ಕಬ್ಬಿನ ಹಣ ಪಾವತಿ ಚುರುಕಿಗೆ ನಿರ್ಧಾರ
ಕ.ಪ್ರ. ವಾರ್ತೆ , ಗುಲ್ಬರ್ಗ , ಮೇ 28
ಪೂರೈಸಿರುವ ಕಬ್ಬಿಗೆ ಪ್ರತಿಯಾಗಿ ಹಣ ಕೊಡುವಂತೆ ಆಳಂದ ರೈತರು ಶಾಸಕ ಬಿ. ಆರ್. ಪಾಟೀಲ್ ನೇತೃತ್ವದಲ್ಲಿ ಮಂಗಳವಾರ ಹೋರಾಟ ನಡೆಸಿ ಕಾರ್ಖಾನೆ ಮಹಾದ್ವಾರ ಹಾಗೂ ಹಿರಿಯ ಅಧಿಕಾರಿಗಳ ಕಚೇರಿಗ ಬೀಗ ಜಡಿದಿದ್ದರ ಪರಿಣಾಮ ಎಚ್ಚೆತ್ತಿರುವ ಭೂಸನೂರು ಎನ್ನೆಸ್ಸೆಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ತಕ್ಷಣ 5 ಕೋಟಿ ಬಿಡುಗಡೆ ಮಾಡಿದೆ.
ಭೂಸನೂರು ಕಾರ್ಖಾನೆಯ ಡಿಜಿಎಂ (ಕಬ್ಬು ವಿಭಾಗ) ವಿಜಯಕುಮಾರ ಕುಲಕರ್ಣಿ ಹಾಗೂ ಮಾನವಾಭಿವೃದ್ಧಿ ಕೋಶದ ರಮೇಶ ಚೇಲಾಪುರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ. ಇಲ್ಲಿನ ರೈತರ ಹೋರಾಟದ ಬಗ್ಗೆ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಡಲಾಯಿತು. ತಕ್ಷಣ 2 ದಿನಗಳಲ್ಲಿ 3 ಹಾಗೂ 2 ಕೋಟಿ ರು ಸೇರಿದಂತೆ 2 ಹಂತಗಳಲ್ಲಿ 5 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಅವರು ಹೇಳಿದ್ದಾರೆ.
ಹಣ ಕೊಡದೆ ಸಮಸ್ಯೆ: ಪ್ರತಿದಿನ 7,000 ಟನ್ ಕಬ್ಬು ಅರೆಯುವ ಸಾಮರ್ಥ್ಯವಿರುವ ಈ ಕಾರ್ಖಾನೆ ಕಳೆದ ನವೆಂಬರ್ನಿಂದಲೇ ಕಬ್ಬು ನುರಿಸಲು ಆರಂಭಿಸಿ ಏಪ್ರಿಲ್ ತಿಂಗಳಲ್ಲಿ ಸ್ಥಗಿತಗೊಳಿಸಿತ್ತು. ಕ್ವಿಂಟಾಲ್ ಕಬ್ಬಿಗೆ 1,800 ನಂತೆ ಕಾರ್ಖಾನೆ ಹಣ ಪಾವತಿಸಬೇಕು. ಫೆಬ್ರವರಿವರೆಗೂ ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಸಲಾಗಿತ್ತು. ಕಾರಣಾಂತರಗಳಿಂದ ನಂತರ ರೈತರಿಗೆ ಹಣ ಪಾವತಿಯಾಗಿರಲಿಲ್ಲ. ಇದರಿಂದಾಗಿಯೇ ಸಮಸ್ಯೆ ಉಂಟಾಗಿತ್ತು.
11 ಸಾವಿರ ರೈತರು ಕಬ್ಬು ಪೂರೈಸಿದ್ದಾರೆ: ರೈತರೆಲ್ಲರೂ ಒಂದಾಗಿ ಶಾಸಕರ ನೇತೃತ್ವದಲ್ಲಿ ಹೋರಾಟ ಮಾಡಿ ಬೀಗ ಜಡಿದಾಗ ಕಾರ್ಖಾನೆ ಇದೀಗ 5 ಕೋಟಿ ರೈತರಿಗೆ ನೀಡಲು ಮುಂದಾಗಿದೆ. ಇನ್ನೂ 22 ಕೋಟಿ ಮೊತ್ತವನ್ನು ಹಂತಹಂತವಾಗಿ ಬಿಡುಗಡೆ ಮಾಡಿ ರೈತರ ಖಾತೆಗೆ ಜಮಾ ಮಾಡಲು ನಿರ್ಧರಿಸಿದೆ. ಕ್ವಿಂಟಾಲ್ಗೆ 1,800 ದರದಂತೆ ಹಣ ಪಾವತಿಸಲಾಗುತ್ತದೆ. ಕಬ್ಬಿನ ದರ ಹೆಚ್ಚಳದ ವಿಚಾರದಲ್ಲಿ ಆಡಳಿತ ಮಂಡಳಿ ಹಾಗೂ ಸರ್ಕಾರದ ಮಧ್ಯೆ ಅನೇಕ ಚರ್ಚೆಗಳಾಗಿವೆ. ಸದ್ಯಕ್ಕಂತೂ ಕ್ವಿಂಟಾಲ್ಗೆ 1,800 ನಂತೆ ಮಾತ್ರ ಪಾವತಿಸಲಾಗುತ್ತಿದೆ ಎಂದರು.
27 ಕೋಟಿ ಬಾಕಿ: ಫೆಬ್ರವರಿಯಿಂದ ಏಪ್ರಿಲ್ವರೆಗೂ ಕಬ್ಬು ಪೂರೈಸಿರುವ ಸುಮಾರು 11 ಸಾವಿರ ರೈತರಿಗೆ ಒಟ್ಟು 27 ಕೋಟಿ ಹಣ ಕೊಡುವುದಿತ್ತು. ಇದೀಗ 5 ಕೋಟಿ ರು ಹಣ ನೀಡಲಾಗಿದೆ. ಬರುವ ದಿನಗಳಲ್ಲಿ ಇನ್ನೂ 22 ಕೋಟಿ ಹಣ ಪಾವತಿಸಲಾಗುತ್ತದೆ. ದಿನಕ್ಕೆ 1.50 ಕೋಟಿ, ರೈತರಿಗೆ ಪಾವತಿಸಲಾಗುತ್ತದೆ ಎಂದು ವಿಜಯಕುಮಾರ್ ಹಾಗೂ ರಮೇಶ ಹೇಳಿದ್ದಾರೆ.
ಈ ಸುಗ್ಗಿಯಲ್ಲಿ 9 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದ್ದರೂ ಅರೆದದ್ದು 7.34 ಲಕ್ಷ ಟನ್ ಮಾತ್ರ. ಸಿಬ್ಬಂದಿ ಕೊರತೆ ಹಾಗೂ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಬ್ಬು ನುರಿಸುವಲ್ಲಿ ಗುರಿ ತಲುಪಲಾಗಿಲ್ಲ ಎಂದರು.
ಶೇ. 85 ರಷ್ಟು ಕಬ್ಬು ಸ್ಥಳೀಯರದ್ದು: ಎನ್ಎಸ್ಎಲ್ ಕಾರ್ಖಾನೆ ನುರಿಸಿರುವ ಕಬ್ಬಿನ ಪೈಕಿ ಶೇ.85ರಷ್ಟು ತನ್ನ ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬನ್ನೇ ಖರೀದಿಸಿದೆ. ಇನ್ನೂ ಆರಂಭದಲ್ಲಿ ಕಟಾವು ತಂಡಗಳ ಕೊರತೆ, ಕಾರ್ಮಿಕರ ಕೊರತೆಯಿಂದಾಗಿ ಹೊರಗಿನಿಂದ ಅಲ್ಪ ಪ್ರಮಾಣದಲ್ಲಿ ಕಬ್ಬು ಕಾರ್ಖಾನೆ ಖರೀದಿಸಿದೆ. ನಂತದ ದಿನಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ ಎಂದು ವಿಜಯಕುಮಾರ್ ಹೇಳಿದರು.
ರೈತರು, ರೈತ ಮುಖಂಡರು ಕಾರ್ಖಾನೆಗೆ ಬೀಗ ಹಾಕಿದ್ದಾರೆ. ಆಡಳಿತ ಮಂಡಳಿ ರೈತರ ಹಣ ಪಾವತಿಗೆ ಮುಂದಾಗಿರುವದರಿಂದ ತಕ್ಷಣ ಹೋರಾಟ ಕೈಬಿಡಬೇಕು. ಕಾರ್ಖಾನೆ ಜತೆಗೆ ಸಹಕರಿಸಬೇಕು ಎಂದು ಅವರು ರೈತ ಮುಖಂಡರು ಹಾಗೂ ಶಾಸಕರಿಗೆ ಮನವಿ ಮಾಡಿದ್ದಾರೆ.
10 ಕೋಟಿ ಬಿಡುಗಡೆಯಾದರೆ ಮಾತ್ರ ಬೀಗ ತೆರವು: ರೈತರ ನಿರ್ಧಾರ
2 ತಿಂಗಳಾದರೂ ರೈತರು ಪೂರೈಸಿರುವ ಕಬ್ಬಿಗೆ ಪ್ರತಿಯಾಗಿ ಹಣ ಪಾವತಿಸದೆ ಸುಮ್ಮನಿರುವುದನ್ನು ಖಂಡಿಸಿ ಹೋರಾಟ ಶುರು ಮಾಡಿದ್ದೇವೆ. ಕಾರ್ಖಾನೆ ಕಚೇರಿಗೆ ಬೀಗ ಜಡಿಯಲಾಗಿದೆ. ಬಾಕಿ 27 ಕೋಟಿ ಪೈಕಿ ಕೊನೆಪಕ್ಷ 10 ಕೋಟಿ ರುಪಾಯಿಯಾದರೂ ಬಿಡುಗಡೆಯಾಗಬೇಕು. ಆ ಹಣ ರೈತರಿಗೆ ಬಟವಾಡೆಯಾಗಬೇಕು. ಇಲ್ಲದೆ ಹೋದಲ್ಲಿ ಹಾಕಲಾದ ಬೀಗ ತೆರೆಯದೆ ಹೋರಾಟ ಮುಂದುವರಿಸಲಾಗುತ್ತದೆ ಎಂದರು.
ಎಚ್ಚರಿಕೆ: ರೈತರ ಕಬ್ಬಿಗೆ ಹಣ ಕೊಡದೆ ಸುಮ್ಮನಿರುವ ಕಾರ್ಖಾನೆ ನೀತಿಯನ್ನು ಟೀಕಿಸಿದ ಆಳಂದ ತಾಲೂಕು ಕಬ್ಬು ಹೋರಾಟಗಾರರ ಸಂಘದ ಅಧ್ಯಕ್ಷ ಧರ್ಮರಾಜ ಸಾಹು, ತಕ್ಷಣ ಕಾರ್ಖಾನೆ ರೈತರ ಪ್ರತಿ ಹೆಜ್ಜೆ ಇರಿಸಿದರೆ ಉತ್ತಮ. ಇಲ್ಲದೆ ಹೋದಲ್ಲಿ ಹೋರಾಟ ನಿರಂತರ ನಡೆಯುತ್ತದೆ. ಇನ್ನೂ ಉಗ್ರ ಸ್ವರೂಪ ತಾಳುತ್ತದೆ ಎಂದು ಎಚ್ಚರಿಸಿದರು.
ರೈತರ ಧರಣಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹು ಮೇ 29ರಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಮನೆ ಮುಂದೆ ರೈತರ ಹೋರಾಟವಿದೆ. ಸರ್ಕಾರದ ಪ್ರೋತ್ಸಾಹ ರೂಪದ 150 ಹಣವೂ ರೈತರಿಗೆ ಪಾವತಿಯಾಗಿಲ್ಲ ಎಂದರು.
ವಿಧಾನಸೌಧ ಚಲೋ: ಬೆಳಗಾವಿ ಅಧಿವೇಶನದಲ್ಲಿ ಕ್ವಿಂಟಾಲ್ ಕಬ್ಬಿಗೆ 2,650 ಘೋಷಿಸಿತ್ತಾದರೂ ಯಾವ ಕಾರ್ಖಾನೆಗಳೂ ಈ ಮೊತ್ತ ನೀಡುತ್ತಿಲ್ಲ. ಸರ್ಕಾರ ಅಂತಹ ಕಾರ್ಖಾನೆಗಳ ಪರವಾನಗಿ ರದ್ದುಪಡಿಸುವ ಮಾತನ್ನಾಡಿತ್ತು, ಆ ಕೆಲಸವೂ ಆಗಿಲ್ಲ. ನಾವು ಶೀಘ್ರವೇ ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಧರ್ಮರಾಜ ಸಾಹು ಹೇಳಿದ್ದಾರೆ.