ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಿರುಗಾಳಿ ಮಳೆ, ಗುಡುಗು, ಸಿಡಿಲಿನ ಅಬ್ಬರಕ್ಕೆ ಜನ ತತ್ತರ

Vishwanath S
Updated On : 30 May 2014, 11:43 am

ಕ.ಪ್ರ. ವಾರ್ತೆ , ಗುಲ್ಬರ್ಗ , ಮೇ 29
ಬಿಸಿಲೂರು ಗುಲ್ಬರ್ಗ ಮಹಾನಗರ ಗುರುವಾರ ಮತ್ತೆ ಬಿರುಗಾಳಿ, ಗುಡುಗು, ಸಿಡಿಲಿನ ಅಬ್ಬರ ಹಾಗೂ ಮಳೆಗೆ ಸಾಕ್ಷಿಯಾಯ್ತು. ಸಂಜೆ ಹೊತ್ತು ಗಂಟೆಗೂ ಹೆಚ್ಚು ಕಾಲ ಕಂಡ ಈ ಅಬ್ಬರದಿಂದಾಗಿ ದೈತ್ಯ ಗಾತ್ರದ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದವು. ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.
ಬೆಳಗ್ಗೆಯಿಂದ ಬಿಸಿಲಿನ ಪ್ರತಾಪ ಅಧಿಕವಾಗಿದ್ದ ನಗರದಲ್ಲಿ ಸಂಜೆಯಾಗುತ್ತಿದ್ದಂತೆಯೇ ದಟ್ಟ ಮೋಡ ಕವಿಯಿತು. ಅದೆಲ್ಲಿಂದ ಬೀಸಲು ಶುರು ಮಾಡಿತೋ ಗಾಳಿ ಬಿರುಗಾಳಿಯಾಯ್ತು, ತನ್ನ ಮಾರ್ಗದಲ್ಲಿ ಸಿಕ್ಕದ್ದನ್ನೆಲ್ಲ ಹಾರಿಸಿಕೊಂಡು ಹೋಯ್ತು. ನಗರದ ಪ್ರಮುಖ ರಸ್ತೆಗಳಲ್ಲಿನ ಜಾಹೀರಾತು ಫಲಕಗಳು, ಫ್ಲೆಕ್ಸ್‌ಗಳು, ಮರಗಳನ್ನೆಲ್ಲ ಧರೆಗುರುಳಿಸಿದ ಬಿರುಗಾಳಿ ಭಾರಿ ಸದ್ದು ಮಾಡುತ್ತ ಗಂಟೆಗೂ ಹೆಚ್ಚು ಕಾಲ ತನ್ನ ಆಟಾಟೋಪ ಪ್ರದರ್ಶಸಿತು.
ಗಾಳಿಯ ಬೆನ್ನೇರಿ ಪ್ರತಿಧ್ವನಿಸಿದ್ದು ಗುಡುಗು- ಸಿಡಿಲಿನ ಆರ್ಭಟ. ಇದರ ಬೆನ್ನಲ್ಲೇ ಮಳೆ ಸುರಿಯಿತು. ಅರ್ಧಗಂಟೆ ಸುರಿದ ಬಿರುಸಿನ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಹುಸೇನ್ ಗಾರ್ಡನ್ ಸಾರ್ವಜನಿಕ ಉದ್ಯಾನವನದಲ್ಲಿದ್ದ ಹತ್ತಾರು ಮರಗಳು ಬೇರು ಸಹಿತ ಕಿತ್ತು ಮಕಾಡೆ ಮಲಗಿದವು. ಮುಖ್ಯ ರಸ್ತೆಯ ಸರ್ದಾರ್ ಪಟೇಲ್ ವೃತ್ತ, ಜಿಪಂ ಸಭಾಂಗಣ ಬಳಿಯಲ್ಲಿದ್ದ ಭಾರಿ ಗಾತ್ರದ ಮರಗಳೂ ನೆಲಕ್ಕುರುಳಿ ತೊಂದರೆ ಸೃಷ್ಟಿಯಾಗಿತ್ತು.
ಮತ್ತೆ ಬೆಚ್ಚಿಬಿದ್ದ ಜನತೆ: ಎರಡು ದಿನಗಳ ಹಿಂದೆ ಗಾಳಿ- ಆಲಿಕಲ್ಲು ಮಳೆ ಹೊಡೆತಕ್ಕೆ ನಗರ ತತ್ತರಿಸಿತ್ತಲ್ಲದೆ ಸಿಡಿಲಿಗೆ ಒಬ್ಬ ಸಾವನ್ನಪ್ಪಿದ್ದ, ಜೊತೆಗೇ ಮರದ ಕೆಳಗೆ ಸಿಲುಕಿ ಕುದುರೆಯೂ ಸಾವನ್ನಪ್ಪಿತ್ತು. ಈ ಘಟನೆ ಹಸಿರಿರುವಾಗಲೇ ನಗರದಲ್ಲಿ ಮತ್ತೆ ಬಿರುಗಾಳಿ, ಗುಡುಗು- ಸಿಡಿಲಿನ ಅಬ್ಬರ ಕಂಡು ಜನತೆ ಬೆಚ್ಚಿ ಬೀಳುವಂತಾಯ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement