13ರಂದು ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಮಾಲೂರು: ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಆ.13 ರಂದು ಚುನಾವಣೆ ನಡೆಯಲಿದೆ. ಆಂತರಿಕ ಒಪ್ಪಂದದಂತೆ ಕಳೆದ ತಿಂಗಳು ಅಧ್ಯಕ್ಷ ಬಿಜೆಪಿಯ ಮಾಸ್ತಿ ಚಂದ್ರಪ್ಪ ಹಾಗೂ ಉಪಾಧ್ಯಕ್ಷೆ ನಾಗವೇಣಿ ರಾಜಿನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಆ.13ರಂದು ಚುನಾವಣೆ ನಡೆಯಲಿದೆ ಎಂದು ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ತಿಳಿಸಿದ್ದಾರೆ. 13ರ ಬೆಳಿಗ್ಗೆ 9 ರಿಂದ 11 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕು. 11ರಿಂದ 12 ಗಂಟೆವರೆಗೆ ನಾಮಪತ್ರ ಪರಿಶೀಲನೆ 12ರ ನಂತರ ನಾಮಪತ್ರ ವಾಪಸ್ ಪಡೆಯುವುದು ಹಾಗೂ ಅವಶ್ಯ ಬಿದ್ದರೆ 2 ಗಂಟೆಗೆ ಚುನಾವಣೆ ನಂತರ ಫಲಿತಾಂಶ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಆಕಾಂಕ್ಷಿಗಳ ನಡುವೆ ಪೈಪೋಟಿ: 18 ಸದಸ್ಯ ಬಲದ ತಾಲೂಕು ಪಂಚಾಯಿತಿಯಲ್ಲಿ 15 ಸದಸ್ಯರನ್ನು ಹೊಂದಿರುವ ಬಿಜೆಪಿಯಲ್ಲೇ ಮುಂದಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಲಿದ್ದರೂ ಮುಂದಿನ 10 ತಿಂಗಳಿಗಾಗಿ ನಡೆಯಲಿರುವ ಈ ಅಧ್ಯಕ್ಷ ಸ್ಥಾನಕ್ಕಾಗಿ ಪಕ್ಷದ ಮೂವರಲ್ಲಿ ಪೈಪೋಟಿ ನಡೆಯುತ್ತಿದೆ. ಆಶಾ ರಾಜಪ್ಪ, ಪುಟ್ಟಸ್ವಾಮಿ ಹಾಗೂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಸ್.ವಿ. ಲೋಕೇಶ್ ಅಧ್ಯಕ್ಷ ಗಾದಿಗೆ ಪೈಪೋಟಿ ನಡೆಯುತ್ತಿದ್ದು, ಪಕ್ಷದ ತೀರ್ಮಾನದಂತೆ ಪುಟ್ಟಸ್ವಾಮಿ ಬಹುತೇಕ ಅಧ್ಯಕ್ಷರಾಗುವುದು ಖಚಿತವಾಗಿದೆ. ಆದರೆ, ಉಪಾಧ್ಯಕ್ಷ ಗಾದಿಗೆ ಪೈಪೋಟಿ ಇಲ್ಲದಿರುವುದರಿಂದ ಅಧ್ಯಕ್ಷಪಟ್ಟ ವಂಚಿತರಿಗೆ ಉಪಾಧ್ಯಕ್ಷರ ಸ್ಥಾನ ಸಿಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.
ಅಂದರ್ ಬಾಹರ್: ಇಬ್ಬರ ಬಂಧನ
ಟೇಕಲ್: ಇಲ್ಲಿಗೆ ಸಮೀಪದ ಸೀತಹಳ್ಳಿಯ ನೀಲಗಿರಿ ತೋಪಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಕೆಲವರನ್ನು ಮಾಸ್ತಿ ಎಸ್ಐ ಸಲೀ ನದಾಫ್ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರನ್ನು ದಸ್ತಗಿರಿ ಮಾಡಲಾಗಿದೆ. ಆ ಸಂದರ್ಭ ಆಟಕ್ಕಿಟ್ಟಿದ್ದ್ದ 3,800 ಹಾಗೂ 5 ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಹು ದಿನಗಳಿಂದ ಈ ಪ್ರದೇಶದಲ್ಲಿ ಜೂಜಿನಂಥ ಅಕ್ರಮಗಳು ನಡೆಯುತ್ತಿವೆ. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಲು ಆಗ್ರಹಿಸಿದ್ದಾರೆ.
ಸೊಳ್ಳೆ ನಿಯಂತ್ರಣ ಕಾರ್ಯಕ್ರಮ
ಶಿಡ್ಲಘಟ್ಟ: ಡೆಂಘೀಜ್ವರ ನಿಯಂತ್ರಣಕ್ಕಾಗಿ ತಾಲೂಕು ಆರೋಗ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ಸೊಳ್ಳೆ ನಿಯಂತ್ರಣ ಕಾರ್ಯಕ್ರಮ ಪಟ್ಟಣದಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಆರ್ಯೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಪ್ರಾಥಮಿಕ ಕೇಂದ್ರಗಳ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.