ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಒತ್ತುವರಿಗೆ ನಲುಗಿದ ಹಳ್ಳ

Rashmi Kasaragodu
Updated On : 24 May 2014, 11:28 am

ಕ.ಪ್ರ. ವಾರ್ತೆ  ಶಹಾಪುರ  ಮೇ 23
ಹಿಂದೊಮ್ಮೆ ಊರ ಮುಂದಿನ ಹಳ್ಳಗಳು ಸರಾಗವಾಗಿ ನೀರು ಹರಿಯುತ್ತ ವಾತಾವರಣಕ್ಕೆ ಪೂರಕವಾಗಿದ್ದವು. ಆದರೆ ಪ್ರಸ್ತುತ ದಿನಗಳಲ್ಲಿ ಗ್ರಾಮಗಳಿಂದ ಹಿಡಿದು ಪಟ್ಟಣದಲ್ಲಿರುವ ಹಳ್ಳಗಳು ಒತ್ತುವರಿಯಾಗುತ್ತ  ಹಳ್ಳಗಳು ಕಾಲುವೆಯಂತಾದ ಸ್ಥಿತಿಯಲ್ಲಿವೆ ಎಂಬುದಕ್ಕೆ ಪಟ್ಟಣದ ಮುಂದಿರುವ ಹಳ್ಳವೇ ಸಾಕ್ಷಿ.
ಜ್ವಲಂತ ಉದಾಹರಣೆ: ಈ ಹಳ್ಳ ದಿನದಿಂದ ದಿನಕ್ಕೆ ಒತ್ತುವರಿಯಾಗುತ್ತ ಜಾಲಿಕಂಟಿಗಳಿಂದ ತುಂಬಿ ಹೋಗಿದ್ದು ಹಳ್ಳವೊಂದು ಮಾಯವಾಗುತ್ತ ನಡೆದಿದೆ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಪಟ್ಟಣದ ಲಕ್ಷ್ಮಿನಗರ ಬಡಾವಣೆಯ ಹಿಂಭಾಗದಲ್ಲಿ ಬರುವ ಹಳ್ಳ ಹಳಿಸಗರದ ಬ್ರಿಜ್ ಮೂಲಕ ಹಾಯ್ದು ಡಿಪೋ ಸಮೀಪದಿಂದ ಮುಂದೆ ಹೋಗುತ್ತದೆ. ಆದರೆ ಸದ್ಯ, ಕೆಲವರ ಆಸೆಗೆ ಬಲಿಯಾಗಿ ಹಳ್ಳ ಅತಿಕ್ರಮಣವಾಗುವುದರ ಜತೆಗೆ ಇಡಿ ತ್ಯಾಜ್ಯ ವಸ್ತುಗಳನ್ನು ಅಲ್ಲಿಯೇ ಹಾಕುವುದು ಮತ್ತು ಜಾಲಿಕಂಟಿಗಳಿಂದ ಆವೃತವಾಗಿ ಹಳ್ಳ ಕಣ್ಣಿಗೆ ಕಾಣುತ್ತಿಲ್ಲ. ಇದರಿಂದ ಮಳೆಗಾಲ ಬಂತೆಂದರೆ ಹಳ್ಳಕ್ಕೆ ಬಂದ ಹೆಚ್ಚಿನ ನೀರು ಮುಂದೆ ಹರಿದು ಹೋಗಲು ಜಾಗವಿಲ್ಲದಂತಾಗಿ ನೀರು ಊರೊಳಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೆಗಳ ಒಳಗೆ ನೀರು ಪ್ರವೇಶ: ಪಟ್ಟಣದೊಳಗಿನ ಡ್ರೈನೇಜುಗಳ ಸ್ಥಿತಿಯೇ ಗಂಭೀರವಾಗಿದೆ. ನೀರು ನಿಂತಲ್ಲೇ ನಿಲ್ಲುತ್ತಿದೆ. ಇದರ ಜತೆ ಹಳ್ಳದ ನೀರು ಊರೊಳಗೆ ಬಂದರೆ ಕೆಲವು ಮನೆಗಳು ನೀರಿನಿಂದ ಆವೃತವಾದರೂ ಅಚ್ಚರಿಪಡುವಂತಿಲ್ಲ. ಸ್ಥಳೀಯ ಪುರಸಭೆಯಾಗಲಿ ಅಥವಾ ತಾಲೂಕಾ ಆಡಳಿತವಾಗಲಿ ನಿಯಮಾನುಸಾರ ಹಳ್ಳಗಳ ಸರಹದ್ದಿನತ್ತ ಗಮನಹರಿಸುತ್ತಿಲ್ಲ. ಪಟ್ಟಣದಲ್ಲಿ ಇಂಚು ಜಾಗಕ್ಕೂ ಬೇಡಿಕೆ ಹೆಚ್ಚಾಗಿದ್ದರಿಂದ ಕೆಲವರಿಗೆ ಒತ್ತುವರಿಗೆ ಹಳ್ಳದ ಸ್ಥಳವೂ ಸಾಲದಂತಾಗಿದೆ.
ಕಾಯಕಲ್ಪಕ್ಕೆ ಮುಂದಾಗಲಿ: ಒತ್ತುವರಿಯಾದ ಹಳ್ಳದ ಸುತ್ತಲೂ ಜಾಲಿಕಂಟಿಗಳನ್ನ ಸ್ವಚ್ಛಗೊಳಿಸುವುದರ ಜತೆಗೆ ಹಳ್ಳದಲ್ಲಿ ತುಂಬಿದ ಕಸ ಮತ್ತು ಹೂಳೆತ್ತುವ ಕಾರ್ಯ ನಡೆಯಬೇಕು. ಈ ಕುರಿತು ನಿರ್ಲಕ್ಷ್ಯ ವಹಿಸಿದರೆ ಬರುವ ದಿನಗಳಲ್ಲಿ ಹಳ್ಳಕ್ಕೆ ಬರುವ ನೀರು ಊರೊಳಗೆ ಪ್ರವೇಶವಾಗುತ್ತವೆ. ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement