ಕಿಡಿಗೇಡಿ ಕಿತಾಪತಿ ಪ್ರಯಾಣಿಕರ ಫಜೀತಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 25
ಕಿಡಿಗೇಡಿ ಪ್ರಯಾಣಿಕನೊಬ್ಬ ನಿಲುಗಡೆ ಇಲ್ಲದ ಸ್ಥಳದಲ್ಲಿ ತಾನಿಳಿಯುವ ಸಲುವಾಗಿ ರೈಲಿನ ಚೈನ್ ಎಳೆದು ರೈಲಲ್ಲಿದ್ದ ಪ್ರಯಾಣಿಕರನ್ನೆಲ್ಲ ಅಪಾಯಕ್ಕೆ ತಳ್ಳಿದ ವಿಲಕ್ಷಣ ಪ್ರಸಂಗ ಯಾದಗಿರಿ ಬಳಿ ಸಂಭವಿಸಿದೆ.
ಎರಡು ದಿನಗಳ ಹಿಂದೆ(ಶುಕ್ರವಾರ) ಈ ಪ್ರಕರಣ ಸಂಭವಿಸಿದ್ದು ವಾರಕ್ಕೊಮ್ಮೆ ಚಲಿಸುವ ಶಿರಡಿ- ಚೆನ್ನೈ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರು ಫಜೀತಿಗೀಡಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಶಿರಡಿ- ಚೆನ್ನೈ ರೈಲು ಯಾದಗಿರಿಗೆ ನಿಲುಗಡೆ ಇಲ್ಲ. ಆದಾಗ್ಯೂ ರೈಲಿನಲ್ಲಿದ್ದ ಯುವಕನೊಬ್ಬ ಯಾದಗಿರಿ ಬಳಿ ರೈಲಿನ ಚೈನ್ ಎಳೆದಿದ್ದಾನೆ. ರೈಲು 30ರಿಂದ 40 ಅಡಿ ಆಳದ ಸೇತುವೆಯೊಂದರ ಮೇಲೆ ನಿಂತು ಬಿಟ್ಟಿದೆ. ರೈಲು ನಿಲ್ಲುತ್ತಿದ್ದಂತೆಯೇ ತನ್ನ ಕೆಲ್ಸವಾಯ್ತು ಎಂದು ಯುವಕ ರೈಲಿನಿಂದ ಇಳಿದು ಕಣ್ಮರೆಯಾಗಿದ್ದಾನೆ.
ಈತ ಕಣ್ಮರೆಯಾಗುತ್ತಿದ್ದಂತೆಯೇ ಬೋಗಿಯಿಂದ ಗ್ಯಾಸ್ ಸೋರಲಾರಂಭಿಸಿದೆ. ಇದನ್ನು ಕಂಡ ಪ್ರಯಾಣಿಕರು ಕಂಗೆಟ್ಟಿದ್ದಾರೆ. ಕೆಲವರು ಗ್ಯಾಸ್ ಎಂದು ಅರಿಯದೆ ಬೆಂಕಿ ಹತ್ತಿದೆ ಎಂದು ಕಿರುಚಿದ್ದಾರೆ. ಇದರಿಂದ ಇತರೆ ಬೋಗಿಗಳ ಪ್ರಯಾಣಿಕರೂ ಕಂಗೆಟ್ಟಿದ್ದಾರೆ. ಲಗೇಜ್, ಗಂಟು- ಮೂಟೆ ಸಮೇತ ರೈಲಿನಿಂದ ಕೆಳಗೆ ಇಳಿಯಲು ಮುಂದಾಗಿದ್ದಾರೆ.
ಕೆಲವರಿಗೆ ಗಾಯ: ಮೊದಲೇ ರೈಲು ಸೇತುವೆ ಮೇಲೆ ನಿಂತಿತ್ತು. ಅಲ್ಲಿ ತುಂಬ ಇಕ್ಕಟ್ಟಾದ ಸ್ಥಳ. ಹೀಗಾಗಿ ಪ್ರಯಾಣಿಕರು ನೂರಾರು ಮಂದಿ ರೈಲಿನಿಂದ ಇಳಿದು ಹೊರಗೆ ಬಂದಾಗ ಹಳಿ ಸುತ್ತಮುತ್ತ ನಿಂತು ಬಿಟ್ಟಿದ್ದಾರೆ. ಅನೇಕರು ಗೊಂದಲದಲ್ಲಿ ರೈಲಿನಿಂದ ಹಾರಿದ್ದಾರೆ. ಕೆಲ ಪ್ರಯಾಣಿಕರಿಗೆ ಜಲ್ಲಿಕಲ್ಲು ತಗುಲಿ ಗಾಯಗೊಂಡಿದ್ದಾರೆ. ಇಷ್ಟೆಲ್ಲ ರಾದ್ಧಾಂತ ಸಂಭವಿಸುತ್ತಿದ್ದಂತೆಯೇ ರೈಲು ಚಾಲಕ ಸೇರಿದಂತೆ ಕೆಲವರು ಬೋಗಿಯಿಂದ ಹೊರಬರುತ್ತಿರುವುದಾದರೂ ಏನು ಎಂಬುದನ್ನು ಪರಿಶೀಲಿಸಿ, ಏರ್ ಗ್ಯಾಸ್ ಎಂಬುದನ್ನು ಖಚಿತಪಡಿಸಿದ್ದಾರೆ. ಆಗ ಆತಂಕದಲ್ಲಿದ್ದ ಪ್ರಯಾಣಿಕರು ಕೊಂಚ ನಿರಾಳವಾಗಿ ಮತ್ತೆ ರೈಲು ಹತ್ತಿದ್ದಾರೆ.
ಇಷ್ಟೆಲ್ಲ ಹಳಿ ಮೇಲೆ ನಡೆಯುವಾಗಲೇ 1 ಗಂಟೆ ಕಳೆದಿದೆ. ಇಷ್ಟೆಲ್ಲ ಯಡವಟ್ಟುಗಳು ಹಳಿ ಮೇಲೆ ಸಂಭವಿಸಿದರೂ ರೇಲ್ವೆ ಭದ್ರತಾ ಬಲದವರಾಗಲಿ, ರೇಲ್ವೆ ಪೊಲೀಸರಗಲಿ ಯಾರೂ ಸ್ಥಳಕ್ಕೆ ಬಂದಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಹುಬ್ಬಳ್ಳಿ- ಸಿಕಂದ್ರಾಬಾದ್ ರೈಲಲ್ಲಿ ಸರಗಳ್ಳತನ
ಗುಲ್ಬರ್ಗಕ್ಕೆ ಹತ್ತಿರವಿರುವ ಗೌಡಗಾಂವ್ ಬಳಿ ನಿಧಾನವಾಗಿ ಚಲಿಸುತ್ತಿದ್ದ ಹುಬ್ಬಳ್ಳಿ- ಸಿಕಂದರಾಬಾದ್ ರೈಲಿನಲ್ಲಿ ಕಿಡಿಗೇಡಿಗಳು ತಮ್ಮ ಕೈಚಳಕ ಪ್ರದರ್ಶಿಸಿದ್ದು ಪ್ರಯಾಣಿಕರ ಕೊರಳ ಚಿನ್ನದ ಸರ ಅಪಹರಿಸಿರುವ ಪ್ರಕರಣ ಸಂಭವಿಸಿದೆ.
ಖದೀಮರು ಎಸ್1 ಮತ್ತು ಎಸ್2 ಬೋಗಿಗಳಿಗೆ ಲಗ್ಗೆ ಇಟ್ಟು ಕಳ್ಳತನ ಮಾಡಿದ್ದಾರೆ. ಎಸ್1 ಬೋಗಿಯಲ್ಲಿದ್ದ ಅರುಣಾ ದೇಶಪಾಂಡೆ, ಎಸ್2 ಬೋಗಿಯಲ್ಲಿದ್ದ ಇನ್ನೊಬ್ಬ ಮಹಿಳೆಯ ಕೊರಳಿಗೆ ಕೈಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇದಲ್ಲದೆ ಇನ್ನೂ ಹಲವರಿಗೆ ಬೆದರಿಸಿ ಹಣ, ಚಿನ್ನಾಭರಣ ಕೀಳುವ ಪ್ರಯತ್ನಕ್ಕೂ ಖದೀಮರು ಮುಂದಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರೈಲಿನಲ್ಲೇ ಇಂತಹ ಸರಗಳ್ಳರ ಹಾವಳಿ ಕಂಡಲ್ಲಿ ಮುಂದೇನು, ಈ ಘಟನೆ ಸಂಭವಿಸಿದರೂ ಖದೀಮರ ದಾಳಿಗೆ ತುತ್ತಾದ ಬೋಗಿಗಳತ್ತ ರೇಲ್ವೆ ಸುರಕ್ಷಾ ಬಲ ಬರಲೇ ಇಲ್ಲ ಎಂದು ಪ್ರಯಾಣಿಕರು ಅನೇಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.