ಆಸಕ್ತಿ, ಪರಿಶ್ರಮವಿದ್ದಲ್ಲಿ ಯಶಸ್ಸು ಸಾಧ್ಯ
ಕನ್ನಡಪ್ರಭ ವಾರ್ತೆ ಭಾಲ್ಕಿ ಮೇ 29
ವಿದ್ಯಾರ್ಥಿ ಜೀವನ ಅತ್ಯಮೂಲ್ಯ. ಪರಿಶ್ರಮ, ಆಸಕ್ತಿ ಸ್ವರೂಪಿಯಾಗಿ ಮುನ್ನುಗ್ಗಿದರೆ ಯಶಸ್ಸನ್ನು ಕಾಣಲು ಸಾಧ್ಯ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ಪಟ್ಟಣದ ಅಷ್ಟೂರೆ ಕಲ್ಯಾಣ ಮಂಟಪದಲ್ಲಿ ಎಸ್.ಎಸ್. ಶಿಕ್ಷಣ ಸಂಸ್ಥೆಯ ಡೈಮಂಡ್ ವಿಜ್ಞಾನ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ 2013- 14ನೇ ಸಾಲಿನ ಪಿಯುಸಿ ದ್ವಿತೀಯ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸತತ ಪ್ರಯತ್ನ ಹಾಗೂ ಛಲದಿಂದ ಉನ್ನತ ಮಟ್ಟದ ಸಾಧನೆಗಳನ್ನು ಮಾಡಿ ಸಫಲರಾಗಲು ಯೋಗ್ಯ ಮಾರ್ಗದರ್ಶನ ಪಡೆಯುವ ಸುಸಮಯವಿದು ಎಂದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸ, ಧೈರ್ಯ, ಛಲದ ಹಿಂದೆ ಬೆನ್ನಟ್ಟಿದರೆ ಯಶಸ್ಸು ನಿಮ್ಮ ಹಿಂದೆ ಬೆನ್ನಟ್ಟುವುದು. ಹಿರಿಯರನ್ನು ಗೌರವಿಸುತ್ತ, ಕಿರಿಯರನ್ನು ಪ್ರೀತಿಸುತ್ತ ವಿವಿಧ ನೂತನ ವಿಷಯಗಳನ್ನು ಅರಿತು ಯಶಸ್ವಿ ಜೀವನ ಸಾಗಿಸಿ ಎಂದು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.
ಅಭ್ಯಾಸದೆಡೆಗೆ ಅಭಿರುಚಿ ಬೆಳೆಸಿಕೊಳ್ಳಿ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಸಿಇಒ ಹಾಗೂ ಪ್ರಭಾರಿ ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್, ಅಭ್ಯಾಸದ ಕಡೆ ಹೆಚ್ಚಿನ ಅಭಿರುಚಿಯನ್ನು ಹುಟ್ಟಿಸಿಕೊಂಡು ಯೋಗ್ಯ ಜ್ಞಾನವನ್ನು ಪಡೆದು, ಮನಸ್ಸಿನಲ್ಲಿ ಮೂಡಿರುವ ಸಾಧನೆಯ ವಿಚಾರಗಳನ್ನು ಮಾತಿನ ಮೂಲಕ ವ್ಯಕ್ತಪಡಿಸಿದಾಗಲೇ ನಿಮ್ಮ ಮನಸ್ಸಿನ ವಿಚಾರಕ್ಕೊಂದು ಗೌರವ, ಬೆಲೆ ಸಿಗುವುದು ಎಂದು ಹೇಳಿದರು.
ಸಹಾಯಕ ಆಯುಕ್ತೆ ಹೆಬ್ಸಿಬಾರಾಣಿ ಕೋರ್ಲಪಾಟಿ ಮಾತನಾಡಿ, ಜಿಲ್ಲಾಡಳಿತದಿಂದ ಮಾಡುವ ಕಾರ್ಯವನ್ನು ಭಾಲ್ಕಿಯಲ್ಲಿ ಡೈಮಂಡ್ ಮತ್ತು ಗುರುಕುಲ ಕಾಲೇಜುಗಳು ಮಾಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸತತ ಅಭ್ಯಾಸದ ಜೊತೆಯಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಕೆ. ಗಾದಗೆ ಮಾತನಾಡಿ, ಜಿಲ್ಲೆಯ ಫಲಿತಾಂಶ ಹೆಚ್ಚಿಸುವಲ್ಲಿ ಡೈಮಂಡ್ ಕಾಲೇಜು ಹಾಗೂ ಗುರುಕುಲ ಕಾಲೇಜುಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವೈ.ಮಾಧವರಾವ್, ಪ್ರಾಂಶುಪಾಲ ಮಸ್ತಾನ್ ವಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಡಳಿತಾಧಿಕಾರಿ ಅಶ್ವಿನ್ ಭೋಸಲೆ, ಪ್ರಭಾಕರ ಬೆಳೆಕೇರೆ, ಪಾಲಕರ ಪ್ರತಿನಿಧಿ ಕಿಶನರಾವ್ ಜಾಧವ ಉಪಸ್ಥಿತರಿದ್ದರು. ಸನ್ಮಾನ: ಇದೇ ವೇಳೆ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಯೋಗೇಶ್ವರಿ ಹಾಗೂ ಪಾಲಕರಿಗೆ ಶ್ರೀಗಳಿಂದ ಸನ್ಮಾನಿಸಲಾಯಿತು. ಹಾಗೂ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಗೌರವಿಸಿ, ಸನ್ಮಾನಿಸಲಾಯಿತು. ಕವಿತಾ ಬಳತೆ ಸ್ವಾಗತಿಸಿದರು. ಧನರಾಜ ನಿಲಂಗೆ ನಿರೂಪಿಸಿದರು. ನಾಮದೇವರಾವ ಮೋರೆ ವಂದಿಸಿದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸ, ಧೈರ್ಯ, ಛಲದ ಹಿಂದೆ ಬೆನ್ನಟ್ಟಿದರೆ ಯಶಸ್ಸು ನಿಮ್ಮ ಹಿಂದೆ ಬೆನ್ನಟ್ಟುವುದು. ಹಿರಿಯರನ್ನು ಗೌರವಿಸುತ್ತ, ಕಿರಿಯರನ್ನು ಪ್ರೀತಿಸುತ್ತ ವಿವಿಧ ನೂತನ ವಿಷಯಗಳನ್ನು ಅರಿತು ಯಶಸ್ವಿ ಜೀವನ ಸಾಗಿಸಿ
- ಡಾ. ಬಸವಲಿಂಗ ಪಟ್ಟದ್ದೇವರು