ಸಾವಯವ ಕೃಷಿ, ಜೈವಿಕ ಇಂಧನಕ್ಕೆ ಆದ್ಯತೆ ನೀಡಿ
ಮುದಗಲ್: ರೈತರು ಸಾವಯವ ಕೃಷಿ ಮತ್ತು ಜೈವಿಕ ಇಂಧನಕ್ಕೆ ಆದ್ಯತೆ ನೀಡುವ ಮೂಲಕ ಮುಂದೆ ಆಗಬಹುದಾದ ಗೊಬ್ಬರ ಹಾಗೂ ಇಂಧನದ ಕೊರತೆಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕೆಂದು ಜಗದ್ಗುರು ಸಂಗನಬಸವ ಸ್ವಾಮೀಜಿ ಹೇಳಿದರು.
ಸಮೀಪದ ಅಂಕಲಿಮಠದಲ್ಲಿ ಜಾತ್ರಾಮಹೋತ್ಸವ ಹಾಗೂ ಮಹಾ ರಥೋತ್ಸವ ನಿಮಿತ್ತ ಬುಧವಾರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ರೈತರು ಜಾನುವಾರುಗಳ ಸಾಕಣೆಯನ್ನು ಕಡಿಮೆ ಮಾಡಿದ್ದಾರೆ. ಜಮೀನಿನಲ್ಲಿಯು ಉಳಿಮೆಗೂ ಯಂತ್ರ ಬಳಕೆ ಮಾಡುತ್ತಿರುವುದರಿಂದ ಭೂಮಿ ಬರಡಾಗುತ್ತಿವೆ. ಸಾವಯವ ಕೃಷಿ ಅಳವಡಿಸಿಕೊಳ್ಳುವ ಮೂಲಕ ಜಾನುವಾರು ರಕ್ಷಣೆ ಜತೆಗೆ ಭೂಫಲವತ್ತತೆ ಕಾಯ್ದುಕೊಂಡು ಕೃಷಿ ಉತ್ಪನ್ನಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದರು.
ಜೈವಿಕ ಇಂಧನ ಉತ್ಪಾದಿಸಿ: ರಾಜ್ಯ ಮತ್ತು ದೇಶದಲ್ಲಿ ವಾಹನಗಳ ಹೆಚ್ಚಳದಿಂದಾಗಿ ಇಂಧನದ ಕೊರತೆಯನ್ನು ಮುಂದಿನ ದಿನಗಳಲ್ಲಿ ಕಾಣುವಂತಾಗುತ್ತದೆ. ಆದ್ದರಿಂದ ಕೃಷಿಯಿಂದ ಜೈವಿಕ ಇಂಧನವನ್ನು ಉತ್ಪಾದನೆ ಮಾಡುವ ಮೂಲಕ ಇಂಧನ ಕೊರತೆ ನೀಗಿಸಿಕೊಳ್ಳಬಹುದೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೀಠಾಧಿಪತಿ ವೀರಭದ್ರ ಸ್ವಾಮೀಜಿ, ಕಾಯಕದಿಂದ ಭಗವಂತನನ್ನು ಕಾಣಬಹುದು. ಅಣ್ಣ ಬಸವಣ್ಣನ ನುಡಿಯಂತೆ ಕಾಯಕವೇ ಕೈಲಾಸ ಎನ್ನುವುದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾಯಕದಲ್ಲಿ ಸಿಗುವ ತೃಪ್ತಿ ಮತ್ತಾವುದರಲ್ಲೂ ಇಲ್ಲ. ಶರಣ ಸಂತರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ಮುಖ್ಯ ಅತಿಥಿಗಳಾಗಿ ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವ ಅಮರೇಗೌಡ ಭಯ್ಯಾಪೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗುರುಗುಂಟಾ ಸದಾನಂದ ಶಿವಾಚಾರ್ಯರು, ಯರಡೋಣಿ ಮುರುಘೇಂದ್ರ ಶರಣರು, ಲಿಂಗಸ್ಗೂರು ಸಿದ್ದಲಿಂಗ ಸ್ವಾಮೀಜಿ, ಹುನಕುಂಟಿ ಶರಣಯ್ಯ ತಾತನವರು ಹರಗುರು ಚರಮೂರ್ತಿಗಳು ಇದ್ದರು. ಮುಖಂಡರಾದ ಲಿಂಗರಾಜ ಸಿಂಧನೂರ, ಎಪಿಎಂಸಿ ಅಧ್ಯಕ್ಷ ಚನ್ನವೀರಪ್ಪಗೌಡ ಪಾಗದ, ಸೂಗಣ್ಣ ಬಾಳೇಕಾಯಿ ಮುಂತಾದವರಿದ್ದರು. ರಾಜೇಶ್ವರಿ ಮಸ್ಕಿ ಹಾಗೂ ಮಹಾಂತೇಶ ನಿರ್ವಹಿಸಿದರು.