ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೆಸರಲ್ಲಿ ಮಾತ್ರ ವಿಶೇಷ, ಸದನದಲ್ಲಿ ಬರೀ ಶೇಷ

Vishwanath S
Updated On : 29 May 2014, 11:25 am

ಕ.ಪ್ರ. ವಾರ್ತೆ ,  ಗುಲ್ಬರ್ಗ ,  ಮೇ 28
ಇಲ್ಲಿನ ಜಿಪಂ ಹಳೆ ಸಭಾಂಗಣದಲ್ಲಿ ಬುಧವಾರ ಸೇರಿದ್ದ ಮಹಾನಗರ ಪಾಲಿಕೆ ಚೊಚ್ಚಲ ಸಭೆ ನಗರ ನಿವಾಸಿಗಳ ಸಮಸ್ಯೆಗಳಿಗೆ ಕನ್ನಡಿಯಾಗಿ ಪರಿಹಾರದ ವೇದಿಕೆ ರೂಪದಲ್ಲಿ ಹೊರಹೊಮ್ಮುವುದಕ್ಕಿಂತ ಹೆಚ್ಚಾಗಿ ಒಣ ಚರ್ಚೆಗಳಿಗೆ- ವೈಯಕ್ತಿಕ ಪ್ರತಿಷ್ಠೆಗಳಿಗೆ ಸಾಕ್ಷಿಯಾಯಿತು.
ಪಾಲಿಕೆ ಸದಸ್ಯರು ಆಯ್ಕೆಯಾದ ನಂತರ ಮೇಯರ್-ಉಪ ಮೇಯರ್ ಚುನಾವಣೆಯ ಸಭೆ ಮಾತ್ರ ನಡೆದಿತ್ತು. ಇದಾದ ನಂತರ ನಡೆದ ಮೊದಲ ಸಭೆ ಇದಾಗಿದ್ದರಿಂದ ಸಹಜವಾಗಿಯೇ ಸದನದ ಕಲಾಪದ ಬಗ್ಗೆ ಸಾರ್ವಜನಿಕರಲ್ಲಿ ನಿರೀಕ್ಷೆ ಇತ್ತು.  ವಿಶೇಷ ಸಾಮಾನ್ಯ ಸಭೆ ಹೆಸರಿನಲ್ಲಿ ಸಭೆಯೇನೋ ಕೂಡಿತ್ತಾದರೂ ಹೆಸರಲ್ಲಿದ್ದ ವಿಶೇಷತೆ ಸಭೆಯಲ್ಲಿನ ಚರ್ಚೆಗಳಲ್ಲಿ ಇರಲೇ ಇಲ್ಲ.
ಒಂದೂವರೆ ಗಂಟೆ ತಡ: ನಿಗದಿಯಂತೆ ಬೆಳಗ್ಗೆ 10ಕ್ಕೆ ಆರಂಭವಾಗಬೇಕಿದ್ದ ಸಭೆ ಶುರುವಾದಾಗ 11 ಗಂಟೆ 25 ನಿಮಿಷ. ಮೇಯರ್ ಅಲಿಯಾ ಶಿರೀನ್, ಉಪ ಮೇಯರ್ ಮಹೇಶ ಹೊಸ್ಕೂರಕರ್ ಬಂದದ್ದೇ 11 ಗಂಟೆಗೆ. ಹೀಗಾಗಿ ಚೊಚ್ಚಲ ಸಭೆಯಲ್ಲಿ ಸಮಯಕ್ಕೆ ಕಿಮ್ಮತ್ತೇ ಇರಲಿಲ್ಲ.
ಹಿರಿಯಕ್ಕನ ಚಾಳಿ.... ಎಂಬಂತೆ ವಿಳಂಬವಾಗಿಯೇ ಸಭೆ ಆರಂಭವಾದರೂ ಸದಸ್ಯರು 1 ಗಂಟೆವರೆಗೂ ಆಗಮಿಸುತ್ತಲೇ ಇದ್ದದ್ದು ವಿಶೇಷ. ಇದಷ್ಟೇ ಅಲ್ಲ, ಒಂದು ಹಂತದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳು ನೇರವಾಗಿ ಸಭೆಯೊಳಗೆ ಪ್ರವೇಶ ಪಡೆದು ಮೈಕ್ ಹಿಡಿದು ಮಾತನಾಡಿದರು. ಸಭೆಯ ಮಹತ್ವದ ಚರ್ಚೆಯ ಘಟ್ಟದಲ್ಲೇ ಮದ್ಯಪ್ರವೇಶಿಸಿ ಮೇಯರ್‌ಗೆ ಮೆಚ್ಚುಗೆ, ಅಭಿನಂದನೆ ಪತ್ರ ಎಂದು ನೀಡುತ್ತ ಸಭಾ ಗಾಂಭೀರ್ಯಕ್ಕೆ  ಭಂಗ ತಂದರು.
ಪ್ರಮಾಣ ವಚನ ಸ್ವೀಕಾರದ ಸುತ್ತ ಚರ್ಚೆ: ಸಭೆ ಆರಂಭವಾಗುತ್ತಿದ್ದಂತೆಯೇ ಸದಸ್ಯೆ ಆರತಿ ತಿವಾರಿ ಪೌರಾಡಳಿತ ಕಾಯ್ದೆಯಂತೆ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವುದು ಕಡ್ಡಾಯ. ಇಲ್ಲಿ ನೋಡಿದರೆ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನವೇ ಸಭೆ ಶುರು ಮಾಡುತ್ತಿರುವಂತಿದೆ ಎಂದು ಮೇಯರ್ ಶಿರೀನ್‌ರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಪಾಲಿಕೆ ಕಾನೂನು ಕೋಶ ಈ ಬಗ್ಗೆ ಹೇಳೋದೇನು ಎಂದು ಪ್ರಶ್ನಿಸಿದರು.
ಈ ಪ್ರಶ್ನೆ ಸದನದಲ್ಲಿ ಕೋಲಾಹಲ ಉಂಟು ಮಾಡಿತು. ಪ್ರಮಾಣ ವಚನದ ವಿಚಾರದಲ್ಲಿ ಅಲಕ್ಷ್ಯ ತೋರಿದ್ದ ಪಾಲಿಕೆ ಪರಿಷತ್ ಶಾಖೆಯವರಿಗೆ ಇದು ಫಜೀತಿಗೆ ಇಟ್ಟಿತು. ಅನೇಕರು ಈ ಚರ್ಚೆಯನ್ನೇ ಸಾಗಹಾಕುವ ಪ್ರಯತ್ನ ಮಾಡಿದರೂ ತಿವಾರಿ ಪಟ್ಟು ಬಿಡಲಿಲ್ಲ.
45 ನಿಮಿಷ ವ್ಯರ್ಥ: ಮೇಯರ್- ಉಪ ಮೇಯರ್ ಇಬ್ಬರೂ ಕಾನೂನು ಪುಸ್ತಕದಲ್ಲಿ ಮೂಖ ತೂರಿಸಿ ಕಾಯ್ದೆ ಹೇಳೋದೇನು ಎಂಬುದನ್ನು ಅರಿಯಲು ಮುಂದಾದರು. ಇಷ್ಟೆಲ್ಲ ಆಗುವಷ್ಟರಲ್ಲಿ 45 ನಿಮಿಷಗಳು ಕಳೆದು ಹೋದವು. ಸದಸ್ಯ ಅಜಮತ್ ಗೋಲಾ ಪ್ರಮಾಣವಚನ ವಿಚಾರದಲ್ಲಿ ನಂತರ ಚರ್ಚಿಸಿ ನಿರ್ಧರಿಸೋಣ. ಸಭೆ ಮುಂದುವರಿಯಲಿ. ಈಗಲೇ ವಿಳಂಬವಾಗಿದೆ ಎಂದಾಗ ತಿವಾರಿ ಅವರು ಕೆರಳಿದರು.  ಸದಸ್ಯರು ಈ ಚರ್ಚೆಯಲ್ಲಿ ಮಧ್ಯೆ ಮೂಗು ತೂರಿಸುವುದು ಬೇಡ. ಅದೇನಿದ್ದರೂ ಮೇಯರ್ ನಿರ್ಧರಿಸಲಿ ಎಂದರು.
ತಡವರಿಸಿದ ಮೇಯರ್: ಇದೇ ವಿಚಾರದಲ್ಲಿ ಮೇಯರ್ ಶಿರೀನ್ ಸಭೆ ಮುಂದುವರಿಯಲಿ ಎಂದು ಹೇಳಿದರೆ ಉಪ ಮೇಯರ್ ಮಹೇಶ ಪ್ರಮಾಣ ಸ್ವೀಕರಿಸಿ ಸಭೆ ನಡೆಸೋಣ ಎಂದು ಹೇಳಿದಾಗ ಸಭೆಯಲ್ಲಿ ಗುಲ್ಲೋಗುಲ್ಲು.
ಇದಾದ ನಂತರ ಮೇಯರ್ ಶಿರೀನ್ 3 ಬಾರಿ ಪ್ರಮಾಣವಚನ ವಿಚಾರದಲ್ಲಿ ಗಟ್ಟಿ ಹೇಳಿಕೆ ನೀಡದೆ ತಡವರಿಸಿದರಲ್ಲದೆ ಗೊಂದಲ ಹಾಗೆಯೇ ಮುಂದುವರಿದಾಗ ಉಪಮೇಯರ್ ಮಹೇಶ ಪ್ರಮಾಣ ಸ್ವೀಕರಿಸಿಯೇ ಸಭೆ ಶುರು ಮಾಡೋಣ ಎಂದು ಚರ್ಚೆಗೆ ತೆರೆ ಎಳೆದರು.
ಕನ್ನಡದಲ್ಲೇ ಸಭಾ ಕಲಾಪ ನಡೆಯಲಿ: ಪಾಲಿಕೆ ಸಭೆಗೆ ಮುತ್ತಿಗೆ ಹಾಕಿದ ಜೈಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಕನ್ನಡದಲ್ಲೇ ಕಲಾಪ ನಡೆಯಬೇಕು ಎಂದರಲ್ಲದೆ ಮೇಯರ್, ಉಪ ಮೇಯರ್, ಸದಸ್ಯರೆಲ್ಲರೂ ಕನ್ನಡ ಮಾತನಾಡುವುದು ಕಡ್ಡಾಯ ಎಂದು ಆಗ್ರಹಿಸಿ ಘೋಷಣೆ ಕೂಗಿದರು.
ಮೇಯರ್ ಶಿರೀನ್ ಸಭಾರಂಭದಲ್ಲಿ ಕನ್ನಡದಲ್ಲಿ ನಾಲ್ಕು ವಾಕ್ಯ ಓದಿ ಎಲ್ಲರನ್ನು ಸ್ವಾಗತಿಸಿದ್ದರು. ಅವರೇ ಎದ್ದುಹೋಗಿ ಕನ್ನಡ ಸಂಘಟನೆಗಳಿಂದ ಮನವಿ ಪತ್ರ ಸ್ವೀಕರಿಸಿದರಲ್ಲದೆ ಕಲಾಪ ಕನ್ನಡದಲ್ಲೇ ಇರುವಂತೆ ಕ್ರಮ ಜರುಗಿಸುವ ಭರವಸೆ ನೀಡಿದರು. ಸಚಿನ್ ಫರತಾಬಾದ್ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗಿತ್ತು. ಮುತ್ತಿಗೆಕಾರರು ಸದನದ ಬಾಗಿಲಿಗೆ ಬಂದಾಗ ಸಭೆಯಲ್ಲಿ ಭಾರಿ ಗೊಂದಲ ಉಂಟಾಗಿತ್ತು.
ಉಳಿಯದ ಸಭಾ ಗಂಭೀರತೆ: ಮೊದಲೇ ಹೈ-ಕ ಜನಪರ ಸಂಘರ್ಷ ಸಮಿತಿಯ ಲಕ್ಷ್ಮಣ ದಸ್ತಿ ಏಕದಂ ಸದನದಲ್ಲಿ ಕಂಡು ಮೈಕ್ ಹಿಡಿದು ಮಾತನಾಡಿದ್ದಕ್ಕೆ ಎಲ್ಲರೂ ದಂಗಾಗಿದ್ದರು. ಈಗ ನೋಡಿದರೆ ಸಂಘಟನೆಗಳವರು ಬಾಗಿಲಿಗೇ ಬಂದು ಧಿಕ್ಕಾರ ಘೋಷಣೆ ಕೂಗುತ್ತಿದ್ದಾರಲ್ಲ ಎಂದು ಸದಸ್ಯರು ಆಕ್ಷೇಪಿಸಿದರು. ಸಭೆಯ ಗಂಭೀರತೆ ಉಳಿದಿಲ್ಲ. ಯಾರೋ ಸಬೆಗೆ ಬರುತ್ತಾರೆ, ಮಾತನಾಡುತ್ತಾರೆ ಎಂದರೆ ಹೇಗೆ ಎಂದು ಆಕ್ಷೇಪಿಸಿದರು. ರಮೇಶ ಕಮಕನೂರ್, ವಿಠ್ಠಲ ಜಾಧವ, ಸೈಯ್ಯದ್ ಅಹ್ಮದ್ ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಗೊಂದಲದ ಗೂಡು: 2013, ಮಾರ್ಚ್ 11 ರಂದು ಆಯ್ಕೆಯಾಗಿರುವ ಪುರಪಿತೃಗಳು ಸಭೆ ಸೇರಿದ್ದು ಇದೇ ಮೊದಲು. ಒಂದೂವರೆ ವರ್ಷದ ನಂತರ ನಡೆದ ಸಭೆಯಲ್ಲಿ ಗಂಭೀರತೆ, ಶಿಸ್ತು ಇರಬಹುದು,. ಜನರ ಸಮಸ್ಯೆಗಳನ್ನು ಇಟ್ಟುಕೊಂಡು ಚರ್ಚೆಗಳು ನಡೆಯಬಹುದೆಂದು ಇದ್ದ ನಿರೀಕ್ಷೆಗಳು ಹುಸಿಯಾದವು.
ಸದನದಲ್ಲಿ ಶಿಸ್ತು ಮಾಯವಾಗಿತ್ತು. ಸದಸ್ಯರಲ್ಲೇ ಪರಸ್ಪರ ತಾಳ್ಮೆ, ಹೊಂದಾಣಿಕೆ ಇರದೆ ಚರ್ಚೆಗಳು ಸಾಗಿದವು. ಅಜೆಂಡಾ ಬದಿಗೆ ಸರಿದಿತ್ತು. ಮನಬಂದಂತೆ ಸದಸ್ಯರು ಚರ್ಚೆಗೆ ಮುಂದಾದಾಗ ಒಂದು ಹಂತದಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ
ಹೊಸ ಸದಸ್ಯರ ಚೊಚ್ಚಲ ಸಭೆ ಬಗ್ಗೆ ನಗರವಾಸಿಗಳು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ವಿಶೇಷ ಎಂದು ಸೇರಿದ್ದ ಈ ಸಭೆಯ ಹೆಸರಲ್ಲಷ್ಟೆ ವಿಶೇಷ ಇತ್ತು, ಚರ್ಚೆಯಲ್ಲಿ, ಸದನದಲ್ಲಿ ಪ್ರಸ್ತಾಪವಾದ ವಿಷಯಗಳಲ್ಲಿ ವಿಶೇಷತೆ ಇರಲೇ ಇಲ್ಲ. ಸ್ಥಾಯಿ ಸಮಿತಿ ಸದಸ್ಯರಾದ ಖಲೀಲ್ ಅಹ್ಮದ್, ಮೊಹ್ಮದ್ ಜಾವಿದ್, ಶಂಕರಸಿಂಗ್, ಮಲ್ಲಮ್ಮ ವಳಕೇರಿ, ಆಯುಕ್ತ ಶೀಕಾಂತ ಕಟ್ಟೀಮನಿ ಇದ್ದರು.
ಇದು ವಿಶೇಷ ಸಭೆ.. ಸಾಮಾನ್ಯ ಸಭೆಯಲ್ಲಿ ಕೊಡ್ತೇವ್ರಿ...
ಸದಸ್ಯೆ ಆರತಿ ಮಾತನಾಡಿ ಆಡಳಿತಾಧಿಕಾರಿ ಕಾರುಬಾರು ಇದ್ದ ಪಾಲಿಕೆಯಲ್ಲಿ ಅನೇಕ ನಿರ್ಣಯಗಳಾಗಿವೆ. ಅವುಗಳ ಪ್ರತಿ ಕೊಡಿ, ಅವುಗಳನ್ನು ಓದಿ ಸದನದ ಗಮನಕ್ಕೆ ತನ್ನಿರಿ ಎಂದು ಆಗ್ರಹಿಸಿದಾಗ ಮೇಯರ್, ಉಪ ಮೇಯರ್ ಇಬ್ಬರೂ ಈಗ ಕರೆದದ್ದು ವಿಶೇಷ ಸಭೆ, ಸಾಮಾನ್ಯ ಸಭೆಯಲ್ಲಿ ನೀವು ಕೇಳಿರುವ ಪ್ರತಿ ಒದಗಿಸುತ್ತೇವೆ ಎಂದು ಹೇಳಿ ಸಾಗಹಾಕಿದ್ದು ನಡೆಯಿತು. 2013ರ ಮಾರ್ಚ್‌ನಲ್ಲೇ ಸದಸ್ಯರಾಗಿ ಆಯ್ಕೆಯಾಗಿದ್ದರೂ ಮೀಸಲಾತಿ ವಿವಾದ ಕೋರ್ಟ್‌ನಲ್ಲಿ ಇತ್ಯರ್ಥವಾಗದೆ ಹೋದಾಗ ಒಂದೂವರೆ ವರ್ಷಕಾಲ ಪಾಲಿಕೆಗಳಲ್ಲಿ ಜನಾಡಳಿತವೇ ಇರಲಿಲ್ಲ. ಈ ಅವಧಿಯಲ್ಲಿ ಆಡಳಿತಾಧಿಕಾರಿಯೇ ಇದ್ದದ್ದು ಗಮನಾರ್ಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement