ್ಷಣವೇ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಬರುವ ದಿನಗಳಲ್ಲಿ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಶಾಖಾಪುರ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜಾಸಾಬ, ವಿಜಯಸಿಂಗ್ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ರಾಜೀವ್ಗಾಂಧಿ ಪುಣ್ಯಸ್ಮರಣೆ
ಯಾದಗಿರಿ: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿ. ರಾಜೀವಗಾಂಧಿಯವರ 23ನೇ ಪುಣ್ಯತಿಥಿಯನ್ನು ಬುಧವಾರ ಜಿಲ್ಲಾ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಆಚರಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಜೈನ ಹಾಗೂ ಯುವ ಅಧ್ಯಕ್ಷ ರಾಘವೇಂದ್ರ ಮಾನಸಗಲ ಅವರು ಮಾತನಾಡಿ, ನಮ್ಮ ದೇಶದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಪರಿಚಯಿಸಿದ್ದು ರಾಜೀವ ಗಾಂಧಿಯವರು. ಅಲ್ಲದೆ 18 ವರ್ಷದ ವಯಸ್ಸಿನವರಿಗೆ ಮತದಾನದ ಹಕ್ಕನ್ನು ತಂದದ್ದಲ್ಲದೆ ದೇಶದಲ್ಲಿ ಅನೇಕ ಜನಪರ ಯೋಜನೆಗಳಿಗೆ ಭದ್ರ ಬುನಾದಿ ಹಾಕಿದವರು. ಅಂತಹ ಮೇಧಾವಿಯ ಆದರ್ಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಆರಂಭದಲ್ಲಿ ರಾಜೀವ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು. ಮುಖಂಡರಾದ ರವಿ ಮಾಲಿಪಾಟೀಲ, ಶಿವರಾಜ ಜಕಾತಿ, ರಾಹುಲ ಅರಿಕೇರಿ, ಸೋಮಶೇಖರ ಮಸ್ಕನಳ್ಳಿ, ಶಿವು ಕೋಲಿವಾಡ, ವಿಶ್ವನಾಥ ಚಿಂತನಳ್ಳಿ, ಮಂಜುನಾಥ ದಾಸನಕೇರಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.