ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಪಂ ನಿರ್ಲಕ್ಷ್ಯ: ರಾಜ್ಯ ಹೆದ್ದಾರಿಗೆ ಒತ್ತುವರಿ ಕಾಟ

Rashmi Kasaragodu
Updated On : 26 May 2014, 11:45 am

ಕನ್ನಡಪ್ರಭ ವಾರ್ತೆ  ಗುರುಮಠಕಲ್  ಮೇ 25
ಗುರುಮಠಕಲ್ ಪಟ್ಟಣ ಪಂಚಾಯತಿಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ಪಟ್ಟಣದ ಮುಖ್ಯ ರಸ್ತೆಗಳ ತುಂಬೆಲ್ಲ ಖಾಸಗಿ ಡಬ್ಬಗಳ ಹಾವಳಿ ಹೆಚ್ಚಾಗಿ ರಾಜ್ಯ ಹೆದ್ದಾರಿಯೇ ಮಾಯವಾಗುತ್ತಿದೆ.
ಹೌದು, ಇದು ಗುರುಮಠಕಲ್ ಪಟ್ಟಣದ ನೈಜ ಸ್ಥಿತಿ. ಯಾದಗಿರಿ ಜಿಲ್ಲೆಯಲ್ಲೇ ಉತ್ತಮ ರಸ್ತೆಗಳನ್ನು ಹೊಂದಿರುವ ಪಟ್ಟಣವೆಂದು ಖ್ಯಾತಿ ಪಡೆದಿರುವ ಇಲ್ಲಿ ಇದೀಗ ಹೈದರಾಬಾದ್ ಬಿಜಾಪುರ ಹೆದ್ದಾರಿಯ ರಸ್ತೆಯ ಪಕ್ಕಗಳಲ್ಲಿ ಖಾಸಗಿಯವರು ರಸ್ತೆಗಳನ್ನು ಅತಿಕ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಈ ರಾಜ್ಯ ಹೆದ್ದಾರಿಯೂ ಆಕ್ರಮ ಡಬ್ಬಗಳ ತಾಣವಾಗಿ ರಸ್ತೆ ಸಂಚಾರಕ್ಕೆ ಸಂಚಾಕಾರವಾಗಿದೆ.
ಪರವಾನಗಿಯೇ ಇಲ್ಲ: ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಆಕ್ರಮವಾಗಿ ರಸ್ತೆಗಳನ್ನು ಅತಿಕ್ರಮಿಸಿಕೊಂಡು ಜನತೆ ಡಬ್ಬಗಳನ್ನು ಹಾಕಿಸಿಕೊಂಡಿದ್ದಾರೆ. ಅದರೆ ಅವರು ಹಾಕಿರುವ ಯಾವುದೇ ಒಂದು ಡಬ್ಬಗೆ ಪಟ್ಟಣ ಪಂಚಾಯ್ತಿ ವತಿಯಿಂದ ವ್ಯಾಪಾರಕ್ಕೆ ಪರವಾನಿಗೆಯೇ ಇಲ್ಲ. ಅವರಿಗೆ ರಸ್ತೆಯ ಪಕ್ಕದಲ್ಲಿ ಡಬ್ಬ ಇರಿಸಲು ಅಮಾನತಿಯನ್ನು ಸಹ ಯಾರೂ ನೀಡಿರುವುದಿಲ್ಲ. ಆದರೂ ಇವರೆಲ್ಲ ತಮಗೆ ಸ್ಥಳ ದೊರೆತ ಕಡೆ ಡಬ್ಬಗಳನ್ನು ಇರಿಸಿಕೊಂಡು ಸಂಚಾರಕ್ಕೆ ತೀವ್ರ ತೊಂದರೆಯನ್ನು ಉಂಟು ಮಾಡುತ್ತಿದ್ದಾರೆ.
ಅಪಘಾತಗಳ ಆಗರ: ಇಲ್ಲಿನ ರಾಜ್ಯ ಹೆದ್ದಾರಿಯ ರಸ್ತೆ ಸಂಪೂರ್ಣವಾಗಿ ಅಪಘಾತಗಳ ಕೂಪವಾಗಿ ಮಾರ್ಪಟ್ಟು, ಇಲ್ಲಿನ ರಸ್ತೆಗಳು ಎಲ್ಲವೂ ಮೃತ್ಯುಕೂಪಗಳಾಗಿವೆ. ಇಲ್ಲಿ ದಿನವೂ ಒಂದಿಲ್ಲಾ ಒಂದು ಅಪಘಾತಗಳು ಸಂಭವಿಸುತ್ತಲೇ ಇವೆ. ಅದರೆ ಯಾರೊಬ್ಬರೂ ಈ ಬಗ್ಗೆ ಗಮನವೇ ಹರಿಸುತ್ತಿಲ್ಲ. ಪ್ರಾಣಪಾಯ ಅಗದೇ ಇರುವುದು ಸಂತೋಷದ ಸಂಗತಿ.
ಪಟ್ಟಣ ಪಂಚಾಯ್ತಿ ಕಾರಣ: ಇಲ್ಲಿನ ರಸ್ತೆಗಳು ಅತಿಕ್ರಮಣವಾಗಲು ಇಲ್ಲಿನ ಪಟ್ಟಣ ಪಂಚಾಯ್ತಿ ಅಧಿಕಾರಿಗಳೇ ಪ್ರಮುಖ ಕಾರಣ. ರಸ್ತೆಗಳನ್ನು ಸಾರ್ವಜನಿಕರು ಆಕ್ರಮಿಸಿಕೊಂಡಿರುವುದನ್ನು ಗಮನಿಸಿಯೂ ತಮಗೆ ಸಂಬಂಧವಿಲ್ಲದಂತೆ ಸಾಗುತ್ತಾರೆ. ಅಕ್ರಮವಾಗಿ ಡಬ್ಬಗಳನ್ನು ಇರಿಸಿಕೊಂಡಿರುವವರ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ.
ಒಟ್ಟಾರೆಯಾಗಿ ಹೈದರಾಬಾದ್ -ಬಿಜಾಪುರ ರಾಜ್ಯ ಹೆದ್ದಾರಿ ಸಾರ್ವಜನಿಕರಿಂದ ಅತಿಕ್ರಮಣಕ್ಕೆ ಒಳಗಾಗಿ, ಈ ರಸ್ತೆಯಲ್ಲಿ ಸಂಚರಿಸುವವರು ತಮ್ಮ ಪ್ರಾಣ ಅಂಗೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪಪಂ ಅಧಿಕಾರಿಗಳು ಈ ಕಡೆ ಗಮನ ಹರಿಸಿ, ರಸ್ತೆ ತೆರವು ಮಾಡಿ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಾಗಿದೆ.


 ಇವರೇನಂತಾರೆ?


ಇಲ್ಲಿನ ರಸ್ತೆಗಳನ್ನು ಅತಿಕ್ರಮಿಸಿಕೊಂಡಿರುವವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅವರು ತೆರವು ಕಾರ್ಯವನ್ನು ಮಾಡದಿದ್ದಾರೆ ಪ.ಪಂ. ಕಡೆಯಿಂದ ತೆರವು ಕಾರ್ಯವನ್ನು ಮಾಡಲಾಗುತ್ತದೆ.
 ರವೀಂದ್ರ ವೈ ಲಂಬು, ಮುಖ್ಯಧಿಕಾರಿ ಪಪಂ
ರಾಜ್ಯ ಹೆದ್ದಾರಿಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಸೂಚನೆ ನೀಡುತ್ತಾರೆ.
 ರೇಣುಕಾ ಚಂದಪುರ ಅಧ್ಯಕ್ಷರು ಪಪಂ
ರಾಜ್ಯ ಹೆದ್ದಾರಿ ತುಂಬೆಲ್ಲ ವ್ಯಾಪಾರಿಗಳು ಡಬ್ಬಗಳನ್ನು ಇಟ್ಟುಕೊಂಡು ರಸ್ತೆಯನ್ನು ತಮ್ಮ ವ್ಯಾಪಾರ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ವಾಹನಗಳು ಸಂಚರಿಸಲು ತೀವ್ರ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯತಿ ಗಮನ ಹರಿಸಬೇಕಾಗಿದೆ
 ರಾಮಚಂದ್ರ, ಗುರುಮಠಕಲ್ ನಿವಾಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement