ಶಾರದಾ ರುಡ್ಸೆಟ್ಗೆ 2ನೇ ಬಾರಿ ಆ
ಕ.ಪ್ರ.ವಾರ್ತೆ , ಬೀದರ್ , ಮೇ 29
ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ವತಿಯಿಂದ ಬೀದರ್ನ ಶಾರದಾ ರುಡ್ಸೆಟ್ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ 'ಎ ಪ್ಲಸ್' ಶ್ರೇಣಿ ಗಳಿಸುತ್ತಿರುವುದು ಗಮನಾರ್ಹ ಸಾಧನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ತಿಳಿಸಿದ್ದಾರೆ.
ಬೀದರ್ನ ಪ್ರತಾಪ ನಗರದಲ್ಲಿರುವ ಶಾರದಾ ರುಡ್ಸೆಟ್ ಸಂಸ್ಥೆಯಲ್ಲಿ ಗುರುವಾರ ತರಬೇತುದಾರರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟನೆ ಮತ್ತು ವಿಕಲಚೇತನ ಸ್ವ- ಉದ್ಯೋಗಾಕಾಂಕ್ಷಿಗಳಿಗೆ ಹಮ್ಮಿಕೊಳ್ಳಲಾದ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು.
ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರತಿ ವರ್ಷ ಎಲ್ಲ ರುಡ್ಸೆಟ್ ಸಂಸ್ಥೆಗಳ ಮೌಲ್ಯಮಾಪನ ಆಗುತ್ತದೆ. ಅದರಲ್ಲಿ ಬೀದರ್ ಶಾರದಾ ರುಡ್ಸೆಟ್ ರಾಜ್ಯದಲ್ಲಿ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ನಮಗೆಲ್ಲ ಹೆಮ್ಮೆಯ ವಿಷಯ ಎಂದರು.
ಆರ್ಥಿಕ ಉನ್ನತಿಗೆ ದಾರಿದೀಪ: ನಿರುದ್ಯೋಗಿ ಯುವ ಜನತೆಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತಾ ಅವರ ಆರ್ಥಿಕ ಉನ್ನತಿಗೆ ಸಹಾಯವಾಗುವಂತೆ ದಾರಿ ದೀಪವಾಗುತ್ತಿರುವ ಶಾರದಾ ರುಡ್ಸೆಟ್ ಸಂಸ್ಥೆ, ದೇಶದ ಸಹಕಾರಿ ರಂಗದ ಬ್ಯಾಂಕುಗಳಿಂದ ನಡೆಸಲ್ಪಡುವ ಏಕೈಕ ಸಂಸ್ಥೆಯಾಗಿದೆ ಎಂದರು.
ದೇಶದ ಎಲ್ಲ ರಾಜ್ಯಗಳಿಂದ ಈ ಸಾಧನೆಗಳನ್ನು ಅವಲೋಕಿಸಲು ಮತ್ತು ತಮ್ಮ ಜಿಲ್ಲೆಯಲ್ಲಿ ಇದನ್ನು ಪುನಾರವರ್ತಿಸುವಂತೆ ಅನುಭವ ಸಂಪಾದಿಸಲು ಬ್ಯಾಂಕರ್ಗಳು, ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಬೀದರ್ಗೆ ಬರುತ್ತಿದ್ದಾರೆ ಎಂದು ನಾಗಮಾರಪಳ್ಳಿ ವಿವರಿಸಿದರು.
ನಾಗಮಾರಪಳ್ಳಿ ದೂರದೃಷ್ಟಿ ಕಾರಣ: ಸಂಸ್ಥೆಯ ಹಿರಿಯ ನಿರ್ದೇಶಕ ನಾರಾಯಣರಾವ್ ಮನ್ನಳ್ಳಿ ಮಾತನಾಡಿ, ಸಂಸ್ಥೆಯ ಈ ಎಲ್ಲ ಸಾಧನೆಗಳ ಹಿಂದೆ ಬೆನ್ನೆಲುಬಾಗಿ ನಿಂತಿರುವುದು ಸಂಸ್ಥೆಯ ಅಧ್ಯಕ್ಷ ನಾಗಮಾರಪಳ್ಳಿ ಅವರ ದೂರದೃಷ್ಟಿ, ಕ್ರಿಯಾಶೀಲತೆ ಕಾರಣ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ, ನಿರ್ದೇಶಕರಾದ ವಿಜಯಕುಮಾರ ಕಣಜಿ, ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಜನ್ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕ ನಿಜಪ್ಪ ಪತ್ರಿ, ಪ್ರೊ. ಬಿ.ಆರ್. ಕೊಂಡಾ, ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ರಾಜೇಂದ್ರ ಆಚಾರ್ಯ ಮತ್ತಿತರರು ಇದ್ದರು.
ಇದುವರೆಗೆ 9,561 ಜನರಿಗೆ ಸ್ವಉದ್ಯೋಗ ಕೌಶಲ್ಯ
ಬೀದರ್: ಬೀದರ್ನ ಶಾರದಾ ರುಡ್ಸೆಟ್ ಸಂಸ್ಥೆ ತನ್ನ ಸ್ವ-ಉದ್ಯೋಗ ತರಬೇತಿಗಳ ಮೂಲಕ ನಿರುದ್ಯೋಗಿ ಯುವ ಜನತೆಗೆ ಸ್ವ-ಉದ್ಯೋಗ ಕಲ್ಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ನುಡಿದರು.
ಅವರು ಗುರುವಾರ ನಗರದ ಶಾರದಾ ರುಡ್ಸೆಟ್ ಸಂಸ್ಥೆಯಲ್ಲಿ ತರಬೇತುದಾರರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟನೆ ಮತ್ತು ವಿಕಲಚೇತನ ಸ್ವ- ಉದ್ಯೋಗಾಕಾಂಕ್ಷಿಗಳಿಗೆ ಹಮ್ಮಿಕೊಳ್ಳಲಾದ ಉದ್ಯಮಶೀಲತಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿ, ಈ ಸಂಸ್ಥೆ ನಿರುದ್ಯೋಗಿಗಳಿಗೆ ಆಶಾಕಿರಣವಾಗಿದೆ. ಜಿಲ್ಲೆಯ ಎಲ್ಲ ವರ್ಗದವರು ಆರ್ಥಿಕವಾಗಿ ಸಬಲರಾಗಬೇಕೆಂಬ ಆಶಯದೊಂದಿಗೆ ಬೀದರ್ ಡಿಸಿಸಿ ಬ್ಯಾಂಕ್ನಿಂದ ಈ ಸಂಸ್ಥೆ ಸ್ಥಾಪಿಸಲಾಗಿದೆ ಎಂದರು.
9,516 ಜನರಿಗೆ ಸ್ವ-ಉದ್ಯೋಗ ತರಬೇತಿ: ಶಾರದಾ ರುಡ್ಸೆಟ್ ಸಂಸ್ಥೆ ಪ್ರಸಕ್ತ ಸಾಲಿನಲ್ಲಿ 757 ಅಭ್ಯರ್ಥಿಗಳಿಗೆ 28 ತಂಡಗಳಲ್ಲಿ ತರಬೇತಿ ನೀಡಿದ್ದು ಅವರಲ್ಲಿ 450 ಜನರು ಸ್ವ-ಉದ್ಯೋಗ ಆರಂಭಿಸಿದ್ದಾರೆ. ಸಂಸ್ಥೆಯು ಇಲ್ಲಿಯವರೆಗೆ ಒಟ್ಟು 9,516 ಜನರಿಗೆ ಸ್ವ-ಉದ್ಯೋಗ ತರಬೇತಿಗಳನ್ನು ನೀಡಿದ್ದು ಅವರಲ್ಲಿ 7,336 ಜನರು ಸ್ವಾವಲಂಬಿಗಳಾಗಿ ಜೀವನ ಸಾಗಿಸುತ್ತಿದ್ದಾರೆ ಎಂದರು.
ಶಾರದಾ ರುಡ್ಸೆಟ್ ಸಂಸ್ಥೆಯ ತರಬೇತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರು, ಗ್ರಾಮೀಣ ಜನರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ತರಬೇತಿ ಪಡೆದವರಲ್ಲಿ ಶೇ. 62 ಮಹಿಳೆಯರಿದ್ದಾರೆ. ಅದರಲ್ಲಿ ಶೇ. 85ರಷ್ಟು ಜನರು ಬಡತನ ರೇಖೆಗಿಂತ ಕೆಳಗಿನವರಾಗಿದ್ದಾರೆ. ಶೇ. 46 ಜನ ಪರಿಶಿಷ್ಟ ಪಂಗಡ ಮತ್ತು ಜಾತಿಗೆ ಸೇರಿದವರಾಗಿದ್ದರೆ ಶೇ. 40ರಷ್ಟು ಹಿಂದುಳಿದವರಾಗಿದ್ದು ಶೇ.5ರಷ್ಟು ವಿಕಲಚೇತನರಿಗೂ ತರಬೇತಿಗಳನ್ನು ನೀಡಲಾಗಿದೆ ಎಂದರು.
ಶೇ. 57 ಅಭ್ಯರ್ಥಿಗಳಿಗೆ ಬ್ಯಾಂಕ್ ಸಾಲ: ಸಂಸ್ಥೆಯಲ್ಲಿ ತರಬೇತಿ ಪಡೆದ ಶೇ. 57ರಷ್ಟು ಅಭ್ಯರ್ಥಿಗಳಿಗೆ ಬ್ಯಾಂಕ್ ಸಾಲದ ನೆರವು ನೀಡಲಾಗಿದ್ದು ಹಲವರಿಗೆ ಗಿರಿಜನ ಯೋಜನೆಯಡಿ ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ. ರಾಷ್ಟ್ರೀಯ ಮೀನುಗಾರಿಕೆ ನಿಗಮದ ನೆರವಿನಲ್ಲಿ ಮೀನುಗಾರರಿಗೆ 51 ದ್ವಿಚಕ್ರ ವಾಹನಗಳು, 10 ತ್ರಿಚಕ್ರ ಮತ್ತು ಸರಕು ಸಾಗಣೆ ವಾಹನಗಳನ್ನು ವಿತರಿಸಲಾಗಿದೆ. ವಿವಿಧ ಉದ್ಯಮಗಳು ಮತ್ತು ಇಲಾಖೆಗಳ ಜತೆ ಸಮನ್ವಯದಿಂದ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲ, ಉದ್ಯೋಗ ಕಲ್ಪಿಸಲಾಗಿದೆ. ಕಳೆದೆರಡು ವರ್ಷಗಳಲ್ಲಿ 300ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ವಿವಿಧ ಉದ್ಯಮಗಳಲ್ಲಿ ಉದ್ಯೋಗವಕಾಶಗಳನ್ನು ಕಲ್ಪಿಸಲಾಗಿದೆ ಎಂದರು.
ಸುಸಜ್ಜಿತ ತರಬೇತಿ ಸಂಸ್ಥೆ: ಶಾರದಾ ರುಡ್ಸೆಟ್ ಸಂಸ್ಥೆ ಬೀದರಿನ ಪ್ರತಾಪನಗರದಲ್ಲಿ ತರಬೇತಿಗಾಗಿ ಸುಸಜ್ಜಿತ ವ್ಯವಸ್ಥೆ ಹೊಂದಿದ್ದು 60 ಜನರಿಗೆ ಉಳಿದುಕೊಳ್ಳುವ ವ್ಯವಸ್ಥೆ, ಆಧುನಿಕ ಪರಿಕರಗಳಿಂದ ಕೂಡಿದ ಭೋಧನಾ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ಅತ್ಯಾಧುನಿಕ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳು, ಸ್ವಂತ ಕ್ಯಾಂಟೀನ್ ಮತ್ತು ವಿವಿಧ ತರಬೇತಿಗಳಿಗೆ ಬೇಕಾಗುವ ಯಂತ್ರೋಪಕರಣಗಳು ಪ್ರಾಯೋಗಿಕ ತರಬೇತಿ ನೀಡಲು ಲಭ್ಯವಿವೆ ಎಂದರು.
ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನೀಡಲು ನಬಾರ್ಡ್ ವತಿಯಿಂದ ಸ್ಥಾಪಿತವಾದ ಆರ್ಥಿಕ ಘಟಕ ಇದ್ದು ಯೋಜನೆಗಳ ಆಯ್ಕೆ, ಯೋಜನಾ ವರದಿ ತಯಾರಿ, ಸರ್ಕಾರಿ ನೆರವು ಯೋಜನೆಗಳ ಮಾಹಿತಿ ಇಲ್ಲಿ ಲಭ್ಯವಿದೆ.
ವೃತ್ತಿಪರ ತರಬೇತಿ: ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಅನುಮೋದಿಸಿದ ಪಠ್ಯಕ್ರಮವನ್ನು ಅಳವಡಿಸಿಕೊಂಡಿರುವ ಜಿಲ್ಲೆಯಲ್ಲಿ ಬೇಡಿಕೆಯಲ್ಲಿರುವ ಎಲೆಕ್ಟ್ರೀಷಿಯನ್, ಟೈಲರಿಂಗ, ಮೊಬೈಲ್ ದುರಸ್ತಿ, ಬ್ಯೂಟಿಪಾರ್ಲರ್, ಕಂಪ್ಯೂಟರ ಹಾರ್ಡವೇರ್ ಮತ್ತು ಡಿಟಿಪಿ ಮುಂತಾದ ಸಾಂಪ್ರದಾಯಿಕ ತರಬೇತಿಗಳಲ್ಲದೆ ಜೇನು ಸಾಕಾಣಿಕೆ, ನರ್ಸರಿ, ಹೊಟೇಲ್ ಮ್ಯಾನೇಜಮೆಂಟ್, ಟ್ರ್ಯಾಕ್ಟರ್ ರಿಪೇರಿ, ದ್ವಿಚಕ್ರ ವಾಹನ ರಿಪೇರಿ ಸೇರಿದಂತೆ ವಿಶಿಷ್ಟ ತರಬೇತಿಗಳನ್ನು ಕೂಡ ಹಮ್ಮಿಕೊಳ್ಳಲಾಗುತ್ತಿದೆ.
ಮಕ್ಕಳ ಸಹಾಯವಾಣಿ 1098: ಸಂಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕಾಗಿ ಮಕ್ಕಳ ಸಹಾಯವಾಣಿ 1098 ಜಿಲ್ಲಾ ನೊಡಲ್ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತಿದೆ. ಈ ಯೋಜನೆಯಲ್ಲಿ ಜಿಲ್ಲೆಯಾದ್ಯಂತ ಸುಮಾರು 850ಕ್ಕೂ ಹೆಚ್ಚು ತೆರೆದ ಮನೆ ಕಾರ್ಯಕ್ರಮ ಮೂಲಕ ಜಾಗೃತಿ ಮೂಡಿಸಲಾಗಿದೆ. ಬಾಲಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿಯಾಗಿದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಹಿರಿಯ ನಿರ್ದೇಶಕ ನಾರಾಯಣರಾವ ಮನ್ನಳ್ಳಿ, ವಿಜಯಕುಮಾರ ಕಣಜಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕ ನಿಜಪ್ಪ ಪತ್ರಿ, ನಿರ್ದೇಶಕ ಸುಬ್ರಹ್ಮಣ್ಯಂ ಪ್ರಭು, ರಾಜೇಂದ್ರ ಆಚಾರ್ಯ ಇದ್ದರು.