ಈ ಬಾರಿ ಗುರುಮಠಕಲ್‌ಗೆ ಸಿಕ್ಕೀತೆ ಜಿಪಂ ಅಧ್ಯಕ್ಷ ಸ್ಥಾನ?
ಕ.ಪ್ರ. ವಾರ್ತೆ ಗುರುಮಠಕಲ್ ಮೇ 23
ಯಾದಗಿರಿ ಜಿಲ್ಲಾ ಪಂಚಾಯತಿಯ ಕೊನೆಯ ಅವಧಿಗೆ ಇದೀಗ ಸರ್ಕಾರ ಮೀಸಲಾತಿ ನಿಗದಿಗೊಳಿಸಿದೆ. ಇದೇ ತಿಂಗಳ 28ರಂದು ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಆದರೆ ಇದೀಗ ನಡೆಯಲಿರುವ ಚುನಾವಣೆಯಲ್ಲಿ ಗುರುಮಠಕಲ್ ಮತಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನ ದೊರೆಯುವುದೇ ಎನ್ನುವ ಚರ್ಚೆಗಳು ಮಾತ್ರ ಬಿಸಿಬಿಸಿಯಾಗಿ ನಡೆಯುತ್ತಿವೆ.
ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತಿಯ ಕೊನೆಯ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ ಮಾಡಿದೆ ಬೆನ್ನ ಹಿಂದೆಯೇ, ಜಿಲ್ಲಾ ಪಂಚಾಯತಿಯ ರಾಜಕೀಯ ಚಟುವಟಿಕೆ ಗರಿಗೆದರಿ ಅಧ್ಯಕ್ಷ ಸ್ಥಾನಕ್ಕೆ ಎಲ್ಲಿಲ್ಲದ ಪ್ರಯತ್ನಗಳು ಶುರುವಾಗಿವೆ.
ರಾಜ್ಯದ 30ನೇ ಜಿಲ್ಲೆಯಾದ ನಂತರ ರಚಿತವಾದ ಜಿಲ್ಲಾ ಪಂಚಾಯತಿಯಲ್ಲಿ 15 ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದ್ದು, ಕಳೆದ ಎರಡು ಅವಧಿಗಳಲ್ಲಿಯೂ ಅಧಿಕಾರದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿತ್ತು. ಅದರಂತೆ ಇದೀಗ ನಡೆಯಲಿರುವ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತ ಹೊಂದಿರುವ ಹಿನ್ನೆಲ್ಲೆಯಲ್ಲಿ ಮತ್ತೆ ಅಧಿಕಾರವನ್ನು ತನ್ನದಾಗಿಸಿಕೊಳ್ಳಲಿದೆ. ಅದರೆ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ತೀವ್ರ ಪೈಪೋಟಿ ಏರ್ಪಟ್ಟಿದೆ.
ಸೈದಾಪುರಕ್ಕೆ ಅಧ್ಯಕ್ಷ ಸ್ಥಾನ: 15 ಜನ ಸದಸ್ಯರಲ್ಲಿ ಸುರಪುರ ವ್ಯಾಪ್ತಿಯ ಕೆಂಭಾವಿ ಜಿಪಂ ಸದಸ್ಯ ಸಿದ್ದನಗೌಡ ಪಾಟಿಲ್ ಹಾಗೂ ಬಳಿಚಕ್ರದ ಜಿಪಂ ಸದಸ್ಯ ಮಲ್ಲಮ್ಮ ಇವರುಗಳಿಗೆ ಮಾತ್ರ ಅಧಿಕಾರ ದೊರೆತಿರಲಿಲ್ಲ. ಈ ಬಾರಿ ಇವರಿಗೆ ಅಧಿಕಾರ ನೀಡಬೇಕು ಎನ್ನುವುದು ಎಲ್ಲರ ಮಾತಾದರೂ ಇದು ಕೊನೆಯ ಅವಧಿಯಾಗಿದ್ದು ತಮ್ಮ ಕಟ್ಟಾ ಬೆಂಬಲಿಗ, ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಕಾರಣರಾದ ಸೈದಾಪುರದ ಶ್ರೇಣಿಕ ಕುಮಾರ ದೋಖಾ ಅವರಿಗೆ ಅಧ್ಯಕ್ಷರನ್ನಾಗಿ ಮಾಡುವ ಉದ್ದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಹೆಚ್ಚಿದ ಪೈಪೋಟಿ: ಇದೀಗ ನಡೆಯಲಿರುವ ಅಧ್ಯಕ್ಷ ಸ್ಥಾನದ ಚುನಾವಣೆ ಕೊನೆಯ ಅವಧಿಯದ್ದಾಗಿರುವ
ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳಾ ಸದಸ್ಯರಿಂದ ಪೈಪೋಟಿ ನಡೆದಿದೆ. ಪ್ರಮುಖವಾಗಿ ಸುರಪೂರ ತಾಲೂಕಿನ ಕೆಂಭಾವಿಯ ಸದಸ್ಯ ಸಿದ್ದನಗೌಡ ಹಾಗೂ ಗುರುಮಠಕಲ್ ಕ್ಷೇತ್ರದ ಸೈದಾಪುರದ ಶ್ರೇಣಿಕ ಕುಮಾರ ದೋಖಾ ನಡುವೆ ತೀವ್ರ ಪೈಪೋಟಿ ಉಂಟಾಗುವ ಸಾಧ್ಯತೆ ಇದೆ. ಅಧ್ಯಕ್ಷ ಸ್ಥಾನಕ್ಕಾಗಿ ತೆರೆಮರೆಯ ತೀವ್ರ ಪ್ರಯತ್ನಗಳು ನಡೆದಿವೆ.
ಖರ್ಗೆ ನಿರ್ಣಯ ಅಂತಿಮ: ಜಿಪಂ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನವನ್ನು ತಮ್ಮ ಕ್ಷೇತ್ರಕ್ಕೆ ನೀಡಬೇಕೆಂದು ಕೆಂಭಾವಿಯ ಸಿದ್ಧನಗೌಡ ಪರವಾಗಿ ಶಾಸಕ ರಾಜಾವೆಂಕಟಪ್ಪ ನಾಯಕ ಬ್ಯಾಟಿಂಗ್ ಮಾಡಿದ್ದಾರೆ. ಗುರುಮಠಕಲ್‌ನ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಾಬುರಾವ ಅವರು ತಮ್ಮ ಕ್ಷೇತ್ರದ ಸದಸ್ಯ ದೋಖಾ ಅವರ ಪರವಾಗಿ ಬ್ಯಾಟಿಂಗ್ ಮಾಡಿ ತಮ್ಮ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ಮಾಡಲು ಶತಾಯಗತಾಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅದರೆ ಅಧ್ಯಕ್ಷರ ಆಯ್ಕೆಯ ಚೆಂಡು ಖರ್ಗೆಯವರ ಅಂಗಳದಲ್ಲೆ ಇರುವ ಕಾರಣದಿಂದಾಗಿ ಇಲ್ಲಿ ಖರ್ಗೆಯವರು ಹೇಳಿದ ಮಾತೇ ಅಂತಿಮವಾಗಲಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಇಲ್ಲ ಪೈಪೋಟಿ: ಇಲ್ಲಿನ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಇರುವಷ್ಟು ಪೈಪೋಟಿ ಉಪಾಧ್ಯಕ್ಷ ಸ್ಥಾನಕ್ಕೆ ಇಲ್ಲವಾಗಿದೆ. ಉಪಾಧ್ಯಕ್ಷ ಸ್ಥಾನವು ಎಸ್‌ಟಿಗೆ ಮೀಸಲಾಗಿದ್ದು ಜಿಲ್ಲಾ ಪಂಚಾಯತಿಯಲ್ಲಿ ಎಸ್‌ಟಿಗೆ ಸೇರಿದ ಇಬ್ಬರು ಸದಸ್ಯರು ಮಾತ್ರ ಇದ್ದು ಅವರಲ್ಲಿ ಹನುಮೇಗೌಡ ಮರಕಲ್ ಇವರು ಈಗಾಗಲೇ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಅಧಿಕಾರವನ್ನು ಅನುಭವಿಸಿದ್ದು, ಉಳಿದಂತೆ ಬಳಿಚಕ್ರ ಜಿ.ಪಂ ಸದಸ್ಯೆ ಮಲ್ಲಮ್ಮ ಅವರು ಯಾವುದೇ ಅಧಿಕಾರವನ್ನು ಅನುಭವಿಸಿಲ್ಲ. ಇವರಿಗೆ ಉಪಾಧ್ಯಕ್ಷ ಸ್ಥಾನವನ್ನು ಕಲ್ಪಿಸಿಕೊಡುವ ಕೆಲಸವನ್ನು ಪಕ್ಷದ ಹೈಕಮಾಂಡ್ ಮಾಡಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಪೈಪೋಟಿ ಕಂಡು ಬರುತ್ತಿಲ್ಲ.
ಒಟ್ಟಾರೆಯಾಗಿ ಜಿಪಂ ಮೂರನೇ ಹಂತದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇದೇ 28 ರಂದು ನಡೆಯಲಿರುವ ಚುನಾವಣೆಯಲ್ಲಿ ಗುರುಮಠಕಲ್ ಮತಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನ ದೊರೆಯುವುದೇ ಎನ್ನುವುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಗುರುಮಠಕಲ್‌ಗೆ ಒಂದು ವೇಳೆ ಅಧ್ಯಕ್ಷ ಸ್ಥಾನ ಕೈತಪ್ಪಿದರೆ, ಉಪಾಧ್ಯಕ್ಷ ಸ್ಥಾನ ಮಾತ್ರ ಬಹುತೇಕ ಖಚಿತವಾಗಿದೆ.