ರಸ್ತೆ ದುರಸ್ತಿ ವಿಳಂಬ; ಆಕ್ರೋಶ
ಸಿಂಧನೂರು: ಹಳೆ ಬಜಾರ್ ರಸ್ತೆ ದುರಸ್ತಿಗೊಳಿಸುವಲ್ಲಿ ನಗರಸಭೆ ಆಡಳಿತ ಮಂಡಳಿ ವಿಳಂಬ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿಬರುತ್ತಿವೆ.
ಬಸವ ಸರ್ಕಲ್ನಿಂದ ಕಿತ್ತೂರು ಚೆನ್ನಮ್ಮ ಸರ್ಕಲ್ಗೆ ಹೊಂದಿಕೊಂಡಿರುವ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕಾಮಗಾರಿ ಹಲವು ದಿನಗಳಿಂದ ಆಮೆಗತಿಯಲ್ಲಿ ನಡೆಯುತ್ತಿದ್ದು ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿದೆ.
ಕಾಮಗಾರಿ ಪೂರ್ಣಗೊಳಿಸಲು 6 ತಿಂಗಳು ಕಾಲಾವಧಿಯಿದ್ದು, ಮೂರೇ ತಿಂಗಳಲ್ಲಿ ಮುಗಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸುವುದಾಗಿ ನಗರಸಭೆ ಅಧ್ಯಕ್ಷರು, ಆಡಳಿತ ಪಕ್ಷದ ಕೆಲ ಸದಸ್ಯರು ಭರವಸೆ ನೀಡಿದ್ದರು. ನಿಗದಿಗೊಳಿಸಿದ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದರೆ ಸಾಕು ಎನ್ನುವ ತೀರ್ಮಾನಕ್ಕೆ ಸಾರ್ವಜನಿಕರು ಬಂದಿದ್ದಾರೆ.
ನಾಮಫಲಕವಿಲ್ಲ: ಕಾಮಗಾರಿ ಮೊತ್ತ ಎಷ್ಟು, ಗುತ್ತಿಗೆದಾರರು ಯಾರು, ಕಾಮಗಾರಿ ಆರಂಭವಾಗುವ ಮತ್ತು ಕೊನೆಗೊಳ್ಳುವ ಅವಧಿ ಸೇರಿದಂತೆ ಇನ್ನಿತರೆ ಮಾಹಿತಿಯುಳ್ಳ ನಾಮಫಲಕ ಹಾಕದೇ ರಸ್ತೆ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳು ಮೂಡಿವೆ. ಕಾಮಗಾರಿ ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಹೋರಾಟ ಸಮಿತಿ ಮನವಿ ಮಾಡುತ್ತಿದ್ದರೂ ನಿರ್ಲಕ್ಷ್ಯ ತಾಳಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಗುತ್ತೇದಾರರು ಯಾರು?: ಕಾಮಗಾರಿ ಹೊಣೆ ಹೊತ್ತಿರುವ ಗುತ್ತೇದಾರರು ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ನಗರಸಭೆಯ ಸದಸ್ಯರೊಬ್ಬರು ಒಳಗೊಳಗೆ ತಾವೇ ಕಾಮಗಾರಿ ನಿರ್ವಹಣೆಯ ಹೊಣೆ ಹೊತ್ತು ಬೇರೊಬ್ಬ ಗುತ್ತೇದಾರರ ಹೆಸರನ್ನು ಮುಂದು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ರಸ್ತೆ ಕಾಮಗಾರಿ ಮತ್ತಷ್ಟು ವಿಳಂಬವಾಗುತ್ತಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ.
ಹುನ್ನಾರ: ಕಾಮಗಾರಿ ವಿಳಂಬ ಮಾಡುತ್ತಿರುವುದರ ಹಿಂದೆ ಹೆಚ್ಚುವರಿ ಖರ್ಚು ತೋರಿಸಿ ಇನ್ನಷ್ಟು ಹೆಚ್ಚಿನ ಬಿಲ್ ಮಾಡಿಸಿಕೊಳ್ಳುವ ಹುನ್ನಾರ ನಡೆದಿದೆ ಎಂದೂ ಹೇಳಲಾಗುತ್ತಿದೆ. ಕಾಮಗಾರಿ ನಡೆಸುತ್ತಿರುವ ಮೂಲ ಗುತ್ತಿಗೆದಾರರು ಯಾರು, ಯಾಕೆ ಯಾರ್ಯಾರದೋ ಹೆಸರನ್ನು ತೇಲಿ ಬಿಡಲಾಗಿದೆ ಎಂಬುದೂ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಸಣ್ಣ ಮಳೆಯಾದರೂ ಸಾಕು ಮಳೆ ನೀರು ಉಕ್ಕಿ ಬರುತ್ತದೆ. ಚರಂಡಿ ನೀರಿನ ರಭಸಕ್ಕೆ ಗುಣಮಟ್ಟದ ರಸ್ತೆ ಕೊಚ್ಚಿಹೋಗುವುದರಲ್ಲಿ ಅನುಮಾನವಿಲ್ಲ. ಸಮರ್ಪಕವಾಗಿ ಚರಂಡಿ ನೀರು ರಸ್ತೆಗೆ ಹರಿಯದಂತೆ ಮೊದಲು ವ್ಯವಸ್ಥೆ ಮಾಡಬೇಕಾದ ನಗರಸಭೆ ಆಡಳಿತ ಮಂಡಳಿ ರಸ್ತೆ ದುರಸ್ತಿಗೆ ಮುಂದಾಗಿರುವುದು ನಿಜಕ್ಕೂ ಆಶ್ಚರ್ಯ. ಒಂದು ವೇಳೆ ರಸ್ತೆ ನಿರ್ಮಿಸಿದ ನಂತರ ಮಳೆಗಾಲದಲ್ಲಿ ಚರಂಡಿ ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋದರೂ ಅನುಮಾನವಿಲ್ಲ.
ರಸ್ತೆಗಳ ದುರವಸ್ಥೆ: ನಗರದ ಮುಖ್ಯರಸ್ತೆಗಳು ಮತ್ತು ವಾರ್ಡ್ನ ರಸ್ತೆಗಳೂ ಹದಗೆಟ್ಟಿವೆ. ಅಭಿವೃದ್ಧಿ ಹಣ ಮಾತ್ರ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಜೇಬು ಸೇರುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರ ಮನೆಗೆ ಹೋಗುವ ರಸ್ತೆ ಬದಿಯ ಚರಂಡಿಯಲ್ಲೇ ಮಳೆ ನೀರು ತುಂಬಿ ಹರಿದರೆ ಇನ್ನು ಜನಸಾಮಾನ್ಯರ ಜೋಪಡಿಗಳು ಮುಳುಗುವುದಷ್ಟೇ ಬಾಕಿ!