'ಮುಳಬಾಗಲು ಬರಪೀಡಿತ ತಾಲೂಕಾಗಿ ಘೋಷಿಸಿ'
ಕ.ಪ್ರ.ವಾರ್ತೆ ಟಿ ಮುಳಬಾಗಲು ಟಿ ಆ.6
ಸತತವಾಗಿ ಬರಗಾಲದಿಂದ ತತ್ತರಿಸುತ್ತಿರುವ ಮುಳಬಾಗಲು ತಾಲೂಕು ಬರಗಾಲ ಪ್ರದೇಶವಾಗಿ ಘೋಷಿಸಬೇಕು. ವಿದರ್ಭ ಮಾದರಿ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಜಾನುವಾರುಗಳೊಂದಿಗೆ ಆಗಮಿಸಿ ಧರಣಿ ನಡೆಸಿದರು. ತಹಸೀಲ್ದಾರ್ ಡಿ.ವಿ.ರಾಮಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
7 ವರ್ಷಗಳಿಂದ ತಾಲೂಕಿನಲ್ಲಿ ಮಳೆಯಾಗಿಲ್ಲ. ರೈತರು ಒಣ ಬೇಸಾಯ ನಂಬಿದ್ದು, ಮಳೆಯನ್ನೇ ಆಶ್ರಯಿಸಬೇಕಾಗಿದೆ. ಈ ಸಾಲಿನಲ್ಲಿ ಅಗತ್ಯಕ್ಕೂ ಕಡಿಮೆ ಮಳೆ ಬಂದಿದೆ. ಇದರಿಂದಾಗಿ ಜಾನುವಾರುಗಳನ್ನು ಸಾಕುವುದು ಸಮಸ್ಯೆಯಾಗಿದೆ. ತಕ್ಷಣ ತಾಲೂಕಿನ ಪಂಚಾಯತಿ ಕೇಂದ್ರಗಳಲ್ಲಿ ಗೋ ಕೇಂದ್ರಗಳನ್ನು ಪ್ರಾರಂಭಿಸಬೇಕು ಆಗ್ರಹಿಸಿದರು.
ತಾಲೂಕು ರೈತ ಸಂಘದ ಗೊಟ್ಚುಕುಂಟೆ ಕೃಷ್ಣ, ಮುಖಂಡರಾದ ಟಿ.ರಂಜಿತಕುಮಾರ್, ಮಂಜುನಾಥಗೌಡ, ಬಾಬು ಮುಂತಾದವರು ಭಾಗವಹಿಸಿದ್ದರು.