ನೀರಿನ ವಿಷಯದಲ್ಲಿ ರಾಜಕಾರಣ: ಕೃಷ್ಣಾರೆಡ್ಡಿ ಕಿಡಿ
ಚಿಂತಾಮಣಿ. ಮಳೆಗಾಗಿ ಜನರು ಹಿಂದಿನ ಕಾಲದಲ್ಲಿ ಅನ್ನದಾನ ಮುಂತಾದ ಕಾರ್ಯಗಳನ್ನು ಮಾಡುತ್ತಿದ್ದರೂ, ಈಗಿನ ಕಾಲದಲ್ಲಿ ನೀರು ದಾನ ಮಾಡುವುದೇ ಮಹಾದಾನವೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.
ಪಟ್ಟಣದಲ್ಲಿನ ವಾರ್ಡ್ ನಂ.5 ರಲ್ಲಿ ಜೆಡಿಎಸ್ ಯುವ ಮುಖಂಡ ವಿ.ಅಮರ್ ತಮ್ಮ ಸ್ವಂತ ಖರ್ಚಿನಲ್ಲಿ ಈ ಭಾಗದ ನಿವಾಸಿಗಳಿಗೆ ಉಚಿತ ನೀರು ಪೂರೈಸಲು ಮಾಡುತ್ತಿರುವ ಸೇವಾ ಕಾರ್ಯಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಚಾಲನೆ ನೀಡಿ ಮುಕ್ತ ಕಂಠದಿಂದ ಶ್ಲಾಘಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ನದಿಗಳು, ಡ್ಯಾಂಗಳು ತುಂಬಿ ಹರಿಯುತ್ತಿವೆ. ಆದರೆ ವರುಣನ ಕೃಪೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಇಲ್ಲವಾದ್ದರಿಂದ ಬಹುತೇಕ ಕೆರೆ, ಕುಂಟೆಗಳು ಬತ್ತಿಹೋಗಿ ರೈತರು ಆಕಾಶದತ್ತ ನೋಡುವ ಪರಿಸ್ಥಿತಿ ನಿರ್ಮಾಣಗೊಂಡಿದೆಯೆಂದು ಹೇಳಿದರು. ತಾಲೂಕಿನಲ್ಲಿ ಮಳೆಯಿಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಮತ್ತೊಂದೆಡೆ ಕೊಳವೆ ಬಾವಿಗಳನ್ನು ಕೊರೆದರೂ ನೀರು ಸಿಗದೆ ಇರುವ ಅಲ್ಪ ಸ್ವಲ್ಪ ನೀರಿನಲ್ಲಿ ಸಹಕಾರ ಮನೋಭಾವದಿಂದ ನೀರು ಹಂಚಿಕೊಳ್ಳದೆ ಹಲವರು ನೀರಿನ ವಿಷಯದಲ್ಲಿ ರಾಜಕಾರಣ ಮಾಡಿ ಜನರನ್ನು ಎತ್ತಿಕಟ್ಟಿ ಸಾಹಸಕ್ಕೆ ಕೈಹಾಕುತ್ತಿದ್ದಾರೆಂದು ಲೇವಡಿ ಮಾಡಿದರು.
ಮಳೆಗಾಗಿ ವಿಶೇಷ ಪೂಜೆ: ಪಟ್ಟಣದ ಹೊರವಲಯದ ಪ್ರಸಿದ್ಧ ಕಾಡು ಮಲ್ಲೇಶ್ವರ ಬೆಟ್ಟಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ಜೆಡಿಎಸ್ನ ನೂರಾರು ಮುಖಂಡರು ಕಾರ್ಯಕರ್ತರು ಸೇರಿ ಸೋಮವಾರ ಬೆಳಗ್ಗೆ ಮಳೆಗಾಗಿ ಪ್ರಾರ್ಥಿಸಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು. ತಾಲೂಕಿನ ವ್ಯಾಪ್ತಿಯಲ್ಲಿ ಬಹುತೇಕ ಕೆರೆ, ಕುಂಟೆಗಳು ಬತ್ತಿಹೋಗಿವೆ. ಇದರಿಂದಾಗಿ ದನಕರುಗಳಿಗೆ ನೀರಿನ ಕೊರತೆ ಮಾತ್ರವಲ್ಲ, ಮೇವಿನ ಕೊರತೆಯೂ ಕಾಡುತ್ತಿದೆ. ಇದರಿಂದ ವರುಣನ ಕೃಪೆಗಾಗಿ ಪ್ರಾರ್ಥಿಸಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ವಿಶೇಷ ಪೂಜೆ ಸಲ್ಲಿಸಿದರು.
ನಗರಸಭಾ ಸದಸ್ಯ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಶಫಿಕ್ ಉದ್ದೀನ್, ವೆಂಕಟರವಣಪ್ಪ, ಶ್ರೀರಾಮಪ್ಪ, ಮಂಜುನಾಥ್, ಮುಖಂಡರಾದ ದಿನ್ನಮಿಂದಪಲ್ಲಿ ಬೈರಾರೆಡ್ಡಿ, ರಾಗುಟ್ಟಹಳ್ಳಿ ರಘುನಾಥರೆಡ್ಡಿ, ಯುವ ಮುಖಂಡರಾದ ವಿ.ಅಮರ್, ಮಸಲಹಳ್ಳಿ ಮಂಜು, ನಯಾಸ್ ಪಾಷಾ, ಕೃಷ್ಣೋಜಿರಾವ್, ವನಜಾಕ್ಷಿ ಸೇರಿದಂತೆ ಇನ್ನೂ ಹಲವಾರು ಮಂದಿ ಉಪಸ್ಥಿತರಿದ್ದರು.