ಮಠಗಳಲ್ಲಿ ಅಂಬೇಡ್ಕರ್ ಜಯಂತಿಗೆ ಆಗ್ರಹ
ಕನ್ನಡಪ್ರಭ ವಾರ್ತೆ ಆಳಂದ ಮೇ 25
ಬರುವ ದಿನಗಳಲ್ಲಿ ಸಂವಿಧಾನ ಬಚಾವ್ ರಾಷ್ಟ್ರವ್ಯಾಪಿ ಜನಾಂದೋಲನ ಚಳವಳಿಯಲ್ಲಿ ಶೋಷಿತರು, ಸಾಮಾಜಿಕ ನ್ಯಾಯವಂಚಿತರು ಮತ್ತು ಹಿಂದುಳಿದವರು ಪಾಲ್ಗೊಳ್ಳಬೇಕೆಂದು ನವದೆಹಲಿಯ ಭಾರತ ಮುಕ್ತಿ ಮೋರ್ಚಾ ನೇತಾರ ಉಸ್ತುರಿ- ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಧುತ್ತರಗಾಂವದಲ್ಲಿ
ಏರ್ಪಡಿಸಿದ್ದ ಡಾ. ಅಂಬೇಡ್ಕರ್ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಐದು ವರ್ಷಗಳಲ್ಲಿ ದೇಶದ ಸಂವಿಧಾನವನ್ನು ಶಕ್ತಿಹೀನ ಮಾಡಲು ಹೊರಟಿರುವ ಪಟಭದ್ರ ಶಕ್ತಿಗಳ ವಿರುದ್ಧ ಶೋಷಿತರು ಒಂದಾಗಿ ಹೋರಾಟಕ್ಕೆ ಮುಂದಾಗಬೇಕು ಎಂದರು.
ಭಾರತರತ್ನ ಡಾ. ಅಂಬೇಡ್ಕರ್ ಜಯಂತಿ ನಿಜಕ್ಕೂ ಹಬ್ಬದ ಆಚರಣೆ ಆಗಿದೆ. ಅವರು ಕಂಡ ಸಮೃದ್ಧ ಭಾರತದ ಕನಸು ನನಸು ಮಾಡಬೇಕಾಗಿದೆ. ಅದಕ್ಕಾಗಿ ದೇಶಾದ್ಯಂತ ಲಕ್ಷಾಂತರ ಕಾರ್ಯಕರ್ತರು ಯುವಪಡೆ ಸಜ್ಜಾಗಿದೆ. ಗುಲಾಮಗಿರಿಯಿಂದ ಮುಕ್ತಗೊಳಿಸಿ ದೇಶ ಸ್ವಾತಂತ್ರ್ಯವಾದರೆ ಮಾತ್ರ ಮೂಲನಿವಾಸಿಗಳ ಕೈಗೆ ಅಧಿಕಾರ ದೊರೆಯುತ್ತದೆ ಎಂದು ಹೇಳಿದರು.
ಮಠಗಳಲ್ಲಿ ಅಂಬೇಡ್ಕರ್ ಜಯಂತಿ ನಡೆಯಲಿ: ಮೈಸೂರಿನ ಶರಣ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಿ, ದೇಶದ ಸಮಸ್ಯೆ-ಸವಾಲುಗಳಿಗೆ ಉತ್ತರವಾಗಿ ಸಂವಿಧಾನ ಬರೆದ ಡಾ. ಅಂಬೇಡ್ಕರರ ಜಯಂತಿ ಕೇವಲ ದಲಿತ ಓಣಿಗಳಲ್ಲಿ ನಡೆದರೆ ಸಾಲದು. ಮಠ, ಚರ್ಚ್ ಹಾಗೂ ಮಸೀದಿಗಳಲ್ಲೂ ಹಮ್ಮಿಕೊಳ್ಳುವಂತಾಗಬೇಕು. ಈ ಮಠ, ಮಸೀದಿ, ಚರ್ಚ್‌ಗಳಿಗೆ ಸಂವಿಧಾನವೇ ಭದ್ರತೆ ಒದಗಿಸುತ್ತಿದೆ. ಅರ್ಥಾತ್ ಅಂಬೇಡ್ಕರ್ ಕೊಡುಗೆಯಾಗಿದೆ. ಅಸಮಾನತೆ ಇರುವವರೆಗೆ ಮೀಸಲಾತಿ ಜಾರಿಯಲಿರಬೇಕು. ನಮ್ಮನ್ನು ಯಾವ ದೇವರ, ಧರ್ಮಾಧಿಕಾರಿಗಳ ಆಳುತ್ತಿಲ್ಲ. ದಾಸ್ಯತ್ವದಿಂದ ಹೊರಬಂದು ಅಂಬೇಡ್ಕರ್, ಬಸವಣ್ಣನವರ ಹಾದಿಯಲ್ಲಿ ನಡೆಯಬೇಕೆಂದು ಸಲಹೆ ನೀಡಿದರು.
ಕಂಪನಿಗಳಲ್ಲಿ ಮೀಸಲಾತಿಗೆ ಆಗ್ರಹ: ದಿನಗೂಲಿ ರಾಜ್ಯ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ಸಮಾನತೆಗಾಗಿ ಸರ್ಕಾರಿ ಹುದ್ದೆಗಳ ಭರ್ತಿ, ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ಒದಗಿಸಿ ದಲಿತರ ಹಿತಕಾಪಾಡಬೇಕೆಂದು ಆಗ್ರಹಿಸಿದರು.
ಶಾಸಕ ಬಿ.ಆರ್. ಪಾಟೀಲ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಭಾಮಸೇಫ್ ರಾಜ್ಯಾಧ್ಯಕ್ಷ ಸುಭಾಷ ಶೀಲವಂತ, ರಾಷ್ಟ್ರೀಯ ಬೌದ್ಧ ಸೇವಾ ಸಂಘದ ಅಧ್ಯಕ್ಷ ಚಂದ್ರಕಾಂತ ಮಾತನಾಡಿದರು.
ಪತ್ರಕರ್ತ ಮಹಾದೇವ ವಗಡಾಂವ, ಜಿಪಂ ಸದಸ್ಯೆ ಮಂಗಳಾ ಅರವಿಂದ ನರೋಣಿ, ಮಾಜಿ ಸದಸ್ಯ ವೀರಣ್ಣ ಮಂಗಾಣೆ, ಪಿಆರ್‌ಪಿ ರಾಜ್ಯಾಧ್ಯಕ್ಷ ಪ್ರಕಾಶ ಮೂಲಭಾರತಿ, ಕಲ್ಯಾಣಿ ಭಾವಿಮನಿ, ವಿಠ್ಠಲರಾವ್ ಪಾಟೀಲ್, ತಾಪಂ ಸದಸ್ಯೆ ಮಹೇಶ್ವರಿ ಗುರುನಾಥ ಗೌರಸೆ, ಬಾಬುರಾವ್ ಅರುಣೋದಯ, ಮಲ್ಲಿಕಾರ್ಜುನ ಬೋಳಣಿ, ದಯಾನಂದ ಶೇರಿಕಾರ ಆಗಮಿಸಿದ್ದರು.
ಗ್ರಾಪಂ ಅಧ್ಯಕ್ಷ ಗೇಮುನಾಯಕ ಚವ್ಹಾಣ ಧ್ವಜಾರೋಹಣ, ಮಾಪಣ್ಣ ಜಿರೋಳಿಕರ್ ನಿರೂಪಿಸಿದರು. ರಾಣಪ್ಪಾ ಸಂಗನ ಸ್ವಾಗತಿಸಿದರು. ಜಗದೇವಪ್ಪ ಚಿಚಕೋಟಿ ವಂದಿಸಿದರು.