ಮಕ್ಕಳಿಗೆ ನಿತ್ಯ ಹಾಲು ಕೊಡಿ
ಕನ್ನಡಪ್ರಭ ವಾರ್ತ್ಣೆ ಕೋಲಾರ್ಣ ಆ.5
ಹೊಸ ಸರ್ಕಾರ ಬಂದ ಮೇಲೆ ಹಾಲು ಉತ್ಪಾದಕರಿಗೆ 4 ಪ್ರೋತ್ಸಾಹ ಧನ ಹಾಗೂ ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಮಕ್ಕಳಿಗೆ ವಾರದಲ್ಲಿ ಮೂರು ದಿನ ಮಾತ್ರ ಹಾಲು ನೀಡುವ ಬದಲು ನಿತ್ಯ ಹಾಲು ಕೊಟ್ಟರೆ ಮಕ್ಕಳಿಗೆ ಮಾತ್ರವಲ್ಲ ರೈತರಿಗೆ ಹೆಚ್ಚಿನ ಸಹಾಯವಾಗುತ್ತದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.
ನಗರದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಸೋಮವಾರ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ, ಕೋಲಾರ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಸಹಯೋಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗಾಗಿ 97ರ ತಿದ್ದುಪಡಿ ಹಾಗೂ ಚುನಾವಣೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಂದ ಹಾಲು ಖರೀದಿಸಿ, ಹಾಲಿನ ಪುಡಿಯಾಗಿಸಲು 6 ಖರ್ಚಾಗುತ್ತದೆ. ಇದರಿಂದ ಹಾಲು ಒಕ್ಕೂಟಗಳಿಗೆ ಹೊರೆಯಾಗುವುದರಿಂದ ರಾಜ್ಯ ಸರ್ಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಮೀಪವಿರುವ ಶಾಲೆಗಳಿಗೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಸಹಕಾರ ಸಂಘಗಳೇ ನೇರವಾಗಿ ಹಾಲು ಪೂರೈಕೆ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು. ಇದರಿಂದ ಸರ್ಕಾರಕ್ಕೆ ಮತ್ತು ಒಕ್ಕೂಟಕ್ಕೆ ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ದೂರವಿರುವ ಶಾಲೆಗಳಿಗೆ ಬೇಕಾದರೆ ಒಕ್ಕೂಟದ ಮೂಲಕ ಹಾಲಿನ ಪುಡಿ ವಿತರಣೆ ಮಾಡುವುದರಿಂದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದರು.
ಅಪೌಷ್ಟಿಕತೆ ನಿವಾರಣೆ: ಶಾಲಾ ಮಕ್ಕಳಿಗೆ ನಿತ್ಯ ಹಾಲು ಕೊಟ್ಟರೆ ಮಕ್ಕಳಲ್ಲಿನ ಅಪೌಷ್ಟಿಕತೆ ಸಂಪೂರ್ಣ ನಿವಾರಣೆಯಾಗುತ್ತದೆ. ಸರ್ಕಾರಕ್ಕೆ ನಿತ್ಯ ಹಾಲು ಸರಬರಾಜು ಮಾಡುವುದಕ್ಕೆ ಸಮಸ್ಯೆಯಿದ್ದಲ್ಲಿ ಇದರ ಜವಾಬ್ದಾರಿಯನ್ನು ಹಾಲು ಒಕ್ಕೂಟಗಳಿಗೇ ವಹಿಸಲಿ ಎಂದು ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ಸಂಘಗಳ ಚುನಾವಣೆ ಸಂಬಂಧ ಹೊಸ ತಿದ್ದುಪಡಿ ತಂದಿರುವುದು ಸರಿ ಇದೆ. ಇದರಿಂದ ಕಾರ್ಯದರ್ಶಿಗಳು ನ್ಯಾಯ ಸಮ್ಮತವಾಗಿ ಚುನಾವಣೆಗೆ ತಯಾರಿ ನಡೆಸುವುದಕ್ಕೆ ಅನುಕೂಲವಾಗಿರುವುದರಿಂದ ಕಾರ್ಯದರ್ಶಿಗಳು ಹೊಸ ತಿದ್ದುಪಡಿ ಬಗ್ಗೆ ಅರಿವು ಪಡೆಯುವುದು ಸೂಕ್ತ ಎಂದು ಹೇಳಿದರು.
ಕಾರ್ಯದರ್ಶಿಗಳು ಕಾನೂನು ಪ್ರಕಾರ ಚುನಾವಣೆ ನಡೆಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಮುಂದಿನ ಮಾರ್ಚ್ ವೇಳೆಗೆ ಸಹಕಾರ ಸಂಘಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳು ಇರುವುದರಿಂದ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಯಾರು ಪ್ರತಿನಿತ್ಯ ಹಾಲು ಹಾಕುತ್ತಾರೆಂಬುದನ್ನು ಅರಿತು ಮತದಾನದ ಹಕ್ಕು ಕಲ್ಪಿಸಿದಲ್ಲಿ ವಿಕೋಪಗಳಿಗೆ ಅವಕಾಶವಾಗುವುದಿಲ್ಲವೆಂದು ಸಲಹೆ ನೀಡಿದರು.
ಸೂಕ್ತ ತರಬೇತಿ: ಒಂದು ವೇಳೆ ಗ್ರಾಮ ಲೆಕ್ಕಿಗರನ್ನೇ ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡುವುದಾದರೆ ಇವರಿಗೆ ಸೂಕ್ತ ತರಬೇತಿ ನೀಡಬೇಕೆಂದು ಒತ್ತಾಯಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಎನ್.ಕೃಷ್ಣಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್ ನಿರ್ದೇಶಕ ಕೆ.ವಿ.ದಯಾನಂದ್, ಗಂಗಮ್ಮ, ಕೋಚಿಮುಲ್ ನಿವೃತ್ತ ಅಧಿಕಾರಿ ನಾರಾಯಣಸ್ವಾಮಿ, ಸಹಕಾರಿ ತಜ್ಞ ಗೋವಿಂದಗೌಡ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ವೆಂಕಟೇಶ್, ಶ್ರೀನಿವಾಸಗೌಡ, ಎನ್.ಕೃಷ್ಣಾರೆಡ್ಡಿ ಇದ್ದರು. ಜಿಲ್ಲಾ ಸಹಕಾರ ಯೂನಿಯನ್ ನೂತನ ಕಾರ್ಯನಿರ್ವಾಹಕ ಅಧಿಕಾರಿ ಪುರುಷೋತ್ತಮ್ ಸ್ವಾಗತಿಸಿ ನಿರೂಪಿಸಿದರು.