ಸಮರ್ಪಕವಾಗಿ ಅನುದಾನ ಬಳಸಿ
ಶಹಾಪುರ: ಜಿಲ್ಲೆಯಲ್ಲಿಯೆ ಹೆಚ್ಚಿನ ಅನುದಾನ ಶಹಾಪುರ ಪುರಸಭೆಗೆ ಬಂದಿದ್ದು, ಇದರ ಸದ್ಬಳಕೆ ಹಾಗೂ ಹಣ ದುರ್ಬಳಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು ಎಂದು ಸ್ಥಳೀಯ ಶಾಸಕ ಗುರುಪಾಟೀಲರು ತಿಳಿಸಿದ್ದಾರೆ.
ಪುರಸಭೆ ಎಸ್ಎಫ್ಸಿ ಯೋಜನೆಯ ಕುರಿತು ಸರ್ಕಾರದಿಂದ ಬಂದ ಅನುದಾನದ ಬಗ್ಗೆ ಸುದ್ದಿಗಾರರೊಂದಿಗೆ ಅಭಿಪ್ರಾಯ ಹಂಚಿಕೊಂಡ ಅವರು, 2014-15ನೇ ಸಾಲಿಗೆ ಪಟ್ಟಣದ ಪುರಸಭೆಗೆ ಎಸ್ಎಫ್ಸಿ ಯೋಜನೆಯಡಿ ರು. 4.49 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದರಂತೆ ಬಿಆರ್ಜಿಎಫ್ ಯೋಜನೆಯಡಿಯಲ್ಲಿ ರು. 55 ಲಕ್ಷ, 13ನೇ ಹಣಕಾಸು ಯೋಜನೆಯಡಿ ರು. 88 ಲಕ್ಷ ಅನುದಾನ ಮಂಜುರಾಗಿದೆ. ತಕ್ಷಣ ಅಗತ್ಯತೆಗನುಗುಣವಾಗಿ ಕ್ರಿಯಾಯೋಜನೆ ತಯಾರಿಸಬೇಕು. ಅನುಮೋದನೆ ಪಡೆದು ಕಾಮಗಾರಿ ನಿರ್ವಹಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಆದ್ಯತೆ: ಶಾಸಕರು ಪ್ರಮುಖವಾಗಿ ಕುಡಿಯುವ ನೀರು ಯೋಜನೆ, ನೀರಿನ ಅಭಾವ ಪರಿಸ್ಥಿತಿ ನಿಭಾಯಿಸುವ ಯೋಜನೆ ಗಳಿಗೆ ಆದ್ಯತೆ ಮೇಲೆ ಅವಕಾಶ ಕಲ್ಪಿಸುವುದು. ಸುಸಜ್ಜಿತ ಶೌಚಾಲಯಗಳ ನಿಮಾರ್ಣ ತರಕಾರಿ ಮಾರುಕಟ್ಟೆ ಹಾಗೂ ಸಣ್ಣ ಪ್ರಮಾಣದ ಮಾರುಕಟ್ಟೆಯ ನಿರ್ಮಾಣ, ಒಳಚರಂಡಿ ನಿರ್ಮಾಣ, ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಅಳವಡಿಸಿಕೊಳ್ಳಬೇಕು. ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನತೆಯ
ಹಿತದೃಷ್ಟಿಯಿಂದ ಹಲವಾರು ಅಗತ್ಯ ಯೋಜನೆ ಅನುಷ್ಠಾನಗೊಳಿಸಬೇಕು. ಇದನ್ನು ಪ್ರಸ್ತುತ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದು, ಅದರಂತೆ ಸೂಕ್ತ ಕ್ರಮಕೈಗೊಳ್ಳುವುದು ಮತ್ತು ಕ್ರಿಯಾಯೋಜನೆ ಮಾಡುವಾಗ ಪ್ರತಿ ವಾರ್ಡ್ನ ಸದಸ್ಯರ ಸಲಹೆ ಸೂಚನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕರು ಸಲಹೆ ನೀಡಿದರು.
ಬಿಆರ್ಜಿಎಫ್ ಹಾಗೂ 13ನೇ ಹಣಕಾಸು ಯೋಜನೆಯಡಿಲ್ಲಿ ಮಂಜೂರಾದ ಅನುದಾನ ಸಮರ್ಪಕವಾಗಿ ನಿರ್ವಹಿಸಬೇಕು. ಹಣ ದುರ್ಬಳಕೆ ಹಾಗೂ ಕಾಮಗಾರಿ ನಡೆದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೆ ಅಂಥವರ ವಿರುದ್ಧ ಕ್ರಮ ಅನಿವಾರ್ಯವೆಂದು ಶಾಸಕ ಗುರುಪಾಟೀಲ ಶಿರವಾಳ ಎಚ್ಚರಿಸಿದ್ದಾರೆ.
ಯಾದಗಿರಿಯಲ್ಲಿ ಬಿಜೆಪಿ ವಿಜಯೋತ್ಸವ
ಯಾದಗಿರಿ: ನರೇಂದ್ರ ಮೋದಿ ಅವರು ದೇಶದ 15ನೇ ಪ್ರಧಾನಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಇಲ್ಲಿನ ಗಾಂವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಕಳೆದ 10 ವರ್ಷಗಳಲ್ಲಿ ದೇಶವನ್ನಾಳಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಯುಗಾಂತ್ಯವಾಗಿದೆ. ಮೋದಿ ಅವರು ದೇಶದ ಪ್ರಧಾನಿಯಾಗಿರುವುದು ದೇಶದ ಪ್ರತಿಯೊಬ್ಬ ಪ್ರಜೆಗೂ ಸಂತಸ ತಂದಿದೆ ಎಂದರು. ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ರಮೇಶ ಕೋಟಿಮನಿ ಮಾತನಾಡಿ, ಗುಜರಾತ್ ರಾಜ್ಯವನ್ನು ಅಭಿವೃಧ್ಧಿ ಪಡಿಸಿದಂತೆ ಮೋದಿ ಅವರು ಭಾರತವನ್ನು ಅಭಿವೃದ್ಧಿಪಡಿಸಲಿದ್ದಾರೆ. ದೇಶದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ವೀರಣಗೌಡ ಮಲ್ಲಾಬಾದಿ, ಮುಖಂಡರಾದ ಅಯ್ಯಣ್ಣಾ ಹುಂಡೇಕಾರ್, ಲಿಂಗಪ್ಪ ಹತ್ತಿಮನಿ, ದೇವಿಂದ್ರನಾಥ ನಾದ್, ದೇವರಾಜ ನಾಯಕ ಸೇರಿದಂತೆ ಇನ್ನಿತರರು ಇದ್ದರು.
'28.65 ಕೋಟಿ ಬೆಳೆ ಪರಿಹಾರ ಮಂಜೂರು'
ಆಳಂದ: ಕಳೆದ ಮಾರ್ಚ್ನಲ್ಲಿ ಸುರಿದ ಆಲಿಕಲ್ಲು ಮಳೆಗೆ ಅಪಾರ ಬೆಳೆ ಹಾನಿಯಾಗಿ, ಪರಿಹಾರಕ್ಕಾಗಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಾಗ ಆಡಳಿತ ಯಂತ್ರ ಚುರುಕುಗೊಂಡು ಕೇಂದ್ರದ ಅಧ್ಯಯನ ತಂಡ ಬೆಳೆಹಾನಿ ವೀಕ್ಷಿಸಿದರು. ಸದ್ಯ ತಾಲೂಕಿಗೆ 28.65 ಕೋಟಿ ಪರಿಹಾರ ಮಂಜೂರಾಗಿದೆ ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಆಲಿಕಲ್ಲು ಮಳೆ, ಗಾಳಿಗೆ ರೈತರ ಬೆಳೆಗಳಲ್ಲದೇ ಇತರೆ ವಸ್ತುಗಳು ಹಾನಿಗೀಡಾಗಿವೆ. ಹಾನಿ ಪ್ರಮಾಣ ಹೆಚ್ಚಾದರೂ ಪರಿಹಾರ ನೀಡುವಲ್ಲಿ ವಿಳಂಬವಾಗಿರುವುದಕ್ಕೆ ಚುನಾವಣಾ ನೀತಿ ಸಂಹಿತೆ ಕಾರಣವಾಗಿತ್ತು ಎಂದರು.
ರೈತರು ಯಾವುದೇ ದಲ್ಲಾಳಿಗಳ ಮಾತಿಗೆ ಮರುಳಾಗಬಾರದು. ಮಂಜೂರಾದ ಹಣ ರೈತರ ಬ್ಯಾಂಕ್ ಖಾತೆಗಳಿಗೆ ಜಮಾವಣೆಗೊಂಡು, ಮಂಜೂರಾತಿ ಪತ್ರವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಕಾರ್ಯಕ್ರಮ ಆಯೋಜಿಸಿ ಸಾಂಕೇತಿಕವಾಗಿ ರೈತರಿಗೆ ಬೆಳೆ ಹಾನಿ ಪರಿಹಾರದ ಮಂಜೂರಾತಿ ಪತ್ರಗಳನ್ನು ನೀಡಲಾಗುವುದು ಎಂದರು.
ಅಮರ್ಜಾ ನದಿಗೆ ನೀರು: ತಾಲೂಕಿನಲ್ಲಿ ಕೆರೆಗಳ ನಿರ್ಮಾಣ ಹಾಗೂ ಭೀಮಾ ನದಿಯಿಂದ ಅಮರ್ಜಾ ನದಿಗೆ ನೀರು ತುಂಬುವ ಪ್ರಸ್ತಾವನೆಗೆ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಧಾನ ಕಾರ್ಯದರ್ಸಿಗಳ ಸಭೆ ಕರೆಯಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಗುಲ್ಬರ್ಗದಲ್ಲಿ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ತಾಲೂಕಿನ ವಾಗ್ದರಿ ರಿಬ್ಬನಪಲ್ಲಿ, ಆಳಂದ ನಿಂಬರ್ಗಾ, ಆಳಂದ ಖಜೂರಿ, ಆಳಂದ ಮಾದನಹಿಪ್ಪರ್ಗಾ, ಆಳಂದ ತಂಬಾಕವಾಡಿ, ಆಳಂದ ಚಿಂಚೋಳಿ ಸೇರಿದಂತೆ ವಿವಿಧ ರಸ್ತೆಗಳ ಎರಡು ಬದಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ನೆಡುವಂತೆ ಕೇಳಿಕೊಂಡಾಗ ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳವುದಾಗಿ ಭರವಸೆ ನೀಡಿದ್ದಾರೆಂದು ಪಾಟೀಲ್ ತಿಳಿಸಿದರು. ಬಿ.ಕೆ.ಪಾಟೀಲ್ ಉಪಸ್ಥಿತರಿದ್ದರು.
ಹೈ-ಕ ವಿಭಾಗದ ಕನ್ನಡಪರ ಸಂಘಟನೆ ಒಕ್ಕೂಟ ರಚನೆ
ಗುಲ್ಬರ್ಗ: ನಗರದ ಕನ್ನಡ ಭವನದಲ್ಲಿ ಇಚೆಗೆ ಎಲ್ಲಾ ಕನ್ನಡಪರ ಸಂಘಟನೆಗಳು ಸಭೆಯಲ್ಲಿ ಒಗ್ಗೂಡಿ ಹೈ-ಕ ವಿಭಾಗದ ಕನ್ನಡ ಪರ ಸಂಘಟನೆಗಳ ಒಕ್ಕೂಟ ರಚನೆಗೆ ಬಂದವು.
ಭಾಗವಹಿಸಿದ ಸಂಘಟನೆಗಳು: ಜಯ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣಶೆಟ್ಟಿ ಬಣ), ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಕನ್ನಡ ಸೇನೆ ಕರ್ನಾಟಕ, ಕನ್ನಡಿಗರ ರಕ್ಷಣಾ ವೇದಿಕೆ, ವೀರ ಕನ್ನಡಿಗರ ಸೇನೆ, ಜೈ ಕನ್ನಡಿಗರ ರಕ್ಷಣಾ ವೇದಿಕೆ, ಕನ್ನಡ ನಾಡು ವೇದಿಕೆ, ಜೈ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಭೂಮಿ ಜಾಗೃತಿ ಸಮಿತಿ, ಕರುನಾಡು ರಕ್ಷಣಾ ವೇದಿಕೆ, ಜೈ ಕನ್ನಡ ಜಾಗೃತಿ ವೇದಿಕೆ, ಹೈ-ಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ ಬಣ)
ಅದೇ ಸಂದರ್ಭದಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಶರಣು ಗದ್ದುಗೆ (ಗೌರವ ಸಲಹೆಗಾರ), ವೀರಣ್ಣ ಕೋರಳ್ಳಿ (ಗೌರವ ಅಧ್ಯಕ್ಷ), ಶಿವಶರಣಪ್ಪ ಖಣದಾಳ (ಅಧ್ಯಕ್ಷ), ನಂದಕುಮಾರ ನಾಗಭುಜಂಗೆ, ಮಂಜುನಾಥ ಹಾಗರಗಿ (ಕಾರ್ಯಧ್ಯಕ್ಷ), ಭವಾನಿಕುಮಾರ ವಳಕೇರಿ, ತಿಪ್ಪಣ್ಣ ಲಂಡನಕ್ರ್ (ಉಪಾಧ್ಯಕ್ಷ), ಲಿಂಗರಾಜ ಸಿರಗಾಪುರ (ಮಹಾಪ್ರಧಾನ ಕಾಯದರ್ಶಿ), ನಾಗರಾಜ ಸ್ವಾದಿ, ಅರವಿಂದ ನಾಟಿಕರ್, ಮನೋಹರ ಕುಮಾರವ ಬೀರನೂರ (ಸಂಘಟನಾ ಕಾರ್ಯದರ್ಶಿ).
ಜಿಲ್ಲಾ ಘಟಕದ ಪದಾಧಿಕಾರಿಗಳು: ಸಚೀನ್ ಫರತಾಬಾದ (ಗೌರವಾಧ್ಯಕ್ಷ), ಅಮೃತ ಪಾಟೀಲ್ ಸಿರನೂರ (ಜಿಲ್ಲಾಧ್ಯಕ್ಷ), ದೇವಿಂದ್ರ ದೇಸಾಯಿ ಕಲ್ಲೂರ, ಕಾಶಿನಾಥ ಮಾಳಗೆ, ಮಲ್ಲಿಕಾರ್ಜುನ ಸಾರವಾಡ (ಉಪಾಧ್ಯಕ್ಷ), ಚಂದ್ರಕಾಂತ ಗುತ್ತೇದಾರ (ಪ್ರಧಾನ ಕಾರ್ಯದರ್ಶಿ), ಗೋಪಾಲ ನಾಟೀಕರ್ (ಕಾರ್ಯದರ್ಶಿ)ರನ್ನು ನೂತನವಾಗಿ ನೇಮಕ ಮಾಡಲಾಯಿತು ಎಂದು ವಿಭಾಗೀಯ ವಕ್ತಾರ ಮಂಜುನಾಥ ಎಸ್.ನಾಲವಾರಕರ್ ತಿಳಿಸಿದ್ದಾರೆ.
ಸಂಕಷ್ಟದಲ್ಲಿದ್ದವರಿಗೆ ಅಂಗಡಿ ಆಸರೆ
ಗುಲ್ಬರ್ಗ: ಮಹಾನಗರ ಮಂಗಳವಾರ ಒಂದು ಗಂಟೆ ಸುರಿದ ಆಲಿಕಲ್ಲು ಮಳೆ, ಸಿಡಿಲಿನ ಆರ್ಭಟಕ್ಕೆ ತತ್ತರಿಸಿತ್ತು. ಈ ವೇಳೆ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬಿದ್ದ ಸಿಡಿಲಿನಿಂದ ಸುಟ್ಟ ಗಾಯ ಅನುಭವಿಸಿ ಮಳೆಯಲ್ಲೇ ಬಿದ್ದಿದ್ದ ಹಾಗೂ ಮರಗಳ ಅಡಿಯಲ್ಲಿ ಆಸರೆ ಪಡೆದು ಕೈಯಲ್ಲಿ ಜೀವ ಹಿಡಿದು ಸಂಕಷ್ಟಕ್ಕೀಡಾಗಿದ್ದ ಜನರನ್ನು ಪ್ರಕಾಶ ಕಬ್ಬಿನ ಹಾಲಿನ ಅಂಗಡಿ ಪ್ರಮುಖ ಆಸರೆಯಾಗಿ ಹೊರಹೊಮ್ಮಿತು.
ಸಿಡಿಲಿನ ಆರ್ಭಟ ಜೋರಾಗುತ್ತಿದ್ದಂತೆಯೇ ಆಲಿಕಲ್ಲು ಮಳೆ ಸುರಿಯಲಾರಂಭಿಸಿತು. ಇದರಿಂದ ಕಂಗಾಲಾದ ಜನ ಮರಗಳಡಿಯಲ್ಲಿ ಆಸರೆ ಪಡೆದರು. ಜಾತ್ರಾ ಮೈದಾನದಲ್ಲಿ ಜೋಪಡಿಗಳಲ್ಲಿ ಅನೇಕ ಕುಟುಂಬಗಳು ವಾಸವಾಗಿದ್ದವು. ಬಿರುಗಾಳಿಗೆ ಜೋಪಡಿಗಳು ಹಾರಿ ಹೋಗಿದ್ದರಿಂದ ಜನರೆಲ್ಲ ಆಲಿಕಲ್ಲಿಗೆ ಹೌಹಾರಿ ಹೋದರು. ಮರುಕ್ಷಣ ಕಬ್ಬಿನ ಹಾಲಿನ ಅಂಗಡಿ ಹೊಕ್ಕರು. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ನೂರಾರು ಮಂದಿ ಹಾಲಿನ ಅಂಗಡಿಯಲ್ಲಿ ಆಸರೆ ಪಡೆದರು.
ಹೊರಗಡೆ ಮಳೆ ಜೋರಾಯ್ತು. ಅಂಗಡಿ ಹಿಂಭಾಗದ ಮರಕ್ಕೆ ಸಿಡಿಲು ಅಪ್ಪಿಸಿತು. ಸ್ಥಳದಲ್ಲೇ ಚಂದ್ರಕಾಂತ ಹುಗ್ಗಿ ಸಾವನ್ನಪ್ಪಿಬಿಟ್ಟ. ಇತರೆ ನಾಲ್ಕಾರು ಮಂದಿ ಝಳಕ್ಕೆ ಮೂರ್ಛೆ ಹೋದರು. ಮಳೆಯನ್ನೂ ಲೆಕ್ಕಿಸದೆ ಹಾಲಿನ ಅಂಗಡಿಯಲ್ಲಿದ್ದ ಸಿಬ್ಬಂದಿ, ಸ್ವಾಮಿ ಸೇರಿದಂತೆ ಅನೇಕರು ನೆರವಿಗೆ ಧಾವಿಸಿದರು. ಗಾಯಗೊಂಡವರೆಲ್ಲರಿಗೂ ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಪ್ರಕಾಶ ಬೆನಕನಳ್ಳಿ ನೇತೃತ್ವದಲ್ಲಿ ಕೈಗೊಳ್ಳಲಾಯ್ತು.