ಜಿಲ್ಲಾಭಿವೃದ್ಧಿಗಾಗಿ ಎಲ್ಲರ ಸಹಕಾರ ಪಡೆವೆ
ಕನ್ನಡಪ್ರಭ ವಾರ್ತೆ ಕೆಂಭಾವಿ ಮೇ 30
ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅವುಗಳ ಪರಿಹಾರ, ಹತ್ತು ಹಲವು ಅಭಿವೃದ್ಧಿ ಕಾಮಗಾರಿ ಕೈಗೊಂಡು ನನಗೆ ಸಿಕ್ಕಿರುವ ಅಧಿಕಾರ ಅವಧಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಇದಕ್ಕಾಗಿ ಎಲ್ಲ ಸದಸ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರ ಪಡೆಯುವೆ.
- ಇದು ಇತ್ತೀಚೆಗೆ ಜಿಪಂ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದನಗೌಡ ಪೊಲೀಸ್ ಪಾಟೀಲ್ ನುಡಿ. ಅವರು ತಮ್ಮ ಮುಂದಿರುವ ಸವಾಲು, ಕೈಗೊಳ್ಳಬೇಕಿರುವ ಕಾರ್ಯಗಳ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ್ದು ಹೀಗೆ...
1. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿಮಗೆ ನನಿಸುತ್ತಿದೆ?
- ತುಂಬಾ ಸಂತೋಷವಾಗಿದೆ. ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಅವಕಾಶ ಸಿಕ್ಕಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ಅಭಿವೃದ್ಧಿಗೆ ಶ್ರಮಿಸುತ್ತೇನೆ.
2. ಎಲ್ಲ ಸದಸ್ಯರನ್ನು ನೀವು ಹೇಗೆ ತೆಗೆದುಕೊಂಡು ಹೋಗ್ತೀರಿ?
- ಜಿಲ್ಲೆಯ ಅಭಿವೃದ್ಧಿ ಆಗಬೇಕಾದರೆ ಕೇವಲ ನನ್ನೊಬ್ಬನಿಂದ ಸಾಧ್ಯವಿಲ್ಲ. ಅದಕ್ಕೆ ಜಿಪಂ 22 ಸದಸ್ಯರ ಬೆಂಬಲವೂ ಬೇಕಾಗುತ್ತದೆ. ಯಾವುದೇ ಪಕ್ಷ ಭೇದವಿಲ್ಲದೆ ಸಮಾನವಾಗಿ ಜಿಲ್ಲೆಯ ಆಯಾ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುತ್ತೇನೆ.
3. ಜಿಲ್ಲೆಯ ಅಭಿವೃದ್ಧಿಯಲ್ಲಿ ಯಾವುದಕ್ಕೆ ಮೊದಲ ಆದ್ಯತೆ ಕೊಡ್ತೀರಿ?
- ಜಿಲ್ಲೆಯ ಪ್ರಮುಖವಾದ ಸಮಸ್ಯೆ ಎಂದರೆ ಕೆಂಭಾವಿ, ಮತ್ತಿತರೆಡೆ ಆರ್ಸೆನಿಕ್ ನೀರು ಬರುತ್ತಿದೆ. ಇದರ ನಿವಾರಣೆ ಜಿಲ್ಲೆಯ ಜನರಿಗೆ ಶುದ್ಧ ಕುಡಿವ ನೀರು ಒದಗಿಸುವುದೇ ನನ್ನ ಮೊದಲ ಆದ್ಯತೆ ಆಗಿದೆ. ಶುದ್ಧ ಕುಡಿಯುವ ನೀರು, ಶಿಕ್ಷಣ, ಹಾಗೂ ಆರೋಗ್ಯದ ಜೊತೆಗೆ ಇನ್ನುಳಿದ ಮೂಲಭೂತ ಸೌಕರ್ಯಗಳು ಮತ್ತು ಜಿಲ್ಲೆಯ ಅಭಿವೃದ್ಧಿಗೆ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗುವುದು.
4. 10 ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡುವುದಕ್ಕೆ ಸಾಧ್ಯನಾ?
- ಅಧಿಕಾರ ಅವಧಿ ಎಷ್ಟೇ ಇದ್ದರೂ, ಮಾಡುವ ಅಭಿವೃದ್ಧಿ ಕಾರ್ಯಗಳು ಮುಖ್ಯವಾಗುತ್ತವೆ. ನನಗಿರುವ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳು ಮಾಡಲು ಸಾಧ್ಯವೋ ಅಷ್ಟನ್ನೂ ಪ್ರಾಮಾಣಿಕವಾಗಿ ಮಾಡ್ತೀನಿ. ಜಿಲ್ಲೆಯ ಜನರ ಮೆಚ್ಚುಗೆ ಗಳಿಸುವ ಕೆಲಸ ಮಾಡುತ್ತೇನೆ.
5. ಕೆಂಭಾವಿ ಪಟ್ಟಣದಲ್ಲಿ ಯಾವ ರೀತಿ ಅಭಿವೃದ್ಧಿಗೆ ನಿಮ್ಮ ಆದ್ಯತೆ?
- ಈಗಾಗಲೇ ಬೀದಿಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಿದ್ದೇವೆ. ಮುಂದೆ ಪಟ್ಟಣದ ಪ್ರತಿ ಬೀದಿಗಳಿಗೂ ಅಳವಡಿಸುವ ಗುರಿಯಿದೆ. ಪಟ್ಟಣ ಸೇರಿದಂತೆ ಆರ್ಸೆನಿಕ್‌ಮುಕ್ತ ಶುದ್ಧ ಹಾಗೂ ಸಮೃದ್ಧ ನೀರೊದಗಿಸುವ ಕಾರ್ಯ ಮಾಡುತ್ತೇನೆ. ಕೆಂಭಾವಿ ಪಟ್ಟಣ ಕ್ಷೇತ್ರದ ಅಭಿವೃದ್ಧಿ ಶ್ರಮಿಸುತ್ತೇನೆ.
6. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದ ಬಗ್ಗೆ?
- ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳು, ಶಿಕ್ಷಕರು, ಪಾಲಕರು ಕಾರಣರಾಗಿದ್ದಾರೆ. ನಾವು ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ಜಿಲ್ಲೆಯನ್ನೂ ಶೈಕ್ಷಣಿಕವಾಗಿ ಮುಂದೆ ತರುವಂತಹ ಕೆಲಸ ಮಾಡುತ್ತೇನೆ.