ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮರದಡಿ ಸಿಲುಕಿ ಮಹಿಳೆ ಸಾವು

Vishwanath S
Updated On : 30 May 2014, 11:44 am

ಕ.ಪ್ರ. ವಾರ್ತೆ , ಗುಲ್ಬರ್ಗ , ಮೇ 29
ನಗರದ ಖೂಬಾ ಪ್ಲಾಟ್ ಪ್ರದೇಶದಲ್ಲಿ ಭಾರೀ ಗಾತ್ರದ ಮರ ಧರೆಗುರುಳಿದ್ದರಿಂದ ಅದರಡಿ ಸಿಲುಕಿದ ಮಹಿಳೆ ತೀವ್ರ ಗಾಯಗಳನ್ನು ಅನುಭವಿಸಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ಸಂಭವಿಸಿದೆ. ದುರಂತದಲ್ಲಿ ಅಸುನೀಗಿದ ಮಹಿಳೆಯನ್ನು ಸುಲ್ತಾನಮ್ಮ(50) ಎಂದು ಗುರುತಿಸಲಾಗಿದೆ. ಈಕೆ ಗಾಳಿ ಮಳೆ ಶುರುವಾದ ಸಂದರ್ಭದಲ್ಲಿ ಡಾ. ಸರ್ವೋತ್ತಮರಾವ್ ಅವರಿಗೆ ಸೇರಿದ್ದ ಹೆರಿಗೆ ಆಸ್ಪತ್ರೆಯ ಪಕ್ಕದಲ್ಲಿ ನಿಂತಿದ್ದಳು. ಅಲ್ಲಿನ ರಸ್ತೆ ಬದಿಯಲ್ಲಿನ ಮರವೇ ಉರುಳಿ ಸುಲ್ತಾನಮ್ಮಳ ಬಲಿ ಪಡೆದಿದೆ.
ವಿದ್ಯುತ್ ಕಡಿತ: ನಗರದಲ್ಲಿ ಸಂಜೆ ಕಂಡ ಭಾರಿ ಬಿರುಗಾಳಿ ಹಾಗೂ ಮಳೆಯಿಂದಾಗಿ ಬ್ರಹ್ಮಪುರ ಪ್ರದೇಶದ ಸಮತಾ ಕಾಲೋನಿಯ ಬಸವನಗರ, ಶಾಂತಿನಗರ, ಸಿಐಬಿ ಕಾಲನಿ, ರಾಮಮಂದಿರ ವೃತ್ತದ ಅನೇಕ ಬಡಾವಣೆಗಳಲ್ಲಿ ಹಾಗೂ ಸೂಪರ್ ಮಾರ್ಕೆಟ್ ಪ್ರದೇಶ ಸೇರಿದಂತೆ ಅರ್ಧಕ್ಕೂ ಹೆಚ್ಚು ನಗರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ಭಾರೀ ಗಾತ್ರದ ಮರಗಳು ಬಿದ್ದ ಕಾರಣ ಬಹುತೇಕ ಕಡೆಗಳಲ್ಲಿ ವಿದ್ಯುತ್ ತಂತಿಗಳು ಹರಿದಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಜೆಸ್ಕಾಂ ಎಂಜನಿಯರುಗಳು ಸಮಸ್ಯೆಯ ಮೂಲ ಹುಡುಕುವಲ್ಲಿ ತಡರಾತ್ರಿವರೆಗೂ ತಮ್ಮ ಕೆಲಸ ಕಾರ್ಯ ಮುಂದುವರಿಸಿದ್ದಾರೆ.
ಕೆಳಗೆ ಬಂದ ಹೈಮಾಸ್ಟ್: ನಗರದ ಜಗತ್ ಸರ್ಕಲ್ ಪ್ರದೇಶದಲ್ಲಿ ಕಂಬದ ಮೇಲಿದ್ದ ಐದು ಪ್ರಖರ ವಿದ್ಯುತ್ ದೀಪಗಳ ಗೊಂಚಲು ಬಿರುಗಾಳಿ ಹೊಡೆತಕ್ಕೆ 30 ಅಡಿ ಕೆಳಗಿಳಿದಿದೆ. ವಾಹನಗಳ ಮೇಲೆ ಸಂಚರಿಸುವರ ಕೈಗೆಟುಕವಂತಾಗಿದೆ.
ಭೀಕರ ಅಪಘಾತ: ನಾಲ್ವರ ಸಾವು
ಕ.ಪ್ರ. ವಾರ್ತೆ , ಗುಲ್ಬರ್ಗ , ಮೇ 29
ಜಿಲ್ಲೆಯ ಸೇಡಂ ತಾಲೂಕಿನ ರಂಜೋಳ ಕ್ರಾಸ್ ಬಳಿ ಸಿಮೆಂಟ್ ಕ್ಲಿಂಕರ್ ಸಾಗಿಸುತ್ತಿದ್ದ ಲಾರಿ ಹಾಗೂ ಪ್ರಯಾಣಿಕರಿಂದ ತುಂಬಿದ್ದ ಜೀಪ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜೀಪಿನಲ್ಲಿದ್ದವರ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ನಸುಕಿನ ಜಾವ 1.30ರ ಹೊತ್ತಿಗೆ ಸಂಭವಿಸಿದೆ.
ಸೊಲ್ಲಾಪುರ ಮೂಲದ ಭೋಸಲೆ ಕುಟುಂಬದ ಪ್ರೀತಿ ವಿನಾಯಕ ಭೋಸಲೆ(6), ಶ್ರುತಿ ವಿನಾಯಕ ಭೋಸಲೆ(7 ತಿಂಗಳು) ಮತ್ತು ಅಜ್ಜ ಕೊಂಡಿಬಾ ನಾರಾಯಣ ಸಾರವಾಡಿ(55) ಹಾಗೂ ಭೋಸಲೆ ಕುಟುಂಬದ ಗುರುಗಳಾದ ವಿಷ್ಣು ತಂದೆ ದತ್ತು ಮಹರಾಜ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಾಲಕ ನಾಗೇಶ, ತಂಗಿ ರಾಜಶ್ರೀ, ಅಣ್ಣ ವಿನಾಯಕ, ತಾಯಿ ಮಂಗಲಾಬಾಯಿ ಇವರೆಲ್ಲರಿಗೂ ಭಾರಿ ಗಾಯಗಳಾಗಿವೆ ಎಂದು ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಜಯಶ್ರೀ ಸೇಡಂ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಪಘಾತ ಹೇಗೆ?: ಜಯಶ್ರೀ ಅವರ ಪ್ರಕಾರ ರಂಜೋಳ- ಕುರುಕುಂಟಾ ಕ್ರಾಸ್ ಮಧ್ಯದಲ್ಲಿ ಸೇಡಂ ಕಡೆ ಮುಖಮಾಡಿ ಒಂದು ಲಾರಿ ನಿಂತಿತ್ತು. ಈ ಲಾರಿ ಕೆಟ್ಟು ನಿಂತಿರಬಹುದಾದರೂ ಲಾರಿ ಸುತ್ತ ಯಾವುದೇ ಕಲ್ಲು, ಸಂಕೇತಗಳಿರಲಿಲ್ಲ. ಜೀಪ್ ಚಾಲಕ ತನ್ನ ವಾಹನವನ್ನು ಲಾರಿಯಿಂದ ಬದಿಗೆ ತಗೆದುಕೊಂಡು ಚಲಾಯಿಸುತ್ತಿದ್ದಾಗ ಎದುರುಗಡೆಯಿಂದ ವೇಗದಲ್ಲಿ ಬರುತ್ತಿದ್ದ ಕ್ಲಿಂಕರ್ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆಸಿದಿದ್ದಾನೆ ಎಂದು ವಿವರಿಸಿದ್ದಾರೆ.
ಸೊಲ್ಲಾಪುರದ ರವಿವಾರಪೇಟೆ ಬಡಾವಣೆ ನಿವಾಸಿಗಳಾಗಿದ್ದ ತಾವೆಲ್ಲ ಮೇ 26ರಂದು ತಿರುಪತಿ ತಿಮ್ಮಪ್ಪನ ದರುಶನಕ್ಕೆ ಹೋಗಿ ಅಲ್ಲಿ ಪೂಜಾದಿಗಳನ್ನೆಲ್ಲ ಪೂರೈಸಿಕೊಂಡು ಇನ್ನೇನು ಸೊಲ್ಲಾಪುರ ಸೇರಬೇಕೆನ್ನುವಷ್ಟರಲ್ಲಿ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಲ್ಬರ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸೇಡಂ ಸಿಪಿಐ ಸಂದೀಪ್ ಸಿಂಗ್ ಮುರಗೋಡ್, ಮಳಖೇಡ ಪಿಎಸ್‌ಐ ರವೀಂದ್ರ, ಎಎಸ್‌ಐ ಸಜ್ಜನ ಹಾಗೂ ಸಿಬ್ಬಂದಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement