ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅರ್ಹತಾ ಪ್ರಮಾಣ ಪತ್ರಕ್ಕಾಗಿ ಅಭ್ಯರ್ಥಿಗಳ ಪರದಾಟ

Vishwanath S
Updated On : 22 May 2014, 11:07 am

ಕನ್ನಡಪ್ರಭ ವಾರ್ತೆ , ಲಿಂಗಸ್ಗೂರು , ಮೇ 21
ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ವಿಶೇಷ ಸ್ಥಾನಮಾನ ಕಲ್ಪಿಸಿದ ಕಲಂ 371(ಜೆ) ತಿದ್ದುಪಡಿ ಜಾರಿಯಾದ ಪ್ರಯುಕ್ತ ಅರ್ಹತಾ ಪ್ರಮಾಣ ಪತ್ರ ಪಡೆಯಲು ಅಭ್ಯರ್ಥಿಗಳು ಪರದಾಡುವಂತಾಗಿದೆ.
  ಹೈ-ಕ ಜಿಲ್ಲೆಗಳಲ್ಲಿ ಉನ್ನತ ವ್ಯಾಸಂಗ, ಬಡ್ತಿ ಸೇರಿದಂತೆ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ಪಡೆಯಲು ಬೇಕಾದ 371(ಜೆ) ಅರ್ಹತಾ ಪ್ರಮಾಣ ಪತ್ರ ಪಡೆಯಲು ಸಹಾಯಕ ಆಯುಕ್ತರು, ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳಿಗೆ ಅಲೆದಾಡುವುದು ಸಾಮಾನ್ಯವಾಗಿದೆ.
  ಅರ್ಹತಾ ಪ್ರಮಾಣ ಪತ್ರ ಪಡೆಯಲು ಅಭ್ಯರ್ಥಿಗಳು ಅರ್ಜಿಯೊಂದಿಗೆ ವಾಸಸ್ಥಳ ದೃಢೀಕರಣ ಪತ್ರ, ವ್ಯಾಸಂಗ ಪ್ರಮಾಣ ಪತ್ರ ಸೇರಿದಂತೆ 5 ಆಯ್ಕೆಗಳಲ್ಲಿ ಒಂದನ್ನು ನೀಡಬೇಕೆಂಬ ನಿಯಮದಂತೆ ಈ ಎಲ್ಲ ಪ್ರಮಾಣ ಪತ್ರಗಳನ್ನು ತ್ವರಿತವಾಗಿ ಪಡೆಯಲು ಪರದಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಅಭ್ಯರ್ಥಿಗಲು ಆರೋಪಿಸಿದ್ದಾರೆ.
ತಿಂಗಳುಗಟ್ಟಲೆ ಸಮಯ ವ್ಯಯ: 1- 10ನೇ ತರಗತಿವರೆಗೆ ವ್ಯಾಸಂಗ ಮಾಡಿದ ಪ್ರಮಾಣ ಪತ್ರ ಪಡೆಯುವುದು, ನಂತರ ಬಿಇಒ ದೃಢೀಕರಣ ಪತ್ರ ಪಡೆಯುವುದು, ಬಳಿಕ ತಹಸೀಲ್ದಾರರಿಗೆ ನಿವಾಸಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವುದು. ತದನಂತರ ಸಹಾಯಕ ಆಯುಕ್ತರಿಗೆ ಅರ್ಜಿ ಸಮೇತ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದ ಬಳಿಕ 371(ಜೆ) ಅರ್ಹತಾ ಪ್ರಮಾಣ ಪತ್ರ ವಿತರಿಸುವ ಪ್ರಕ್ರಿಯೆಗೆ ತಿಂಗಳುಗಟ್ಟಲೆ ಸಮಯ ವ್ಯಯಿಸಬೇಕಾಗುತ್ತದೆ. ಕಡಿಮೆ ಅವಧಿಯಲ್ಲಿ ತ್ವರಿತವಾಗಿ ಅರ್ಹತಾ ಪ್ರಮಾಣ ಪತ್ರ ಪಡೆಯುವುದೇ ದೊಡ್ಡ ಸಮಸ್ಯೆಯಾಗಿದೆ ಎಂಬುದು ಅಭ್ಯರ್ಥಿಗಳ ಅಂಬೋಣ.
ಪ್ರತ್ಯೇಕ ಕೌಂಟರ್ ತೆರೆಯಲು ಆಗ್ರಹ: ಸಹಾಯಕ ಆಯುಕ್ತರು, ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ದಿನನಿತ್ಯದ ಕಚೇರಿ ಕೆಲಸ ಕಾರ್ಯಗಳ ಒತ್ತಡದ ಮಧ್ಯೆಯೂ 371(ಜೆ) ಅರ್ಹತಾ ಪ್ರಮಾಣ ಪತ್ರ ವಿತರಿಸಲು ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಸ.ಆಯುಕ್ತರ ಸ್ಪಷ್ಟನೆ
ಹೈ-ಕ ಭಾಗದ ಜಿಲ್ಲೆಗಳ ಅಭ್ಯರ್ಥಿಗಳು ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಪಡೆಯಲು ಲಿಂಗಸ್ಗೂರು ಮತ್ತು ಸಿಂಧನೂರು ತಾಲೂಕಿನಿಂದ ಸುಮಾರು 3000ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಲೋಕಸಭೆ ಚುನಾವಣೆ ಕರ್ತವ್ಯ ನಿರ್ವಹಣೆಯಿಂದ ಅರ್ಹತಾ ಪ್ರಮಾಣ ಪತ್ರ ವಿತರಿಸುವಲ್ಲಿ ಸ್ವಲ್ಪ ವಿಳಂಬವಾಗಿದೆ. ಅರ್ಹತಾ ಪ್ರಮಾಣ ಪತ್ರ ವಿತರಿಸಲು ನಾಲ್ವರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯಿಂದ ಅಭ್ಯರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಅವಸರವಿರುವ ಅಭ್ಯರ್ಥಿಗಳಿಗೆ ಶೀಘ್ರ ವಿತರಣೆ ಮಾಡಲಾಗುತ್ತಿದೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಅರ್ಹತಾ ಪ್ರಮಾಣ ಪತ್ರ ಈಗಲೇ ಪಡೆದರೆ ಮುಂದೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಕೆಲವರು ಅನವಶ್ಯಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಅಂಥವರನ್ನು ಗುರುತಿಸಿ 10-15 ದಿವಸ ಕಾಲಾವಕಾಶ ನೀಡಲಾಗುತ್ತಿದೆ. ವಿಳಂಬವಾದ ಅರ್ಜಿಗಳನ್ನು 1 ವಾರದಲ್ಲಿ ಪೂರ್ಣಗೊಳಿಸಿ ಅರ್ಹತಾ ಪ್ರಮಾಣ ಪತ್ರ ವಿತರಿಸಲಾಗುವುದೆಂದು ಸಹಾಯಕ ಆಯುಕ್ತ ಟಿ.ಯೋಗೇಶ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement