ಕೃಷಿಯತ್ತ ರೈತರ ಚಿತ್ತ: ಬಿತ್ತನೆ ಕಾರ್ಯ ಚುರುಕು
ಕನ್ನಡಪ್ರಭ ವಾರ್ತೆ, ಕೋಲಾರ, ಆ.5
ಮೋಡಗಳ ಚೆಲ್ಲಾಟದಿಂದ ಕಂಗಾಲಾಗಿದ್ದ ರೈತರು ಕಳೆದ ಎರಡು ದಿನಗಳ ಹಿಂದೆ ಬಿದ್ದ ಮಳೆಯಿಂದಾಗಿ ಮತ್ತೆ ನೇಗಿಲು ಹಿಡಿದು ಕೃಷಿಯತ್ತ ಚಿತ್ತ ಬದಲಾಯಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ಕೋಲಾರ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಕಡೆ ವರುಣ ಕೃಪೆ ತೋರಿರುವುದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಕೈಗೆ ಕೆಲಸವಿಲ್ಲದೆ ಅರಳಿಕಟ್ಟೆ, ಜಗ್ಗಲಿ, ಗುಡಿಗಳ ಮುಂದೆ ಕುಳಿತು ಮೋಡಗಳ ಚೆಲ್ಲಾಟದಿಂದ ಬೇಸತ್ತು ತಲೆ ಮೇಲೆ ಕೈಹೊತ್ತು ಕುಳಿತಿದ್ದ ಗ್ರಾಮೀಣ ಜನರು ಮಳೆಯಿಂದಾಗಿ ಮೂಲೆ ಸೇರಿದ್ದ ನೇಗಿಲು ಹಿಡಿದು ಹೊಲ, ಗದ್ದೆಗಳತ್ತ ಸಾಗಿ ಬಿತ್ತನೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಕೃಷಿ ಇಲಾಖೆ ಬಿತ್ತನೆ ಕಾರ್ಯಕ್ಕೆ ಬೇಕಾದ ವಿವಿಧ ತಳಿಗಳ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಪೂರೈಸಲು ಸಜ್ಜಾಗಿದೆ. ಕಳೆದ ತಿಂಗಳೇ ಅನೇಕ ರೈತರು ಮಳೆ ನಿರೀಕ್ಷೆ ಮಾಡಿ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿ ಮಾಡಿದ್ದರು.
ಜುಲೈನಿಂದ ಆಗಸ್ಟ್ 5ರವರೆಗೆ ಜಿಲ್ಲೆಯಲ್ಲಿ 263 ಮಿ.ಮೀ ವಾಡಿಕೆ ಮಳೆಯ ಪೈಕಿ 230 ಮಿ.ಮೀ ಮಳೆಯಾಗಿದ್ದು 1.02 ಲಕ್ಷ ಎಕರೆ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ 46,566 (ಶೇ.46)ಹೆಕ್ಟೆರ್ ಪ್ರದೇಶದಲ್ಲಿ ರಾಗಿ, ನೆಲಗಡಲೆ, ಜೋಳ, ತೊಗರಿ, ಅವರೆ, ಅಲಸಂದಿ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆಯಲು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಗುರಿ ಸಾಧಿಸುವ ಭರವಸೆ: ರಾಗಿ 31650 ಹೆಕ್ಟೆರ್ನಲ್ಲಿ, ತೊಗರಿ 2160 ಹೆ., ಜೋಳ 703 ಹೆ., ನೆಲಗಡಲೆ 6624 ಹೆ., ಅವರೆ 2720 ಹೆ. ಹಾಗೂ ಅಲಸಂದಿ 922 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಈ ತಿಂಗಳ ಅಂತ್ಯದವರೆಗೆ ಬಿತ್ತನೆ ಕಾರ್ಯಕ್ಕೆ ಅವಕಾಶವಿರುವುದರಿಂದ ಗುರಿ ಸಾಧಿಸುವ ಭರವಸೆಯಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.
ರೈತರು ಬಿತ್ತನೆಯಾಗದೆ ಇರುವ ಪ್ರದೇಶದಲ್ಲಿ ಇಳಿಜಾರಿಗೆ ಅಡ್ಡಲಾಗಿ ಪ್ರತಿ 30 ಅಡಿಗೆ ಒಂದು ಸಣ್ಣ ಬದು ಹಾಕಿ ಹಾಗೂ 10 ಅಡಿಗೆ ಒಂದರಂತೆ ದೋಣಿ ಸಾಲು ತೆಗೆದು ಬೀಳುವ ಮಳೆ ನೀರನ್ನು ಇಂಗಿಸುವುದರಿಂದ ತೇವಾಂಶ ಹೆಚ್ಚು ದಿನ ಲಭ್ಯವಿರುವಂತೆ ಮಾಡುವುದರಿಂದ ಬೆಳೆಗಳ ರಕ್ಷಣೆಗೆ ಅನುಕೂಲವಾಗುತ್ತದೆ ಎಂದು ಕೃಷಿ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ರೈತರು ಸೂಚಿಸಿದಂತೆ ಬಿತ್ತನೆ ಮಾಡುವುದರಿಂದಾಗಿ ಬೆಳೆ ನಷ್ಟದಿಂದ ಪಾರಾಗಿ ಸ್ವಲ್ಪ ಮಟ್ಟಿಗಾದರೂ ಬೆಳೆ ಉತ್ಪಾದನೆ ಮಾಡಿಕೊಳ್ಳಬಹುದು. ಜತೆಗೆ ಬಿತ್ತನೆ ಮಾಡಿರುವ ಹಾಗೂ ಆಗಸ್ಟ್ ಅಂತ್ಯದವರೆಗೆ ಬಿತ್ತನೆ ಮಾಡುವ ಬೆಳೆಗಳಿಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಲು ರೈತರು ಮುಂದಾಗಬೇಕೆಂದು ತಿಳಿಸಿದ್ದಾರೆ.
ಮುಳಬಾಗಿಲು ತಾಲೂಕಿನಲ್ಲಿ 257 ಮಿಮೀ ಮಳೆಗೆ ಈವರೆಗೆ 188 ಮಿಮೀ., ಶ್ರೀನಿವಾಸಪುರದಲ್ಲಿ 270ಕ್ಕೆ 246 ಮಿಮೀ., ಬಂಗಾರಪೇಟೆಯಲ್ಲಿ 268ಕ್ಕೆ 209 ಮಿಮೀ., ಕೋಲಾರದಲ್ಲಿ 261ಕ್ಕೆ 231 ಹಾಗೂ ಮಾಲೂರು ತಾಲೂಕಿನಲ್ಲಿ 274 ಮಿಮೀ ಮೆಳೆಗೆ 261 ಮಿಮೀ ಮಳೆ ಆಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.