ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಿಂದುಳಿದವರಿಗೆ ಸೌಲಭ್ಯ ಕಲ್ಪಿಸಲು ಡಿಎಸ್ಎಸ್ ಆಗ್ರಹ

Rashmi Kasaragodu
Updated On : 7 Aug 2013, 1:10 am

ಕ.ಪ್ರ.ವಾರ್ತೆ   ಮಾಲೂರು   ಆ.6
ತಾಲೂಕಿನ ಹಿಂದುಳಿದ ವರ್ಗ ಹಾಗೂ ಅಸ್ಪಸಂಖ್ಯಾತರ ಸಮಸ್ಯೆಗಳ ನಿವಾರಣೆ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪಟ್ಟಣದ ಬಸ್ ನಿಲ್ದಾಣ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದಿಂದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ನೇತೃತ್ವದ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ಮಿನಿ ವಿಧಾನ ಸೌಧದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.
ಈ ಸಂದರ್ಭ ಮಾತನಾಡಿದ ಮಾವಳ್ಳಿ ಶಂಕರ್, ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ದಲಿತರ- ಅಲ್ಪಸಂಖ್ಯಾತರ ಪರಿಸ್ಥಿತಿ ಸುಧಾರಣೆಯಾಗಿಲ್ಲ. ರಾಜಕೀಯ ಪಕ್ಷಗಳ ದಲಿತರನ್ನು ಯಾಮಾರಿಸುತ್ತಾ ದೇಶವನ್ನು ಆಳುತ್ತಿದೆ. ದಲಿತರ ಅಭಿವೃದ್ಧಿ ಕೇವಲ ಘೋಷಣೆಗಳಲ್ಲಿ ಮಾತ್ರ ಕಾಣತ್ತಿದೆ ಎಂದು ಆರೋಪಿಸಿದರು.
ನೀರಿಲ್ಲದೆ ಕೃಷಿ ಚಟುವಟಿಕೆ ನಡೆಸಲಾಗದೆ ಬಡ ದಲಿತ ರೈತರು ಬವಣೆ ಅನುಭವಿಸುತ್ತಿದ್ದಾರೆ. ಕಳೆದ 4 ದಶಕಗಳಿಂದ ಶಾಶ್ವತ ನೀರಾವರಿ ಯೋಜನೆ ರೂಪಿಸಲು ಸಾಧ್ಯವಾಗಿಲ್ಲ. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ರಾಜಕೀಯದಿಂದ ದೂರವಿಡಲು ಸಾಧ್ಯವಾಗುವಂತೆ ಫಲಾನುಭವಿಗಳನ್ನು ಶಾಸಕರು ಆಯ್ಕೆ ಮಾಡುವುದನ್ನು ಕೂಡಲೇ ರದ್ದುಗೊಳಿಸಬೇಕು. ಸರ್ಕಾರದಿಂದ ಬರುವ ಶೇ.22ರ ಅನುದಾನಗಳನ್ನು ನೇರವಾಗಿ ಫಲಾನುಭವಿಗಳಿಗೆ ನೀಡಬೇಕು. ತಾಲೂಕಿನಲ್ಲಿ ದಲಿತರ ಭೂಮಿ ನುಂಗುವ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಸಂಚಾಲಕ ರಮೇಶ್ ಮಾತನಾಡಿ, ತಾಲೂಕಿನ ಎಟ್ಟುಕೋಡಿ ಸರ್ವೆ ನಂ.38 ರಲ್ಲಿರುವ 3.17 ಗುಂಟೆ ಸರ್ಕಾರಿ ಕರಾಬಿ ಜಮೀನನ್ನು ಗ್ರಾಮದ ಬಡವರಿಗೆ ನೀಡಬೇಕು ಹಾಗೂ ಚಿಕ್ಕತಿರುಪತಿ ಗ್ರಾಮದ ಸರ್ಕಾರಿ ಜಮೀನಲ್ಲಿ ಗುಡಿಸಲು ಮನೆಗಳಲ್ಲಿ ವಾಸವಾಗಿ ಇರುವವರಿಗೆ ನಿವೇಶನ ಪತ್ರ ವಿತರಿಸುವ ಜತೆಯಲ್ಲಿ ಲಕ್ಕೂರು ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ವೆ ನಂ.273 ರಲ್ಲಿ 36 ಎಕರೆ ಸರ್ಕಾರಿ ಜಾಗದಲ್ಲಿ 5 ಎಕರೆ ಜಾಗ ಗ್ರಾಮದ ಎಲ್ಲ ಜಾತಿಯ ಬಡವರಿಗೆ ನಿವೇಶನ ಹಾಗೂ ಆಶ್ರಯ ಕಲ್ಪಿಸಿಕೊಡಲು ಒತ್ತಾಯಿಸಿದರು.
ಪ್ರತಿಭಟನೆಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ನಾಗರಾಜ್, ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಕಳುಹಿಸಿ ನಿರ್ದೇಶನದ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ನಿವೃತ್ತ ಬಿಇಓ ಪಾಪಣ್ಣ, ಗ್ರಾಮಾಂತರ ನಗರ ಜಿಲ್ಲೆ ಸಂಚಾಲಕ ಚಿನ್ನಸ್ವಾಮಿ ಮಾತನಾಡಿದರು. ಕೆ.ಮುನಿಕೃಷ್ಣಪ್ಪ, ಮುಳಬಾಗಿಲು ಮುನಿವೆಂಕಟಪ್ಪ, ರವಿ ಕುಮಾರ್, ಲಕ್ಕೂರು ವೆಂಕಟೇಶ್, ಮಣಿಪಾಲ್ ರಾಜಪ್ಪ, ಸಿದ್ದಾಪುರ ಮಂಜು, ಎಂ.ಸಿ. ವೇಣು, ಎಂ.ವೆಂಕಟಸ್ವಾಮಿ, ಶಂಕರ್, ಆನಂದ್, ನಾಗರಾಜ್, ನಾರಾಯಣಸ್ವಾಮಿ,ಅಮರೇಶ್, ಡಿ.ಮುನಿಯಪ್ಪ, ರಾಮಚಂದ್ರಪ್ಪ, ಎ.ಕೆ.ವೆಂಕಟೇಶ್, ನಾರಾಯಣಸ್ವಾಮಿ, ವಸಂತಕುಮಾರ್, ಮುನೇಗೌಡ, ಸುರೇಶ್, ಮುನಿರಾಜು, ಬಾಬು ಹಾಗೂ ನೂರಾರು ಕಾರ್ಯಕರ್ತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement