ರಾಜ್ಯದಲ್ಲಿ ಉತ್ತಮ ಜವಳಿ ನೀತಿ ಜಾರಿ: ಸಚಿವ
ಕೆಂಭಾವಿ: ದೇಶದಲ್ಲೇ ಉತ್ತಮ ಜವಳಿ ನೀತಿ ಜಾರಿಗೊಳಿಸಿದ ಕೀರ್ತಿ ಕರ್ನಾಟಕದ್ದು. ಈ ಜವಳಿ ನೀತಿಯಿಂದ ಹಲವಾರು ನೇಕಾರ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿವೆ. ರಾಜ್ಯದ ಅನೇಕ ಕಡೆ ಜವಳಿ ಪಾರ್ಕ್ ನಿರ್ಮಾಣ ಮಾಡಲು ಸಹಕಾರಿಯಾಗಿದೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜವಳಿ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದರು.
ಭಾನುವಾರ ಸಮೀಪದ ಮುದನೂರ ಗ್ರಾಮದಲ್ಲಿ ಬೆಂಗಳೂರಿನ ವಸ್ತ್ರದಾತ ಮಾಸಪತ್ರಿಕೆ ಹಾಗೂ ರಾಮನಾಥ ಸೇವಾ ಸಮಿತಿ, ಮುದನೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯ ದೇವಾಂಗ ನೇಕಾರ ಯುವಜನ ಸಮಾವೇಶದಲ್ಲಿ ಭಾಗವಹಿಸಿ, ಜವಳಿ ಉದ್ಯಮಕ್ಕೆ 10 ಸಾವಿರ ಕೋಟಿ ರು. ಬಂಡವಾಳ ಹೂಡಲಾಗಿದೆ. ನೇಕಾರರಿಗೆ ಸಾಲ ರೂಪದಲ್ಲಿ ರು. 42 ಸಾವಿರ ಕೋಟಿ ಮೀಸಲು, ಆಧುನಿಕ ಯಂತ್ರಗಳನ್ನು ಕೊಳ್ಳಲು ಯುವಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೇರಿದಂತೆ ಹಲವು ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿದೆ. ಇನ್ನೂ ಹಲವಾರು ಯೋಜನೆಗಳ ಬಗ್ಗೆ ತಿಳಿಸಲು ಈಗ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಅವುಗಳ ಬಗ್ಗೆ ಮಾತು ಬೇಡ ಎಂದರು.
ಬೆಂಗಳೂರಿನ ಸಿವಿಲ್ ಇಂಜೀನೀಯರ ಎಂ. ಉಮಾಶಂಕರ ಪ್ರಾಸ್ತಾವಿಕ ಮಾತನಾಡಿದರು. ಬಸವಕಲ್ಯಾಣದ ಶರಣ ಶಿವಲಿಂಗೇಶ್ವರ ಮಠದ ಡಾ. ಈಶ್ವರಾನಂದ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು, ವಸ್ತ್ರದಾತ ಮಾಸ ಪತ್ರಿಕೆಯ ಗೌರವ ಸಂಪಾದಕ ಬಿ. ನಾಗರಾಜ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ದೇವಾಂಗ ಸಮಾಜದ ಯುವಜನ ಸಂಘದ ಅಧ್ಯಕ್ಷ ಎಣ್ಣಿಗೇರೆ ವೆಂಕಟರಾಮಯ್ಯ, ಕೆ. ನಾರಾಯಣ, ಕರ್ನಾಟಕ ರಾಜ್ಯ ದೇವಾಂಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಎಚ್. ಪಾರ್ವತಿ, ಆರ್. ಭಾಸ್ಕರ್, ಭಾಗ್ಯ ಚಂದ್ರಶೇಖರ, ರಾಜೇಶ ಬುರುಡೆಕಟ್ಟೆ, ವಿನೋದಕುಮಾರ, ಭಾರತಿ ರಮೇಶ, ಎಸ್.ಜಿ. ಹೇಮಲತಾ, ರಮೇಶ ಮಾಳಾ, ಎಮ್. ವಿಶ್ವನಾಥ, ಎಚ್. ಎಸ್. ರಾಮಚಂದ್ರಪ್ಪ, ಡಾ. ಪ್ರಮಿಳಾ ಮಾಧವ, ವಿಜಯರೆಡ್ಡಿ ಪಾಟೀಲ ಭಾಗವಹಿಸಿದ್ದರು. ಬಿ.ಆರ್. ಶಾಂತಪ್ಪ ಸ್ವಾಗತಿಸಿದರು, ಮಡಿವಾಳಪ್ಪ ನಿರೂಪಿಸಿದರು, ಶಾಂತರೆಡ್ಡಿ ಚೌಧರಿ ವಂದಿಸಿದರು. ಇದೇ ಸಂದರ್ಭದಲ್ಲಿ ದೇವರ ದಾಸಿಮಯ್ಯನವರ ವಚನಗಳು ಹಾಗೂ ದಶೋಪನಿಷತ್ ಕೃತಿಯನ್ನು ಬಿಡುಗೊಳಿಸಲಾಯಿತು. ನಂತರ ಸಮಾಜದ ವಿವಿಧ ಗಣ್ಯರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಸನ್ಮಾನಿಸಿದರು.