ಕೃವಿವಿ ಹಂಗಾಮಿ ನೌಕರರ ಹೋರಾಟಕ್ಕೆ ತೆರೆ
ಕ.ಪ್ರ. ವಾರ್ತೆ , ರಾಯಚೂರು , ಮೇ 22
ಹೋರಾಟನಿರತ ಕೃಷಿ ವಿಶ್ವವಿದ್ಯಾಲಯ ಹಂಗಾಮಿ ನೌಕರರಿಗೆ ಸೇವಾ ಭದ್ರತೆ ಹಾಗೂ ಸೇವಾ ಸೌಲಭ್ಯ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಡಳಿತ ಸಮ್ಮತಿಸುವ ಮೂಲಕ ಕಳೆದ ಏ.23ರಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಕೃಷಿ ವಿವಿ ಹಂಗಾಮಿ ನೌಕರರು ನಡೆಸುತ್ತಿದ್ದ ಧರಣಿ ಮತ್ತು ಉಪವಾಸ ಸತ್ಯಾಗ್ರಹಕ್ಕೆ ತೆರೆ ಬಿದ್ದಿದೆ.
ನಗರದಲ್ಲಿ ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅಧ್ಯಕ್ಷತೆಯನ್ನು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಜನಗೌಡರ್, ಹಂಗಾಮಿ ನೌಕರರ ಸಂಘದ ಗೌರವಾಧ್ಯಕ್ಷ ಆರ್.ಮಾನಸಯ್ಯ ಮತ್ತಿತರೆ ಪದಾಧಿಕಾರಿಗಳ ಸಂಧಾನ ಸಭೆ ನಡೆದು ವಿವಿ ಆಡಳಿತ ಬೇಡಿಕೆ ಈಡೇರಿಕೆಗೆ ಒಪ್ಪಿಗೆ ಸೂಚಿಸುವ ಮೂಲಕ ಹೋರಾಟಕ್ಕೆ ತೆರೆ ಎಳೆಯಲು ನಿರ್ಧರಿಸಲಾಗಿತ್ತು. ಅದರಂತೆ ಗುರುವಾರ ಬೆಳಗ್ಗೆ ಕೃಷಿ ವಿವಿ ಆಡಳಿತವು ಲಿಖಿತ ಭರವಸೆ ನೀಡಿದ ನಂತರ ಹೋರಾಟ ಹಿಂಪ ಡೆಯಲಾಯಿತು.
ಸೇವಾನುಭವಕ್ಕೆ ಆದ್ಯತೆ: ಸಂಧಾನ ಸಭೆಯಲ್ಲಿ ವಿವಿ ಆಡಳಿತವು ಹೋರಾಟನಿರತ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹೊರಗುತ್ತಿಗೆ ಟೆಂಡರ್ ಪ್ರಕ್ರಿಯೆಯ ಮೊದಲು ಗುತ್ತಿಗೆದಾರರಿಗೆ ಅನುಭವ ಹಾಗೂ ನೈಪುಣ್ಯತೆ ಹೊಂದಿದ ಕಾರ್ಮಿಕರಿಗೆ ಗುತ್ತಿಗೆ ಆಧಾರದ ನೇಮಕಾತಿ ವೇಳೆ ಆದ್ಯತೆ ನೀಡಬೇಕೆಂದು ನಿಬಂಧನೆ ವಿಧಿಸಲು ಸಮ್ಮತಿಸಿತು.
ಅದೇ ರೀತಿ ಕಾರ್ಮಿಕರಿಗೆ ಸೇವಾ ಸೌಲಭ್ಯಗಳನ್ನು ಒದಗಿಸಲೂ ಸಭೆ ಒಪ್ಪಿದ್ದು, ಅದರಂತೆ ಈಗಾಗಲೇ ವಿವಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುನಿಸ್ವಾಮಿ ಎಂಬುವವರಿಗೆ ವಿವಿ ಆಡಳಿತ ಸೇವಾನುಭವದ ಆಧಾರದಲ್ಲಿ ನೀಡಿದ ಸೇವಾನುಭವ ಪ್ರಮಾಣ ಪತ್ರವನ್ನು ಎಲ್ಲ ಕಾರ್ಮಿಕರಿಗೆ ಒದಗಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿ ವಿವಿಯಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ಒದಗಿಸಲು ಸಮ್ಮತಿಸಿತು.
ವೇತನ ಪಾವತಿಗೆ ಸ್ಪಂದನೆ: ಕಳೆದೊಂದು ತಿಂಗಳಿಂದ ಮುಷ್ಕರದಲ್ಲಿ ಪಾಲ್ಗೊಂಡಿರುವ ಕಾರ್ಮಿಕರಿಗೆ ಒಂದು ತಿಂಗಳ ವೇತನ ನೀಡಬೇಕೆಂಬ ಬಗ್ಗೆ ಕಾರ್ಮಿಕರು ಸಭೆಯಲ್ಲಿ ವಿಷಯ ಮಂಡಿಸಿದಾಗ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹಾಗೂ ಕೃಷಿ ವಿವಿ ಅಧಿಕಾರಿಗಳು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸದೇ ವೇತನ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಸಂಘದ ಗೌರವಾಧ್ಯಕ್ಷ ಆರ್.ಮಾನಸಯ್ಯ ಮತ್ತಿತರರು ತಮ್ಮ ಬಳಿ ಈ ಕುರಿತು ಸರ್ಕಾರದ ಆದೇಶಗಳ ಪ್ರತಿಗಳಿದ್ದು, ಅದನ್ನು ವಿವಿ ಆಡಳಿತಕ್ಕೆ ಸಲ್ಲಿಸಲಾಗುತ್ತದೆ. ಆನಂತರ ದಾಖಲೆ ಪರಿಶೀಲಿಸಿ ಸರ್ಕಾರಕ್ಕೆ ವೇತನ ಪಾವತಿಗೆ ಸಂಬಂಧಿಸಿ ಪ್ರಸ್ತಾವನೆ ಕಳಿಸುವಂತೆ ಒತ್ತಾಯಿಸಿದಾಗ ಅದಕ್ಕೆ ಆಡಳಿತ ಒಪ್ಪಿಗೆ ಸೂಚಿಸಿತು.
ಅದೇ ರೀತಿ ಸದ್ಯ ಹೋರಾಟದಲ್ಲಿ ತೊಡಗಿರುವ ಕಾರ್ಮಿಕರ ಸಂಪೂರ್ಣ ವಿವರಗಳಿದ್ದು ಅವುಗಳನ್ನು ವಿವಿ ಆಡಳಿತಕ್ಕೆ ಒದಗಿಸಲಾಗುತ್ತದೆ. ಮುಂದೆ ಹೊರಗುತ್ತಿಗೆ ಟೆಂಡರ್ ಪಡೆಯುವವರಿಗೆ ಅಂಥ ಪಟ್ಟಿ ಹಸ್ತಾಂತರಿಸಿ ಮುಂದೆ ನೇಮಕಾತಿಗೆ ಪೂರಕ ಕ್ರಮ ಕೈಗೊಳ್ಳುವಂತೆ ಸಂಘದಿಂದ ಒತ್ತಾಯಿಸಲಾಯಿತು. ಸಭೆಯಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿಗಳು, ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.