ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

108 ಆ್ಯಂಬುಲೆನ್ಸ್ ನೌಕರರ ಪ್ರತಿಭಟನೆ

Rashmi Kasaragodu
Updated On : 8 Aug 2013, 12:45 pm

ಚಿಕ್ಕಬಳ್ಳಾಪುರ: 108 ಆ್ಯಂಬುಲೆನ್ಸ್ ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡಲೇ ಮುಂದಾಗಿ 108 ಆ್ಯಂಬುಲೆನ್ಸ್ ನಿಲುಗಡೆಯಿಂದ ಪ್ರಸ್ತುತ ಜನರು ಅನುಭವಿಸುತ್ತಿರುವ ತೊಂದರೆಯನ್ನು ದೂರ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಶಿಡ್ಲಘಟ್ಟ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರವನ್ನು ಸಲ್ಲಿಸಿದರು. 108 ಸಿಬ್ಬಂದಿ ಮೇಲ್ವಿಚಾರಣೆ ಸರ್ಕಾರವು ಜಿ.ವಿ.ಕೆ. ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ್ದು, ಈ ಸಂಸ್ಥೆ ಸಿಬ್ಬಂದಿಯು ಮಾಡುತ್ತಿರುವ ಕೆಲಸಕ್ಕೆ ಹಾಗೂ ಅವರ ಜೀವನ ನಿರ್ವಹಣೆಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದು ಇದರಿಂದ ಸಿಬ್ಬಂದಿಯು ಮುಷ್ಕರ ನೆಡೆಸುವಂತಾಗಿದೆ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸರ್ಕಾರವೇ 108 ನೌಕರರ ಸಿಬ್ಬಂದಿ ಉಸ್ತುವಾರಿ ವಹಿಸಿಕೊಳ್ಳಬೇಕು. ಜಿ.ವಿ.ಕೆ. ಸಂಸ್ಥೆ ಗುತ್ತಿಗೆ ರದ್ದುಪಡಿಸಿ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.  ಕೆ.ಮುನಿರಾಜು, ಪ್ರಸಾದ್, ಅರುಣ್‌ಕುಮಾರ್, ವಿನೋದ್ ಕುಮಾರ್, ಅಬ್ಬು, ರವಿಕುಮಾರ್ ಇದ್ದರು.
ಇಂದು ಉದ್ಘಾಟನೆ
ಕೋಲಾರ: ನಗರದ ಹೊರ ವಲಯದ ಟಮಕದಲ್ಲಿ ನಿರ್ಮಿಸಿರುವ ತೋಟಗಾರಿಕೆ ಮಹಾವಿದ್ಯಾಲಯದ ನೂತನ ಕಟ್ಟಡ ಮತ್ತು ಬಾಲಕರು ಮತ್ತು ಬಾಲಕಿಯರ ಪ್ರತ್ಯೇಕ ವಸತಿ ನಿಲಯಗಳ ಉದ್ಘಾಟನೆ ಆ.8 ರಂದು ಹಮ್ಮಿಕೊಂಡಿದ್ದು ಕೇಂದ್ರ ಸರ್ಕಾರದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಕೆ.ಹೆಚ್. ಮುನಿಯಪ್ಪ ನೆರವೇರಿಸಲಿದ್ದಾರೆ ಎಂದು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಟಿ.ದಂಡಿನ್ ತಿಳಿಸಿದ್ದಾರೆ. ಅವರು ಟಮಕದಲ್ಲಿ ತೋಟಗಾರಿಕಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ,  ಕಾಲೇಜಿನಲ್ಲಿ ಒಟ್ಟು 221 ವಿದ್ಯಾರ್ಥಿಗಳಿದ್ದು ಅದರಲ್ಲಿ 56 ಬಾಲಕಿಯರು ವ್ಯಾಸಂಗ ಮಾಡುತ್ತಿರುವುದಲ್ಲದೆ ಒಟ್ಟು ಇಪ್ಪತ್ತು ಉಪನ್ಯಾಸಕರು ಸೇರಿದಂತೆ ಒಟ್ಟು 30 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆಂದು ಹೇಳಿದರು. ಟಮಕದ ತೋಟಗಾರಿಕೆ ಮಹಾವಿದ್ಯಾಲಯದ ಕ್ಯಾಂಪಸ್‌ನಲ್ಲಿ 631ನೇ ಕೃಷಿ ವಿಜ್ಞಾನ ಕೇಂದ್ರವನ್ನು ಪ್ರಾರಂಭಿಸಲಾಗಿದೆ.  ಇದರ ಕಟ್ಟಡ ನಿರ್ಮಾಣಕ್ಕೂ ಆ.8ರಂದು ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದರು. ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ರಾಜು, ಕೋಲಾರ ತೋಟಗಾರಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಾಚೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement