ಕಾನೂನು ಅರಿವಿನಿಂದ ಉತ್ತಮ ಸಮಾಜ ನಿರ್ಮಾಣ: ನ್ಯಾ.ರಾಜಣ್ಣ
ಮಾಲೂರು: ಉತ್ತಮ ಸಮಾಜ ನಿರ್ಮಾಣ ಆಗಬೇಕಾದರೆ ಪ್ರತಿಯೊಬ್ಬರೂ ದೇಶದ ಕಾನೂನು ಅರಿಯುವುದು ಮುಖ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಪೊಲೀಸ್ ಇಲಾಖೆಯ ಸಹಕಾರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ದೇಶದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಅನ್ಯಾಯ ಆಗದಂತಹ ಪ್ರಪಂಚ ಮೆಚ್ಚುವ ಸಂವಿಧಾನವನ್ನು ಅನುಷ್ಠಾನಗೊಳಿಸಲಾಗಿದೆ. ದೇಶದಲ್ಲಿ ಶಾಂತಿಯುತ ಸಮಾಜ ಕಾಣಬೇಕಾದರೆ ಪ್ರತಿಯೊಬ್ಬರು ಸಂವಿಧಾನ ರೀತ್ಯಾ ಜೀವನ ನಡೆಸಬೇಕು. ಕಾನೂನು ತಪ್ಪದೇ ಪಾಲಿಸಿ ನಮ್ಮ ದೇಶದ ಸಂವಿಧಾನಕ್ಕೆ ಗೌರವ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಐ ಶಿವಸ್ವಾಮಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಸಂಚಾರ ನಿಯಮ ಸೇರಿದಂತೆ ಕಾನೂನು ಹಾಗೂ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದರು.
ಹಿರಿಯ ವಕೀಲ ಆರ್.ಸಿ. ಅಪ್ಪಾಜಿಗೌಡ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರಥಮ ವರ್ತಮಾನ ವರದಿ ಹಾಗೂ ದಸ್ತಗಿರಿ ನಿಯಮ ಹಾಗೂ ಮೋಟಾರು ವಾಹನ ಕಾಯ್ದೆ ಬಗ್ಗೆ ಹಿರಿಯ ವಕೀಲ ಕೆ.ಮಂಜುನಾಥ್ ಉಪನ್ಯಾಸ ನೀಡಿದರು.
ಕಾನೂನು ಸಲಹಾ ಕೇಂದ್ರದ ಮಾದೇಶ್, ಸಲಹಾ ಕೇಂದ್ರದ ಸಿಡಿಪಿಓ ಯಲ್ಲಪ್ಪ ಇದ್ದರು. ವಕೀಲ ಸಂಘದ ಕಾರ್ಯದರ್ಶಿ ಎಚ್.ಎಲ್. ನಾಗರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.