ಹಳ್ಳಿ ಮಂದಿ ಹೈರಾಣ ಕೇಳೋರಿಲ್ಲ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 22
ವೈಶಾಖದ ದಿನಗಳಲ್ಲಿ ಜಿಲ್ಲಾದ್ಯಂತ ಬಿಸಿಲು ತನ್ನ ಪ್ರತಾಪ ತೋರುತ್ತಿದೆ. ಈ ವೇಳೆ ಗ್ರಾಮೀಣರ ದಾಹ ತೀರಿಸಬೇಕಿದ್ದ ಕುಡಿಯುವ ನೀರು ಯೋಜನೆಗಳು ನಿಷ್ಕ್ರಿಯಗೊಂಡಿವೆ. ಹೀಗಾಗಿ ಜಿಲ್ಲೆಯ ಜನ- ಜಾನುವಾರು ನೀರಿಗಾಗಿ ಹಾಹಾಕಾರ ಪಡುವ ನೋಟ ಸಾಮಾನ್ಯವಾಗಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕೋಟ್ಯಂತರ ರು. ಖರ್ಚು ಮಾಡಿ ಕೈಗೆತ್ತಿಕೊಳ್ಳಲಾಗಿರುವ ಕೊಳವೆ ನೀರು ಸರಬರಾಜು (ಪಿಡಬ್ಲೂಎಸ್) ಹಾಗೂ ಕಿರು ನೀರು ಸರಬರಾಜು (ಎಂಡಬ್ಲ್ಯೂಎಸ್) ಯೋಜನೆಗಳಲ್ಲಿ 180ಕ್ಕೂ ಅಧಿಕ ಯೋಜನೆಗಳು ನಿಷ್ಕ್ರಿಯಗೊಂಡಿವೆ. ಇದರಿಂದಾಗಿ ಗ್ರಾಮೀಣ ಪ್ರದೆಶದಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ.
ಯೋಜನೆಗಳ ಅಸಮರ್ಪಕ ನಿರ್ವಹಣೆಯೇ ಅವು ನಿಷ್ಕ್ರಿಯಗೊಳ್ಳಲು ಪ್ರಮುಖ ಕಾರಣವಾಗಿದ್ದು, ಕೋಟ್ಯಂತರ ರು. ಸಾರ್ವಜನಿಕ ಹಣ ಪೋಲಾದಂತಾಗಿದೆ. ಈ ಎಲ್ಲ ಯೋಜನೆಗಳನ್ನು ಅಂತರ್ಜಲ ಬಳಸಿಕೊಂಡೇ ರೂಪಿಸಲಾಗಿತ್ತು. ಆದರೆ ಸಮರ್ಪಕ ನಿರ್ವಹಣೆ ಕೊರತೆಯ ಜೊತೆಗೆ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಅವು ಉಪಯೋಗಕ್ಕೆ ಬಾರದಂತಾಗಿವೆ.
73 ಯೋಜನೆ ನಿಷ್ಕ್ರಿಯ: ಜಿಲ್ಲೆಯಲ್ಲಿ ಒಟ್ಟು 1,056 ಕೊಳವೆ ನೀರು ಸರಬರಾಜು ಯೋಜನೆಗಳಿವೆ. ಅವುಗಳಲ್ಲಿ 983 ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದರೆ. ಉಳಿದ 73 ಯೋಜನೆಗಳು ನಿಷ್ಕ್ರಿಯೆಗೊಂಡಿವೆ. ನಿಷ್ಕ್ರೀಯಗೊಂಡಿರುವ ಯೋಜನೆಗಳಲ್ಲಿ ಅತೀ ಹೆಚ್ಚಿನ ಯೋಜನೆಗಳು ಆಳಂದ ತಾಲೂಕಿನಲ್ಲಿವೆ. ಅಧಿಕೃತ ಮೂಲಗಳ ಪ್ರಕಾರ- ಆಳಂದ ತಾಲೂಕಿನಲ್ಲಿ ಒಟ್ಟು 210 ಪಿಡಬ್ಲೂಎಸ್ ಯೋಜನೆಗಳಿವೆ. ಅವುಗಳಲ್ಲಿ 150 ಕಾರ್ಯನಿರ್ವಹಿಸುತ್ತಿದ್ದರೆ. ಉಳಿದವುಗಳಿಂದ ಕುಡಿಯುವ ನೀರು ದೊರೆಯುತ್ತಿಲ್ಲ.
ಅದೇ ರೀತಿ ಅಫಜಲ್ಪುರ ತಾಲೂಕಿನಲ್ಲಿ 113 ಯೋಜನೆಗಳಿದ್ದು, ಎಲ್ಲವೂ ಕಾರ್ಯನಿರ್ವಹಿಸುತ್ತಿವೆ. ಚಿಂಚೋಳಿ ತಾಲೂಕಿನಲ್ಲಿ 123 ಯೋಜನೆಗಳಿದ್ದು, ಅವುಗಳಲ್ಲಿ 121 ಕೆಲಸ ಮಾಡುತ್ತಿದ್ದು, ಉಳಿದೆರಡು ಯೋಜನೆಗಳು ನಿಷ್ಕ್ರಿಯಗೊಂಡಿವೆ. ಅಲ್ಲದೇ ಚಿತ್ತಾಪುರ ಉಪ ವಿಭಾಗದಲ್ಲಿರುವ 81 ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದರೆ, ಇದೇ ತಾಲೂಕಿನ ಕಾಳಗಿ ವಿಭಾಗದಲ್ಲಿ 43 ಯೋಜನೆಗಳ ಪೈಕಿ 36 ಯೋಜನೆಗಳು ಕೆಲಸ ಮಾಡುತ್ತಿದ್ದು, ಉಳಿದ 7 ಯೋಜನೆಗಳು ಬಂದ್ ಆಗಿವೆ. ಗುಲ್ಬರ್ಗ ತಾಲೂಕಿನ ಪಿಡಬ್ಲೂಎಸ್ ಕುಡಿಯುವ ನೀರಿನ ಯೋಜನೆಗಳ ಸಂಖ್ಯೆ 155. ಅವುಗಳಲ್ಲಿ 138 ಕಾರ್ಯನಿರ್ವಹಿಸುತ್ತಿದ್ದು, ಉಳಿದ 17 ಯೋಜನೆಗಳು ಕೆಲಸಕ್ಕೆ ಬಾರದಂತಾಗಿವೆ. ಜೇವರ್ಗಿಯಲ್ಲಿರುವ ಎಲ್ಲ 142 ಯೋಜನೆಗಳು ಕೆಲಸ ಮಾಡುತ್ತಿದ್ದರೆ, ಸೇಡಂ ತಾಲೂಕಿನಲ್ಲಿ 159 ಯೋಜನೆಗಳ ಪೈಕಿ 156 ಕೆಲಸ ಮಾಡುತ್ತಿದ್ದು, ಮೂರು ಯೋಜನೆಗಳು ಸ್ಥಗಿತಗೊಂಡಿವೆ.
ಕಿರು ನೀರು ಸರಬರಾಜು: ಜಿಲ್ಲೆಯಲ್ಲಿ ಒಟ್ಟು 1,357 ಕಿರು ನೀರು ಸರಬರಾಜು ಯೋಜನೆ (ಎಂಡಬ್ಲೂಎಸ್) ಗಳಿದ್ದು, ಅವುಗಳಲ್ಲಿ 1,250 ಕಾರ್ಯನಿರ್ವಹಿಸುತ್ತಿವೆ. ಆದರೆ, ಉಳಿದ 107 ಯೋಜನೆಗಳು ಅನೇಕ ವರ್ಷಗಳಿಂದ ನಿಷ್ಕ್ರಿಯಗೊಂಡಿವೆ. ಹೆಚ್ಚಿನ ಸಮಸ್ಯೆಯಿರುವ ಗುಲ್ಬರ್ಗ ತಾಲೂಕಿನಲ್ಲಿ ಒಟ್ಟು 250 ಎಂಡಬ್ಲೂಎಸ್ ಯೋಜನೆಗಳಿದ್ದು, ಅವುಗಳಲ್ಲಿ 209 ಕೆಲಸ ಮಾಡುತ್ತಿವೆ. ಉಳಿದ 41 ಯೋಜನೆಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರು ದೊರೆಯುತ್ತಿಲ್ಲ. ಅದೇ ರೀತಿ ಆಳಂದ ತಾಲೂಕಿನ 322 ಯೋಜನೆಗಳ ಪೈಕಿ 287 ಕೆಲಸ ಮಾಡುತ್ತಿದ್ದು, 35 ನಿಷ್ಕ್ರೀಯಗೊಂಡಿವೆ.
ಅಫಜಲ್ಪುರ ತಾಲೂಕಿನಲ್ಲಿ 202 ಯೋಜನೆಗಳಿದ್ದು, ಅವುಗಳಲ್ಲಿ 183 ಕಾರ್ಯನಿರ್ವಹಿಸುತ್ತಿದ್ದರೆ, 19 ಕೆಲಸಕ್ಕೆ ಬಾರದಂತಾಗಿವೆ. ಚಿಂಚೋಳಿ ತಾಲೂಕಿನ 195 ಪೈಕಿ 193 ಕೆಲಸ ಮಾಡುತ್ತಿದ್ದು, ಎರಡು ಯೋಜನೆಗಳು ಕೆಲಸ ಮಾಡುತ್ತಿಲ್ಲ. ಚಿತ್ತಾಪುರ ಉಪ ವಿಭಾಗದಲ್ಲಿರುವ ಎಲ್ಲ 101 ಯೋಜನೆಗಳು ಕೆಲಸ ಮಾಡುತ್ತಿದ್ದರೆ, ಇದೇ ತಾಲೂಕಿನ ಕಾಳಗಿ ಉಪ ವಿಭಾಗದಲ್ಲಿರುವ 43 ಯೋಜನೆಗಳ ಪೈಕಿ 36 ಕೆಲಸ ಮಾಡುತ್ತಿದ್ದು, 7 ಯೋಜನೆಗಳು ನಿಷ್ಕ್ರಿಯಗೊಂಡಿವೆ. ಜೇವರ್ಗಿ ತಾಲೂಕಿನ 139 ಯೋಜನೆಗಳ ಪೈಕಿ 137 ಕೆಲಸ ಮಾಡುತ್ತಿದ್ದು, ಉಳಿದೆರಡು ಯೋಜನೆಗಳು ಕೆಲಸಕ್ಕೆ ಬರುತ್ತಿಲ್ಲ. ಸೇಡಂ ತಾಲೂಕಿನ 105ರ ಪೈಕಿ 104 ಕೆಲಸ ಮಾಡುತ್ತಿದ್ದು, ಒಂದು ಯೋಜನೆ ನಿಷ್ಕ್ರಯಗೊಂಡಿದೆ.
ಕೊಳವೆ ಬಾವಿ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾದಾಗ ಅನೇಕ ಕಡೆ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 5,717 ಕೊಳವೆ ಬಾವಿಗಳನ್ನು ಕೊರೆದಿದ್ದು, ಅವುಗಳಲ್ಲಿ 4,259 ಕಾರ್ಯನಿರ್ವಹಿಸುತ್ತಿವೆ. ಉಳಿದ 1,458 ಬಾವಿಗಳು ನಿಷ್ಕ್ರಿಯಗೊಂಡಿವೆ. ಜಿಲ್ಲೆಯಲ್ಲಿ ಪ್ರತಿ ವರ್ಷವೂ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಬಿಸಿಲಿನ ಪ್ರಖರತೆ ಹೆಚ್ಚಾಗುತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಕೊಡ ನೀರಿಗಾಗಿ ಪರದಾಡುವ ದೃಶ್ಯ ಸರ್ವೆ ಸಾಮಾನ್ಯ. ಇದರ ಜೊತೆಗೆ ಕೋಟ್ಯಂತರ ಹಣ ಖರ್ಚು ಮಾಡಿ ಕೈಗೆತ್ತಿಕೊಳ್ಳಲಾಗಿರುವ ಕುಡಿಯುವ ನೀರಿನ ಯೋಜನೆಗಳು ನಿಷ್ಕ್ರಿಯಗೊಂಡ ನಂತರ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.
ನೀರು ಸಂಗ್ರಹಿಸುವುದೇ ಕಾಯಕ: ಕೆಲವು ಹಳ್ಳಿಗಳಲ್ಲಂತೂ ಬೇಸಿಗೆ ಅವಧಿಯಲ್ಲಿ ದಿನಪೂರ್ತಿ ನೀರು ತರುವುದೇ ಒಂದು ಉದ್ಯೋಗವಾಗಿ ಬಿಟ್ಟಿದೆ. ಇದಕ್ಕೆ ಹೊಣೆ ಯಾರು, ಪರಿಹಾರವೇ ಇಲ್ಲವೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ನೀರು ಸರಬರಾಜು ಹೊಣೆ ಹೊತ್ತಿರುವ ಜಿಪಂ ಅಧಿಕಾರಿಗಳು ಇತ್ತ ಗಮನ ಹರಿಸುವರೇ ಎಂದು ಜಿಲ್ಲೆಯ ಗ್ರಾಮೀಣ ಜನತೆ ಕಾಯುತ್ತಿದ್ದಾರೆ.