ಶಿವಶರಣಪ್ಪ ಉಪ್ಪಿನವರ ವರ್ಣಚಿತ್ರ ಪ್ರದರ್ಶನ
ಗುಲ್ಬರ್ಗ: ಹಿರಿಯ ಕಲಾವಿದ ಶಿವಶರಣಪ್ಪ ಉಪ್ಪಿನ ವರ್ಣ ಕಲಾಕೃತಿಗಳ ಪ್ರದರ್ಶನ ಮೇ 31ರಂದು ನಗರದ ನಾಗನಹಳ್ಳಿ ರಸ್ತೆ ಉಪ್ಪಿನ ತೋಟದಲ್ಲಿರುವ 'ಜೆಸ್ಟ್‌ಕ್ಲಬ್'ನಲ್ಲಿ ಹಮ್ಮಿಕೊಳ್ಳಲಾಗಿದೆ. ಕಲಾವಿದ ಉಪ್ಪಿನರವರ ಪ್ರಥಮ ಪುಣ್ಯಸ್ಮರಣೆ ಸಂದರ್ಭದಲ್ಲಿ ಅವರ ಗೆಳೆಯರ ಬಳಗದವರು ಮತ್ತು ಪರಿವಾರದವರು ಈ ಪ್ರದರ್ಶನ ಏರ್ಪಡಿಸಿದ್ದಾರೆ ಎಂದು ಚೈತನ್ಯಮಯಿ ಆರ್ಟ್ ಗ್ಯಾಲರಿ ನಿರ್ದೇಶಕ ಎ.ಎಸ್. ಪಾಟೀಲ್ ಸುದ್ದ್ಧಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ 10.30 ಗಂಟೆಗೆ ಮಾಜಿ ಸಚಿವ ಎಸ್.ಕೆ. ಕಾಂತಾ ಉದ್ಘಾಟಿಸಲಿದ್ದಾರೆ. ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಜ್ಯಸಭೆ ಸದಸ್ಯ ಬಸವರಾಜ ಪಾಟೀಲ್ ಸೇಡಂ ಅಧ್ಯಕ್ಷತೆ ವಹಿಸುವರು. ಉಪ್ಪಿನವರು ಜಲವರ್ಣ, ತೈಲವರ್ಣ ಮುಂತಾದ ಮಾಧ್ಯಮಗಳಲ್ಲಿ ರಚಿಸಿದ 100 ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿಡಲಾಗುವುದು ಎಂದರು.
ಇಂದು ಚಿಂಚೋಳಿ ತಾಪಂ ಕೆಡಿಪಿ ಸಭೆ
ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ತೋಟಗಾರಿಕೆ ಇಲಾಖೆಯ ಸಭಾಂಗಣದಲ್ಲಿ ಮೇ 31ರಂದು ಬೆಳಿಗ್ಗೆ 9 ಗಂಟೆಗೆ ಶಾಸಕ ಡಾ. ಉಮೇಶ ಜಾಧವ್ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಂಪಣ್ಣ ಎಲ್.ವೈ ತಿಳಿಸಿದ್ದಾರೆ. ತಾಲೂಕು ಮಟ್ಟದ ಎಲ್ಲ ಹಿರಿಯ ಅಧಿಕಾರಿಗಳು ಸಭೆಗೆ ತಪ್ಪದೇ ಭಾಗವಹಿಸಿ ತಮ್ಮ ಇಲಾಖೆಗಳ ಪ್ರಗತಿ ವರದಿ ಸಲ್ಲಿಸಬೇಕೆಂದು ತಾಪಂ ಅಧಿಕಾರಿಗಳು ತಿಳಿಸಿದ್ದಾರೆ.