ನರರೋಗ ತಜ್ಞನಿಂದ ಮರುಜನ್ಮ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 24
ಇಲ್ಲಿನ ಬಸವೇಶ್ವರ ಆಸ್ಪತ್ರೆಯ ನರರೋಗ ವಿಭಾಗದ ತಜ್ಞ ವೈದ್ಯ ಡಾ. ಶಶಾಂಕ ರಾಮದುರ್ಗ ಮತ್ತೊಮ್ಮೆ ತಮ್ಮ ಶಸ್ತ್ರಚಿಕಿತ್ಸೆಯಲ್ಲಿ ಕೈಚಳಕ ಪ್ರದರ್ಶಿಸಿದ್ದಾರೆ. ಲಭ್ಯ ಸವಲತ್ತುಗಳಲ್ಲೇ ಮೆದುಳಿನ ರಕ್ತನಾಳಗಳ ಊತ, ರಕ್ತಸ್ರಾವ ತಪ್ಪಿಸಲು ಕ್ಲಿಷ್ಟಕರ ಹಾಗೂ ಕಠಿಣತಮ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ.
ಮೇ ತಿಂಗಳ 14ರಂದು ಚಿಂಚೋಳಿಯ ರಾಣಾಪುರದ ನಿವಾಸಿಯೇ ಕ್ಲಿಷ್ಟಕರ ಚಿಕಿತ್ಸೆಗೆ ಒಳಗಾಗಿದ್ದಾನೆ. ಮೇ 14ರಂದು ರಾಣಾಪುರದ ಸಿದ್ದಣ್ಣ ಮೆದುಳಿನ ಊತ, ರಕ್ತಸ್ರಾವದ ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದ.
ಅತ್ಯಂತ ದಾರುಣ ಸ್ಥಿತಿಯಲ್ಲಿದ್ದ ಸಿದ್ದಣ್ಣನಿಗೆ ತಕ್ಷಣ ಆಸ್ಪತ್ರೆಯಲ್ಲಿ ಪ್ರವೇಶ ಪಡೆದ ಡಾ. ಶಶಾಂಕ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಣ್ಣ ಮೊದಲು ತನ್ನ ಸಮಸ್ಯೆಗೆ ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ತಮ್ಮ ಆರ್ಥಿಕ ಪರಿಸ್ಥಿತಿ ಸರಿ ಇರದ ಕಾರಣ ಉತ್ತಮ ಚಿಕಿತ್ಸೆಯನ್ನು ಪಡೆಯಲು ಆಗದೇ ಅಸಹಾಯಕರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರ್ಪಡೆಯಾಗಿದ್ದರು. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯು ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಅವರು ಅಲ್ಲಿಂದ ನ್ಯೂರೋ ಸರ್ಜನ್ ಡಾ. ಶಶಾಂಕ್ ರಾಮದುರ್ಗ ತಜ್ಞರ ಸಲಹೆ ಮೇರೆಗೆ ಬಸವೇಶ್ವರ ಆಸ್ಪತ್ರೆಗೆ ಕಳುಹಿಸಲಾಯಿತು.
ರಕ್ತನಾಳಗಳ ಊತ: ಸಿದ್ದಣ್ಣ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ. ಒಂದಕ್ಕಿಂತ ಹೆಚ್ಚು ರಕ್ತನಾಳಗಳ ಶಸ್ತ್ರ ಚಿಕಿತ್ಸೆ ತುಂಬಾ ಕಠಿಣ, ತುಂಬ ಕ್ಲಿಷ್ಟಕರ. ಅಷ್ಟೇ ಅಲ್ಲ, ವೈದ್ಯರಿಗೆ ಒಂದು ಸವಾಲಾಗಿ ಪರಿಣಮಿಸಿತ್ತು. ಮೊದಲು ಬಸವೇಶ್ವರ ಆಸ್ಪತ್ರೆಯಲ್ಲಿ ರೋಗಿಯ ಎಲ್ಲ ಸ್ಥಿತಿಗತಿಗಳನ್ನು ಪರೀಕ್ಷೆ ಮಾಡಿದ ಆನಂತರ ರೋಗಿಯ ಮೆದುಳಿನಲ್ಲಿ ಊತಗೊಂಡಿರುವ ರಕ್ತನಾಳಗಳಿಗೆ ಅಂಜಿಯೋಗ್ರಾಂ ಮಾಡಿದಾಗ ಎರಡು ಕಂಡೆ ತೊಂದರೆಗಳು ಕಂಡುಬಂದವು. ಸ್ಮಾಲ್ ಬೆಬ್ ಚಿಕ್ಕದಾಗಿತ್ತು. ಇನ್ನೊಂದು 1 ಸೆಂ.ಮೀ.ನಷ್ಟು ಅಳತೆಯದಾಗಿತ್ತು. ಅಂಜಿಯೋಗ್ರಾಫಿ ವರದಿಯನ್ನಾಧರಿಸಿ ಸಿದ್ದಣ್ಣನನ್ನು ತುರ್ತು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು. ಅಳತೆಯಲ್ಲಿ 1 ಸೆಂ.ಮೀ.ನಷ್ಟು ಸುತ್ತಳತೆ ಊತಗೊಂಡಿದ್ದ ರಕ್ತನಾಳವನ್ನು ಯಸರ್ಗಿಲ್ ಕ್ಲಿಪ್ ಅಳವಡಿಸಿ ಸರಿಪಡಿಸಲಾಯ್ತು. ಇನ್ನೊಂದಕ್ಕೆ ಮಸಲ್ ರ್ಯಾಪಿಂಗ್ ಶಸ್ತ್ರ ಚಿಕಿತ್ಸೆ ಮಾಡಿದ ಡಾ. ಶಶಾಂಕ ರಾಮದುರ್ಗ, ಸಮಸ್ಯೆಗೆ ಯಶಸ್ವಿ ಪರಿಹಾರ ನೀಡಿದರು.
4 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ
ಈ ಶಸ್ತ್ರಚಿಕಿತ್ಸೆ 4 ಗಂಟೆಗೂ ಹೆಚ್ಚು ಕಾಲ ನಡೆಯಿತು. ನಂತರ ರೋಗಿಯ ಅವಶ್ಯಕತೆಗನುಸಾರ ರಕ್ತವನ್ನು ನೀಡಲಾಯಿತು. ಶಸ್ತ್ರಚಿಕಿತ್ಸೆಯನ್ನು ಆರೋಗ್ಯಶ್ರೀ ಯೋಜನೆಯಡಿ ಉಚಿತವಾಗಿ ನಡೆಸಲಾಯಿತು. ರೋಗಿ ಸಿದ್ದಣ್ಣನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಸಂಪೂರ್ಣ ಪ್ರಜ್ಞೆಯಲ್ಲಿದ್ದು ಆಹಾರ ಸೇವಿಸುತ್ತಿದ್ದಾನೆ.
ಗುಲ್ಬರ್ಗ ಭಾಗದಲ್ಲಿ ಪ್ರಪ್ರಥಮ ಬಾರಿಗೆ ಇಂಥಹ ಸಂಕೀರ್ಣಮಯ ನರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ಯುವ ನ್ಯೂರೋಸರ್ಜನ್ ಡಾ. ಶಶಾಂಕ ರಾಮದುರ್ಗ, ರೋಗಿ ಪೋಷಕರು, ಆಸ್ಪತ್ರೆ ಮತ್ತು ಹೈಕಶಿ ಸಂಸ್ಥೆಯ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ರೇಡಿಯೋಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ಮಾಸಿಮಡಿ ಮತ್ತು ಅನಸ್ತೇಶಿಯಾ ವಿಭಾಗದ ಡಾ. ಮುಕ್ರೆ, ಡಾ. ಎಂ.ಎನ್. ಆವಂಟಿ ಅವರು ಶಸ್ತ್ರ ಚಿಕಿತ್ಸೆಗೆ ಅರವಳಿಕೆ ಮತ್ತು ರೇಡಿಯೋಲಾಜಿಗೆ ಸಂಬಂಧಪಟ್ಟ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸಿದ್ದಾರೆ.
ಆಡಳಿತ ಮಂಡಳಿ
ಅಭಿನಂದನೆ
ಬಸವೇಶ್ವರ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ಶಶಾಂಕ ರಾಮದುರ್ಗ ಅವರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ಜಾಣ್ಮೆಗೆ ಹೈಕಶಿ ಸಂಸ್ಥೆ ಅಧ್ಯಕ್ಷ ನಮೋಶಿ, ಉಪಾಧ್ಯಕ್ಷ ಬಾಬುರಾವ ಮಂಗಾಣಿ, ಕಾರ್ಯದರ್ಶಿ ಶರದ್ ರಾಂಪುರೆ, ಸಂಪತ್ ಕುಮಾರ ಲೋಯಾ, ಬಸವೇಶ್ವರ ಆಸ್ಪತ್ರೆಯ ಸಂಚಾಲಕರಾದ ಡಾ. ಭೀಮಾಶಂಕರ ಬಿಲಗುಂದಿ, ಎಂ.ಆರ್. ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಡಾ. ಬಿ.ಮಲ್ಲಿಕಾರ್ಜುನ ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಆರ್. ಹರವಾಳ ಅವರು ಅಭಿನಂದಿಸಿದ್ದಾರೆ.