ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗೂಂಡಾಗಳ ಗಡಿಪಾರಿಗೆ ಆಗ್ರಹ

Vishwanath S
Updated On : 28 May 2014, 12:01 pm

ಅಫಜಲ್ಪುರ: ಶಾಸಕ ಮಾಲಿಕಯ್ಯ ಗುತ್ತೆದಾರರಿಗೆ ಮೇಲೆ ಉದ್ದೇಶಪೂರ್ವಕವಾಗಿ ತಾಲೂಕಿನ ಕೋಲಿ ಸಮಾಜದ ಕೆಲ ಮುಖಂಡರು ಯುವಕರಿಗೆ ಪ್ರಚೋದನೆ ಕೊಟ್ಟು ಅಗೌರವ ತೋರಿಸಿದ್ದು, ಗೂಂಡಾ ಕಾಯ್ದೆ ಮೂಲಕ ಅವರನ್ನು ಗಡಿಪಾರು ಮಾಡಬೇಕೆಂದು ತಾಲೂಕು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಅಂಬಿಗರ ಚೌಡಯ್ಯನವರ ಕಾರ್ಯಕ್ರಮದಿಂದ ಎಪಿಎಂಸಿ ಅಧ್ಯಕ್ಷರ ಕಾರಿನಲ್ಲಿ ವಾಪಸ್ಸಾಗುತ್ತಿದ್ದಾಗ ಸರ್ಕಾರಿ ವಾಹನದ ಮೇಲೆ ಕಲ್ಲೆಸೆದು ನಿಂದಿಸಿರುವುದನ್ನು ಖಂಡಿಸಿರುವ ಅವರು, ತಹಸೀಲ್ದಾರರ ಮೂಲಕ  ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಗೂಂಡಾಗಿರಿಯ ವರ್ತನೆಯಿಂದ ಜನರು ಗಾಬರಿಗೊಂಡಿದ್ದು ಶಾಸಕರು ಮತ್ತು ಮುಖಂಡರಿಗೇ ಈ ಗತಿಯಾದರೆ ಇನ್ನು ಜನಸಾಮನ್ಯರ ಪಾಡೇನು ಎನ್ನುವಂತಾಗಿದೆ. ಈ ವ್ಯಕ್ತಿಗಳು ತಾಲೂಕಿನಲ್ಲಿ ಯಾವಾಗಲೂ ಒಂದಿಲ್ಲ ಒಂದು ರೀತಿಯ ಗೂಂಡಾಗಿರಿ ಮಾಡುತ್ತ ಶಾಂತಿಗೆ ಧಕ್ಕೆ ತರುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ವೇಳೆ ಎಪಿಎಂಸಿ ಅಧ್ಯಕ್ಷ ಬಸವಣ್ಣೆಪ್ಪ ಪಾಟೀಲ ಅಂಕಲಗಿ, ಸದಸ್ಯರಾದ ಗುರುಬಾಳ ಜಕಾಪುರ, ಸಿದ್ದಯ್ಯ ಆಕಾಶಮಠ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ  ರೇವೂರ, ಮಕಬುಲ ಪಟೇಲ್, ಫಿರೋಜ ಜಾಗೀರದಾರ ಪಾಶಾ ಮಣ್ಣೂರ ಸಿದ್ದು ಹಳಗೊದಿ, ರಮೇಶ ಬಾಕೆ, ಪಪ್ಪು ಪಟೇಲ, ಮಲ್ಲಿನಾಥ ಜಮಾದಾರ, ದೇವಿಂದ್ರ ಜಮಾದಾರ, ಶಾಂತಯ್ಯ ಹಿರೇಮಠ, ಸಾವಿರಪ್ಪ ಪೂಜಾರಿ, ಮಲ್ಲಿಕಾರ್ಜುನ ಪಾಟೀಲ ಚಿಣಮಗೇರಾ ಸೇರಿದಂತೆ ತಾಲೂಕಿನ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಈ   ಸಂದರ್ಭದಲ್ಲಿ ಇದ್ದರು.
ರೈತರಿಗೆ ಕೃಷಿ ತಂತ್ರಜ್ಞಾನ ಮಾಹಿತಿ ಅಗತ್ಯ
ಆಳಂದ: ತಾಲೂಕಿನ ಲಾಡಚಿಂಚೋಳಿ ಗ್ರಾಮದಲ್ಲಿ ಕೃಷಿ ಮಾಹಿತಿ ಆಂದೋಲನಕ್ಕೆ ಕೃಷಿ ಅಧಿಕಾರಿ ಶಿವಲಿಂಗಪ್ಪಾ ಆವಟೆ ಚಾಲನೆ ನೀಡಿ ಮಾತನಾಡಿ, ರೈತಾಪಿ ಜನರಲ್ಲಿ ಕೃಷಿ ಮಾಹಿತಿಗಳನ್ನು ತಲುಪಿಸಬೇಕಾದರೆ ಇಂಥ ಆಂದೋಲನಗಳ ಮೂಲಕವೇ ಸಾಧ್ಯ. ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕೆಂದರು.
ನಿಂಬರ್ಗಾ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ವಿಟೋಬಾ ಗಾವಡೆ ಮಾತನಾಡಿ, ಕೃಷಿ ಇಲಾಖೆಯ ಅಧಿಕಾರಿಗಳು, ಅನುವುಗಾರರು ಮುಂಗಾರು, ಹಿಂಗಾರು ಹಂಗಾಮುಗಳಲ್ಲಿ ಬೆಳೆಗಳ ಇಳುವರಿ ಹೆಚ್ಚಳಕ್ಕೆ ಅಗತ್ಯ ಮಾಹಿತಿ ನೀಡಬೇಕು.
 ಸರ್ಕಾರ ರಿಯಾಯತಿ ದರದಲ್ಲಿ ಬೀಜ, ರಸಗೊಬ್ಬರ, ಕೀಟನಾಶಕ, ಇತರ ಕೃಷಿ ಪರಿಕರಗಳನ್ನು ಸಣ್ಣ, ಅತಿಸಣ್ಣ ರೈತರಿಗೆ ನೀಡುತ್ತಿದ್ದು. ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕು.
 ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ ಸಾವಯವ ಗೊಬ್ಬರ ಉಪಯೋಗಿಸಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಬಿಜೋಪಚಾರ ಕುರಿತು ಹಾಗೂ ರೋಗ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಕುರಿತು ರೈತರೊಂದಿಗೆ ಚರ್ಚಿಸಲಾಯಿತು.
ರೈತ ಅನುವುಗಾರರಾದ ಶಿವಶರಣಪ್ಪಾ ಖಜೂರಿ, ಸಿದ್ಧಾರೂಢ ಅಟ್ಟೂರ, ವಿಶ್ವನಾಥ ವಠಾರ, ಭೀಮಶಾ ವಾಗ್ದರ್ಗಿ, ಮಹಾಂತಪ್ಪಾ ನರೋಣಿ, ರಾಮದಾಸ ರಾಠೋಡ, ವಿಜಯಕುಮಾರ ಕೋನೆರಿ, ಶರಣಯ್ಯ ಸ್ವಾಮಿ, ಕಲ್ಯಾಣಿ ಮಾಂಗ, ಪ್ರಗತಿಪರ ರೈತರಾದ ಷಡಕ್ಷರಿ ಸ್ವಾಮಿ ಸೇರಿದಂತೆ ರೈತರು, ಮಹಿಳೆಯರು ಆಂದೋಲನದಲ್ಲಿ ಪಾಲ್ಗೊಂಡಿದರು.
ಮೋದಿ ಅಭಿಮಾನಿಗಳ ಸಂಭ್ರಮ
ಆಳಂದ: ಗುಜರಾತಿನ ನರೇಂದ್ರ ಮೋದಿ ದೇಶದ 15ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಆಳಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಯುವಕರು, ಹಿರಿಯರು ಚಹಾ ಕುಡಿಸಿ, ಸಿಹಿ ವಿತರಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಬಸ್‌ನಿಲ್ದಾಣದ ಹತ್ತಿರ ಬಿಜೆಪಿ ತಾಲೂಕಾಧ್ಯಕ್ಷ ರಮೇಶ ಲೋಹಾರ, ಜಿಲ್ಲಾ ಮುಖಂಡ ಸಂಜಯ ಮಿಸ್ಕಿನ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು. ಪ್ರಕಾಶ ಮಾನೆ, ಮಹೇಶ ಹಿರೋಳಿಕರ, ಮಹೇಶ ಸೂರೆ, ಪ್ರಕಾಶ ಪೊದ್ದಾರ, ರಾಜಶೇಖರ ಹತ್ತರಕಿ, ಸಿದ್ದಲಿಂಗ ಹತ್ತರಕಿ, ಪ್ರಭಾಕರ ಘನಾತೆ, ಅಮೃತ ಕಾಳೆ, ಚಂದ್ರಕಾಂತ ಕುಲಕರ್ಣಿನ ಸೇರಿದಂತೆ ಇತರರು ಪಾಲ್ಗೊಂಡಿದರು. ಪಟ್ಟಣದ ಗಣೇಶ ಚೌಕ ಹತ್ತಿರ ಬಸವಸೇನಾ ಕಾರ್ಯಕರ್ತರು ಹಾಗೂ ವಂದೇ ಮಾತರಂ ಸಂಘದ ಸದಸ್ಯರು ಚಹಾ ಕುಡಿಸಿ ಸಂಭ್ರಮಿಸಿದರು. ಶ್ರೀಶೈಲ ಪಾಟೀಲ, ಸಂತೋಷ ವಾಲಿ, ಸೋಮು ಬಿರಾದಾರ, ವೀರೇಶ ಡೋಳ್ಳೆ, ಶಿವುಕುಮಾರ ಸ್ವಾಮಿ, ಸೋಮನಾಥ ಬಿರಾದಾರ, ಮಹಾದೇವ ಹಡಪದ, ಪ್ರಸಾದ ಪಾಟೀಲ, ದವಲಪ್ಪಾ ಮಸರೆ, ಹಣಮಂತ ಡೊಳ್ಳೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಜೂ.1ರಿಂದ ನಂದಿನಿ ಸಿಹಿ ಸಪ್ತಾಹ
ಗುಲ್ಬರ್ಗ: ವಿಶ್ವ ಹಾಲು ದಿನಾಚಾರಣೆ ನಿಮಿತ್ತ ಗುಲ್ಬರ್ಗ, ಬೀದರ್, ಯಾದಗಿರಿ ಹಾಲು ಒಕ್ಕೂಟವು ಜೂ.1ರಿಂದ ನಂದಿನಿ ಸಿಹಿ ಸಾಪ್ತಾಹವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ್, ವಿಶ್ವ ಹಾಲು ದಿನಾಚರಣೆಯನ್ನು ನಗರದ ನಂದಗೋಕುಲ ಅನಾಥಾಶ್ರಮದ ಮಕ್ಕಳಿಗೆ ಹಾಲು ಕೂಡುವ ಮೂಲಕ ಆರಂಭಿಸಲಾಗುವುದು ಎಂದರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.20ರಷ್ಟು ಹಾಲು ಸಂಗ್ರಹ ಪ್ರಮಾಣವು ಹೆಚ್ಚಾಗಿದೆ. ಮುಖ್ಯವಾಗಿ ಟೆಟ್ರಾ ಪ್ಯಾಕ್ ಹಾಲಿನ ಮಾರಾಟ ಶೇ.44ರಷ್ಟು ಹೆಚ್ಚಳವಾಗಿದೆ. 2013- 14ನೇ ಸಾಲಿನಲ್ಲಿ ಪ್ರತಿದಿನ ಸರಾಸರಿ 56,195 ಲೀಟರ್ ಹಾಲು ಶೇಖರಣೆ ಮಾಡಲಾಗಿದೆ. ಹಾಲು ಒಕ್ಕೂಟದಲ್ಲಿ ಈ ವರ್ಷ ಹೊಸದಾಗಿ 100 ಸಂಘಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದರು. ವಿಶ್ವ ಹಾಲು ದಿನಾಚರಣೆ ಸಪ್ತಾಹದಲ್ಲಿ ಹಾಲಿನ ಮಹತ್ವ ಅದರಲ್ಲಿ ಅಡಕಗೊಂಡ ಪೌಷ್ಟಿಕಾಂಶಗಳ ಕುರಿತು ವ್ಯಾಪಕ ಪ್ರಚಾರ ಮಾಡಲಾಗುವುದು. ಹಾಲು ಉತ್ಪಾದನೆಯನ್ನು ಹೆಚ್ಚಿಸುವುದಕ್ಕಾಗಿ ಪ್ರತಿ ತಿಂಗಳು 120 ಮೆಟ್ರಿಕ್ ಟನ್ ಪಶು ಆಹಾರವನ್ನು ಹಾಲು ಉತ್ಪಾದಕರಿಗೆ ವಿತರಿಸಲಾಗುತ್ತಿದೆ.
13 ಹೊಸ ಗರ್ಭಧಾರಣೆ ಕೇಂದ್ರ ಸ್ಥಾಪನೆ: ಒಕ್ಕೂಟದ ವ್ಯಾಪ್ತಿಯಲ್ಲಿ ಸದ್ಯ 70 ಕೃತಕ ಗರ್ಭಧಾರಣೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ಹೊಸದಾಗಿ 13  ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಯಾದಗಿರಿ ಜಿಲ್ಲೆಯಲ್ಲಿ 37 ಸಂಘಗಳನ್ನು ಸ್ಥಾಪಿಸಲಾಗಿದೆ. ದೋರನಹಳ್ಳಿಯಲ್ಲಿ ಸಾವಿರ ಲೀಟರ್ ಸಾಮರ್ಥ್ಯದ ಐಎಂಸಿಯು ಘಟಕ ಆರಂಭಿಸಲಾಗುತ್ತಿದೆ ಎಂದರು.
ಲಾರಿ-ಬೈಕ್ ಡಿಕ್ಕಿ: ಯುವಕ ಸಾವು
ಆಳಂದ: ಲಾರಿ ಬೈಕ್‌ನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಕಗಡಂಚಿ ಸುಂಟನೂರ ನಡುವಿನ ವಾಗ್ದರಿ ರಿಬ್ಬನಪಲ್ಲಿ ಹೆದ್ದಾರಿ ಮೇಲೆ ಸೋಮವಾರ ನಡೆದಿದೆ.
  ಸುಂಟನೂರ ಗ್ರಾಮದ ನಿವಾಸಿ ಶಂಕರ ದತ್ತಪ್ಪಾ ಖಾನಾಪೂರ (19) ಯುವಕನೇ ಮೃತ ದುರ್ದೈವಿ ಯಾಗಿದ್ದಾನೆ. ಕಂಡಗಂಚಿ ಗ್ರಾಮದಿಂದ ಸ್ವಗ್ರಾಮ ಸುಂಟನೂರಿಗೆ ತೆರಳುವಾಗ ಮಾರ್ಗ ಮಧ್ಯದ ಕೇಂದ್ರೀಯ ವಿ ವಿ ಮುಂಭಾಗದ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಗಾಯಾಳುವಿಗೆ ಗುಲ್ಬರ್ಗ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತಾದರು. ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
  ಘಟನಾ ಸ್ಥಳಕ್ಕೆ ನರೋಣಾ ಪಿಎಸ್‌ಐ ಎಂ.ಎಚ್.ದೊರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿ ಚಾಲಕ ಪರಾರಿಯಾಗಿದ್ದಾನೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಕಳ್ಳತನ: ಪಟ್ಟಣದಲ್ಲಿ ಭಾನುವಾರ ರಾತ್ರಿ ನಾಲ್ಕು ಮನೆಗಳ ಮೇಲೆ ಕನ್ನಹಾಕಲು ಯತ್ನಿಸಿದ ಕಳ್ಳರು ಎರಡು ಕಡೆ ಯಶಸ್ವಿಯಾದರೆ ಇನ್ನೂ ಎರಡು ಕಡೆ ವಿಫಲ ಯತ್ನ ನಡೆದಿದೆ.
 ಪಟ್ಟಣದ ಹತ್ತ್ಯಾನಗಲ್ಲಿಯ ಸತೀಶ ಶಿವರಾಜ ಹತ್ತಿ ಅವರ ಮನೆಯಲ್ಲಿ ರಾತ್ರಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು ಬೀಗ ಮುರಿದು ಐದು ತೊಲೆ ಚಿನ್ನ ದೋಚಿದ್ದಾರೆ. ಪಂ ಕಚೇರಿಯ ಎಫ್‌ಡಿಸಿ ದತ್ತಾ ಪೋದ್ದಾರ ಮನೆಯಲ್ಲಿನ ಬೀಗ ಮುರಿದು 20ಸಾವಿರ ರೂಪಾಯಿ, ಬೆಳ್ಳಿ ಸಾಮಗ್ರಿ ಕಳ್ಳತನವಾಗಿದೆ.
  ಭೀಮನಗರ ಬೇಸ್ ಬಳಿಯ ನಿವಾಸಿ ಇಕ್ಬಾಲ ಬಿಲಗುಂದಿ ಮನೆಗೆ ಕನ್ನಕ್ಕೆ ಯತ್ನಿಸಿದ ಕಳ್ಳರ ಕಾರ್ಯ ವಿಫಲಯತ್ನವಾಗಿದೆ. ಹತ್ತ್ಯಾನಗಲ್ಲಿಯ ರೇವಪ್ಪಾ ನಾಗೂರೆ ಮನೆಯಲ್ಲಿ ಸಾಮಗ್ರಿಗಳು ಚಿಲ್ಲಾಪಿಲಿಯಾಗಿ ಮಾಡಿ ಹಿಂದುರುಗಿದ್ದಾರೆ.ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂದು ಸಾಮಾನ್ಯ ಸಭೆ
ಗುಲ್ಬರ್ಗ: ನಗರದ ಜಿಲ್ಲಾ ಪಂಚಾಯ್ತಿ ಹಳೇ ಸಭಾಂಗಣದಲ್ಲಿ ಮೇ 28ರಂದು ಬೆಳಗ್ಗೆ 10ಕ್ಕೆ ಮಹಾನಗರ ಪಾಲಿಕೆಯ ಮಹಾಪೌರರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಲಿದೆ.
ಪಾಲಿಕೆಯ ಉಪಮಹಾಪೌರರು, ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಪಾಲಿಕೆಯ ಸಭಾ ಕಾರ್ಯದರ್ಶಿಗಳು ಕೋರಿದ್ದಾರೆ.
ಇಂದು ಕಾಖಂಡಕಿ ಜಾತ್ರಾ ಮಹೋತ್ಸವ
ಶಹಾಬಾದ್: ಜೇವರ್ಗಿ ತಾಲೂಕಿನ ಗುರುಕ್ಷೇತ್ರವಾದ ಕಾಖಂಡಕಿಯ ಮಲ್ಲಾರಾದ್ಯರ ಹಾಗೂ ಕೋರಿಸಿದ್ದೇಶ್ವರರ ಜಾತ್ರಾ ಮಹೋತ್ಸವ ಮೇ 28 ಮತ್ತು 29 ರಂದು ಡಾ. ಸಿದ್ದ ತೋಟೆಂದ್ರ ಶ್ರೀ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.ಮೇ 28ರಂದು ಅಮವಾಸ್ಯೆ ನಿಮಿತ್ತ ಮಲ್ಲಾರಾದ್ಯ ಶಿವಯೋಗಿಗಳ ಗದ್ದುಗೆಗೆ ವಿಶೇಷ ಅಭಿಷೇಕ, ಪೂಜೆ, ಅಲಂಕಾರ, ಮಹಾಪ್ರಸಾದ ವಿತರಣೆ ನಡೆಯುವುದು. ರಾತ್ರಿ 8ಕ್ಕೆ ಮಲ್ಲಾರಾಧ್ಯರ, ಕೋರಿಸಿದ್ದೇಶ್ವರರ ಜಾತ್ರಾ ಮಹೋತ್ಸವ ಉದ್ಘಾಟನೆ, ಶಿವಾನುಭವ ಚಿಂತನೆ ನಡೆಯುವುದು, ಮಧ್ಯರಾತ್ರಿ ಭಕ್ತರ ಹರಕೆಯ ತನಾರತಿ ಮಹೋತ್ಸವ ನಡೆಯುವುದು. ಮೇ 29ರಂದು ಸಂಜೆ 6ಕ್ಕೆ ಮಲ್ಲಾರಾಧ್ಯರ, ಕೋರಿಸಿದ್ದೇಶ್ವರರ ಭವ್ಯ ರಥೋತ್ಸವ, ಮದ್ದು ಸುಡುವ ಕಾರ್ಯಕ್ರಮ, ರಾತ್ರಿ 8ಕ್ಕೆ ಸಮಾರೋಪ ಸಮಾರಂಭ, ಧಾರ್ಮಿಕ ಪ್ರವಚನದ ಮಂಗಲ, ವಿವಿಧ ಸೇವೆ ಸಲ್ಲಿಸಿದ ಭಕ್ತರಿಗೆ ಗುರುರಕ್ಷೆ, ಧರ್ಮಸಭೆ ನಡೆಯುವುದು, ಸಮಾರಂಭದಲ್ಲಿ ಮಠಾಧೀಶರು, ರಾಜಕೀಯ ಧುರೀಣರು, ಕವಿ, ಕಲಾವಿದರು ಭಾಗವಹಿಸುವರು.
ನಮೋ ಪ್ರಮಾಣ: ವಿಜಯೋತ್ಸವ
ಶಹಾಬಾದ್: ದೇಶದ 15ನೇ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ನಗರದ ಮುಖ್ಯರಸ್ತೆಯ ಶ್ರೀರಾಮ ವೃತ್ತದಲ್ಲಿ ನಗರ ಘಟಕ ಅಧ್ಯಕ್ಷ ಶಾಂತರೆಡ್ಡಿ ದಂಡಗುಲಕರ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಮೋದಿ ಭಾವಚಿತ್ರದ ಮುಂದೆ ಪಟಾಕಿ ಸಿಡಿಸಿ, ಜಯಘೋಷ ಕೂಗಿ, ಪರಸ್ಪರ ಸಿಹಿ ಹಂಚಿದರು. ಪಕ್ಷದ ಮುಖಂಡರಾದ ಡಾ. ಅಶೋಕ ಜಿಂಗಾಡೆ, ತಾಪಂ ಸದಸ್ಯ ನಿಂಗಣ್ಣ ಹುಳಗೋಳ, ಅರುಣಕುಮಾರ ಪಟ್ಟಣಕರ, ನರೇಂದ್ರ ವರ್ಮಾ, ನವನಾಥ ಕುಸಾಳೆ, ಸೂರ್ಯಕಾಂತ ವಾರದ, ಚಂದ್ರಕಾಂತ ಗೊಬ್ಬುಕರ್, ಅನೀಲ ಬೊರಗಾಂವಕರ್, ನಾಗಣ್ಣಾ ರಾಂಪೂರೆ, ಶ್ರೀಧರ ಜೋಶಿ, ಸದಾನಂದ ಕುಂಬಾರ, ಮಹಿಳಾ ಘಟಕ, ಯುವ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡರು.
ಕಾವಲುಗಾರ ಸಾವು
ಗುಲ್ಬರ್ಗ: ಇಲ್ಲಿನ ಜೇವರ್ಗಿ ರಸ್ತೆ ಕೈಗಾರಿಕಾ ವಸಾಹತುವಿನಲ್ಲಿರುವ ಶಾಲೆಯ ಮಾಳಿಗೆಯಿಂದ ಬಿದ್ದು ಕಾವಲುಗಾರ ಮೃತಪಟ್ಟಿದ್ದಾನೆ. ಬ್ರಹ್ಮಪುರ ಬಡಾವಣೆಯ ನಿವಾಸಿ ರಾಘವೇಂದ್ರ(50) ಮೃತನು. ಮಾಯಾ ಮೋರೆ ಮೆಮೋರಿಯಲ್ ಶಾಲೆಯಲ್ಲಿ ಈತ ಕಾವಲುಗಾರನಾಗಿದ್ದ. ರಾತ್ರಿ ಮಾಳಿಗೆ ಮೇಲೆ ಮಲಗಿದ್ದ ಸಂದರ್ಭದಲ್ಲಿ ಮೂತ್ರ ವಿಸರ್ಜೆನೆಗೆ ಎದ್ದಿದ್ದಾನೆ. ನಿದ್ದೆಗಣ್ಣಲ್ಲಿ ಆಯತಪ್ಪಿ ಕೆಳಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಅಮೀತಸಿಂಗ್, ಡಿವೈಎಸ್ಪಿ ನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಉಚಿತ ಪ್ರಸಾದ ನಿಲಯಕ್ಕೆ ಅರ್ಜಿ ಆಹ್ವಾನ
ಗುಲ್ಬರ್ಗ: ನಗರದ ರೇಣುಕಾಚಾರ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಯ ಪ್ರತಿಭಾವಂತ ಬಡ ಜಂಗಮ ಬಾಲಕರಿಗೆ ಉಚಿತ ಪ್ರಸಾದ ನಿಲಯಕ್ಕೆ ಅರ್ಜಿ ಅಹ್ವಾನಿಸಲಾಗಿದೆ.  ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಯ ಜಂಗಮ ಸಮುದಾಯದ ಪ್ರತಿಭಾವಂತ ಬಡ ಜಂಗಮ ಬಾಲಕರು ಏಪ್ರಿಲ್ 2014 ರಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಮುಂದಿನ ಶಿಕ್ಷಣಕ್ಕಾಗಿ ಪ್ರವೇಶ ಪಡೆಯಲಿರುವ ಪಡೆದಿರುವ ಬಾಲಕರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಬಾಲಕರು ಅಂಕಪಟ್ಟಿ ಪ್ರತಿ, ಸ್ವ ವಿಳಾಸ, ಭಾವಚಿತ್ರ ಮತ್ತು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿ ತಮ್ಮ ಗ್ರಾಮದ ಇಬ್ಬರು ಗಣ್ಯರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಅರ್ಜಿಯನ್ನು ನಮೂದಿಸಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜೂನ್ 30 ಕೊನೆ ದಿನವಾಗಿದೆ.
ವಿಳಾಸ: ರಾಜಶೇಖರ ಕೆ.ಹಿರೇಮಠ ನ್ಯಾಯವಾದಿಗಳು, ಪ್ಲಾಟ್ ನಂ 13, ಕಲ್ಯಾಣನಗರ, ಲಾಹೋಟಿ ಪೆಟ್ರೋಲ್ ಬಂಕ್ ಹಿಂದುಗಡೆ, ಗುಲ್ಲಾಬೌಡಿ, ಐವಾನ-ಎ-ಶಾಹಿ ರಸ್ತೆ ಗುಲ್ಬರ್ಗ- 585 102  ಮಾಹಿತಿಗೆ ಕೆ.ಎಸ್. ಹಿರೇಮಠ- 9480027243 ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement