ಆಳಂದ: ಸರ್ಕಾರಿ ಪ.ಪೂ ಕಾಲೇಜಿಗೆ ಪ್ರವೇಶ ಪ್ರಾರಂಭ
ಆಳಂದ: ಪಟ್ಟಣದಲ್ಲಿನ ಸರ್ಕಾರಿ ಪದವಿ ಪೂರ್ವ ಬಾಲಕರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಪಿಯುಸಿ ಪ್ರಥಮ ವರ್ಷದ ಪ್ರವೇಶ ಪ್ರಾರಂಭಗೊಂಡಿದೆ ಎಂದು ಪ್ರಾಚಾರ್ಯ ಶಿವಶರಣಪ್ಪಾ ಮುಳೆಗಾಂವ ಕೋರಿದ್ದಾರೆ.
ಕಾಲೇಜಿನಲ್ಲಿನ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಷಯವಾರು ಎಲ್ಲಾ ರೀತಿಯ ನುರಿತ ಹಾಗೂ ಅನುಭವಿ ಉಪನ್ಯಾಸಕರ ವೃಂದವಿದೆ. ಮತ್ತು ಸುಸಜಿತವಾದ ವಿಜ್ಞಾನ ವಿಭಾಗದ ಪ್ರಯೋಗ ಶಾಲೆ ಇತರೇ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಸೌಲಭ್ಯಗಳ ಆಗರ: ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜು ಎಂದರೆ ಆಳಂದ ತಾಲೂಕಿಗೇ ಅತ್ಯಂತ ಹಳೆಯ ಮತ್ತು ದೊಡ್ಡ ಸರಕಾರಿ ಕಾಲೇಜಾಗಿದೆ. ಸದರಿ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದು ಹಾಗೂ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಮೂಲಸೌಲಭ್ಯಗಳು ಇವೆ. ಗ್ರಾಮಗಳಿಂದ ಬರುವ ಹುಡುಗರಿಗೆ ಅತ್ಯಂತ ಅನುಕೂಲಕರವಾದ ಸ್ಥಳದಲ್ಲಿದೆ. ಇಷ್ಟೆಲ್ಲ ಇದ್ಯಾಗ್ಯೂ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಆದ್ದರಿಂದ ತಾಲೂಕಿನ ಪಾಲಕರು ದಯಮಾಡಿ ತಮ್ಮ ಮಕ್ಕಲನ್ನು ಸದರಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಪ್ರಾಚಾರ್ಯರು ಮತ್ತು ಉಪನ್ಯಾಸಕ ವರ್ಗ ಈ ಮೂಲಕ ಮನವಿ ಮಾಡಿದ್ದಾರೆ.ವಿದ್ಯಾರ್ಥಿ ವೇತನ ಸೌಲಭ್ಯ ಕೂಡ ಇದೆ ಎಂದು ಅವರು ತಿಳಿಸಿದ್ದಾರೆ.
ವೈದ್ಯಕೀಯ: ವಿಶಾಲ್ಗೆ 5ನೇ ರ್ಯಾಂಕ್
ಗುಲ್ಬರ್ಗ: ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿಶಾಲ್ ಧರಪುರ ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ತಲಾ 60ಅಂಕಗಳ ಪೈಕಿ ಭೌತಶಾಸ್ತ್ರ-59, ರಸಾಯನಶಾಸ್ತ್ರ-46, ಗಣಿತ ಶಾಸ್ತ್ರ-44 ಹಾಗೂ ಜೀವಶಾಸ್ತ್ರ-56 ಅಂಕಗಳನ್ನು ಪಡೆದಿದ್ದಾರೆ. ಅದೇ ರೀತಿ ಎಂಜಿನಿಯರಿಂಗ್ನಲ್ಲಿ ರಾಜ್ಯಕ್ಕೆ 89ನೇ ರ್ಯಾಂಕ್ ಪಡೆದಿದ್ದಾರೆ.
ವೈದ್ಯನಾಗಿ ಸೇವೆ ಸಲ್ಲಿಸುವೆ: ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಬಂದಿರುವುದು ತುಂಬ ಖುಷಿಯಾಗಿದೆ. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ(ಬಿಎಂಸಿ) ಎಂಬಿಬಿಎಸ್ ಮಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತೇನೆ ಎಂದು ವಿದ್ಯಾರ್ಥಿ ವಿಶಾಲ ಧರಪುರ ಮನದಾಳದ ಮಾತು ಹೇಳಿದರು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿ (ಪಿಸಿಬಿ) 161 ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರದಲ್ಲಿ (ಪಿಸಿಎಂ) 149 ಅಂಕಗಳು ಬಂದಿವೆ. ಮೊದಲಿನಿಂದಲೂ ವೈದ್ಯನಾಗಬೇಕು ಎಂಬ ಆಸೆ ಇತ್ತು. ಇದೀಗ ಅದು ಈಡೇರಿದೆ. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ (ಬಿಎಂಸಿ) ಎಂಬಿಬಿಎಸ್ ಓದಿ, ಬಳಿಕ ಎಂಎಸ್ ವ್ಯಾಸಂಗ ಮಾಡುತ್ತೇನೆ ಎಂದು ವಿಶಾಲ್ ತಮ್ಮ ಅನಿಸಿಕೆ ಹಂಚಿಕೊಂಡರು. ವೈದ್ಯಕೀಯದಲ್ಲಿ ರಾಜ್ಯಕ್ಕೆ 2 ಅಥವಾ 3ನೇ ರ್ಯಾಂಕ್ ನಿರೀಕ್ಷಿಸಿದ್ದೆವು. ಹಾಗಂತ ಬೇಸರವೇನಿಲ್ಲ. ಮಗನ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ವಿಶಾಲ್ ತಂದೆ ಶಿವರುದ್ರ ಧರಪುರ ಹೇಳುತ್ತಾರೆ. ಶಿವರುದ್ರಪ್ಪ ಮೆಡಿಕಲ್ ರೆಪ್ ಆಗಿ, ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಾಯಿ ರಾಜಶ್ರೀ ಧರಪುರ ಸಂತ ಮೇರಿಸ್ ಪ್ರೌಢಶಾಲೆ ಶಿಕ್ಷಕಿ.
ರಾಷ್ಟ್ರ ನಾಯಕರ ಪ್ರತಿಮೆಗೆ ಕಿಡಿಗೇಡಿಗಳಿಂದ ಅಪಮಾನ
ಚಿಂಚೋಳಿ: ತಾಲೂಕಿನಲ್ಲಿ ಮಹಾತ್ಮರ ಮತ್ತು ರಾಷ್ಟ್ರ ನಾಯಕರ ಮೂರ್ತಿ ಮತ್ತು ಪ್ರತಿಮೆಗೆ ಕೆಲವು ಕಿಡಿಗೇಡಿಗಳು ಅಪಮಾನಗೊಳಿಸಿದರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆಂದು ಬಿಜೆಪಿ ಮುಖಂಡ ದಲಿತ ನಾಯಕ ರಮೇಶ ಯಾಕಾಪುರ ದೂರಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ,ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಮೇ 3ರಂದು ಬಸವೇಶ್ವರ ಮೂರ್ತಿ ಭಗ್ನಗೊಳಿಸಿದ್ದು, ಮೇ 28ರಂದು ಐನಾಪುರ ಗ್ರಾಮದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಬಿಯರ್ ಬಾಟಲಿ ಇಟ್ಟು ಅಪಮಾನಗೊಳಿಸಿದಾರೆ. ತಾಲೂಕಿನಲ್ಲಿ ಪೊಲೀಸರ ವೈಫಲ್ಯತೆಯಿಂದಾಗಿ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಬಿಜೆಪಿ ಮುಖಂಡ ರಮೇಶ ಯಾಕಾಪೂರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಕೆಲವು ಸಮಾಜ ಘಾತುಕ ಶಕ್ತಿಗಳು ಅಶಾಂತಿ ವಾತಾವರಣ ಮೂಡಿಸುತ್ತಿದ್ದಾರೆ. ತಾಲೂಕಿನಲ್ಲಿ ಪಾನ್ಶಾಪ್, ಕಿರಾಣಿ ಅಂಗಡಿ ಮತ್ತು ಚಹಾ ಹೋಟೆಲ್ಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಅಬಕಾರಿ ಮತ್ತು ಪೊಲೀಸರ ನಿರ್ಲಕ್ಷತನ ಹೆಚ್ಚಾಗಿದೆ. ಸ್ಥಳಿಯ ಶಾಸಕರ ನಿಯಂತ್ರಣದಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿದೆ ಅವರ ನಿರ್ಲಕ್ಷತನದಿಂದಾಗಿ ಇಂತಹ ಕೃತ್ಯಗಳು ನಡೆಯುತ್ತಲಿದ್ದು ಸರಕಾರ ಕಿಡಿಗೇಡಿಗಳನ್ನು ಮಟ್ಟಹಾಕುವಲ್ಲಿ ವಿಫಲವಾಗಿದೆ ಎಂದು ತಿಳಿಸಿದರು.
75 ಬಡ ವಸತಿರಹಿತರಿಗೆ ಬಸವ ವಸತಿ: ಶಾಸಕ
ಭಾಲ್ಕಿ: ಗುಡಿಸಲುರಹಿತ ಫಲಾನುಭವಿಗಳಿಗೆ ವಾಜಪೇಯಿ ವಸತಿ ಯೋಜನೆಯ ರಾಜೀವ್ಗಾಂಧಿ ವಸತಿ ನಿಗಮದಿಂದ ಮನೆ ಮಂಜೂರು ಮಾಡಿಸಿ ಪಟ್ಟಣದಲ್ಲಿ ಸುಮಾರು 75 ಅರ್ಹ ಫಲಾನುಭವಿಗಳಿಗೆ ಮನೆ ವಿತರಿಸಿ ಅವರಿಗೆ ಸದ್ಬಳಕೆ ಮಾಡಿಕೊಳ್ಳಲು ಶಾಸಕ ಈಶ್ವರ ಖಂಡ್ರೆ ಕಿವಿಮಾತು ಹೇಳಿದರು.
ಪಟ್ಟಣದ ವಸತಿ ರಹಿತ ಫಲಾನುಭವಿಗಳನ್ನು ಗುರುತಿಸಿ, ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಸುಮಾರು 75 ಬಡವಸತಿ ರಹಿತ ಫಲಾನುಭವಿಗಳಿಗೆ ಮನೆಯನ್ನು ವಿತರಿಸಿ ಮಾತನಾಡಿದ ಅವರು, ಈ ಹಿಂದೆ ಬಸವ ವಸತಿ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ ಸುಮಾರು 3000 ಮನೆಗಳನ್ನು ಮಂಜೂರು ಮಾಡಲಾಗಿದೆ. ಅದರಲ್ಲಿ ಸುಮಾರು 2000 ಫಲಾನುಭವಿಗಳು ತಳಪಾಯ ಹಾಕಿಸಿದ್ದು ಈಗಾಗಲೇ ಮೊದಲನೆ ಕಂತಿನ ಹಣ ಅವರ ಖಾತೆಗೆ ಜಮಾ ಆಗಿದೆ. ಫಲಾನುಭವಿಗಳು ಮಧ್ಯವರ್ತಿಗಳಿಗೆ ಆಸ್ಪದ ಕೊಡದೆ ಹಣ ಪಡೆಯಬೇಕೆಂದು ತಿಳಿಸಿದರು.
ಬಸವ ವಸತಿ ಯೋಜನೆಯಡಿ ಆಯ್ಕೆಯಾದ ಗ್ರಾಮಗಳ ಹೆಸರುಗಳು- ಕೋಂಗಳಿ, ಗುಂಜರಗಾ, ವಾಗಲಗಾಂವ, ಭಾತಂಬ್ರಾ, ತಮಗ್ಯಾಳ, ಕಳಸದಾಳ, ವಳಸಂಗ, ಸಿದ್ದೇಶ್ವರ, ಸಿದ್ಧೇಶ್ವರ ವಾಡಿ, ಜ್ಯಾಂತಿ, ತರನಳ್ಲಿ, ಕೊಸಂ, ಹಾಲಹಿಪ್ಪಾರ್ಗಾ, ನಾಗುರ, ನಿಲಮನಳ್ಳಿ, ಬರದಾಪುರ, ಕಪಲಾಪುರ, ಮಾವಿನಹಳ್ಳಿ ಮತ್ತು ಬ್ಯಾಲಹಳ್ಳಿ (ಡಬ್ಲ್ಯ). ಈ ಎಲ್ಲ ಗ್ರಾಮಗಳಿಗೆ ಬಸವ ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಉನ್ನತ ಗುರಿ ಸಾಧಿಸಲು ಪ್ರಯತ್ನಿಸಬೇಕು: ಮೇತ್ರೆ
ಭಾಲ್ಕಿ: ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದು. ಇಲ್ಲಿ ಒದಗಿ ಬರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸತತ ಪರಿಶ್ರಮ ಪಡಬೇಕು. ಉನ್ನತ ಗುರಿಯನ್ನು ಸಾಧಿಸಲು ಪ್ರಯತ್ನಿಸಬೇಕೆಂದು ರಾಜಕುಮಾರ ಮೇತ್ರೆ ನುಡಿದರು.
ಪಟ್ಟಣದ ಸದ್ಗುರು ವಿದ್ಯಾಲಯದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು ಬಾಲ್ಯದಲ್ಲಿಯೇ ಮಕ್ಕಳಿಗೆ ವ್ಯವಹಾರಜ್ಞಾನ ಮತ್ತು ಸಾಮಾನ್ಯಜ್ಞಾನಗಳ ವಿಕಾಸಕ್ಕೆ ಅವಕಾಶ ಮಾಡಿಕೊಡಲು ಪ್ರಯತ್ನಿಸಬೇಕು ಎಂದರು.
ಮುಖ್ಯಗುರು ಸುಜಾತಾ ಪಾಟೀಲ ಮಾತನಾಡಿ, ಬೇಸಿಗೆಯ ಶಿಬಿರದ ಮಕ್ಕಳಿಗೆ ಪಠ್ಯಕ್ಕಿಂತಲೂ ಹೆಚ್ಚು ಪಠ್ಯೇತರ ಚಟುವಟಿಕೆಗಳನ್ನು ಕಲಿಸಲಾಗಿದೆ ಎಂದರು. ಮಕ್ಕಳ ಜತೆಗೆ ಬೆರೆತು ಮಕ್ಕಳಾಗುವ ರೀತಿಯಲ್ಲಿ ಪಾಠ ಮಾಡಿದರೆ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಎಂ.ಸೋಮನಾಥ ಅಧ್ಯಕ್ಷತೆ ವಹಿಸಿದ್ದರು. ವೀರೇಂದ್ರ ಹೊಸಾಳೆ, ಧನರಾಜ ಪಾಟೀಲ, ವಿದ್ಯಾವತಿ ಪುನ್ನಾ, ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.