ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆಎಎಸ್ ಅಧಿಕಾರಿ ರವಿ ಆತ್ಮಹತ್ಯೆ: ಪತ್ನಿ ವಿಚಾರಣೆ

Rashmi Kasaragodu
Updated On : 8 Aug 2013, 12:38 pm

ಕ.ಪ್ರ.ವಾರ್ತೆ   ಕೋಲಾರ   ಆ.7
ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಕೆ.ಎ.ಎಸ್ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋಲಾರದ ಕಾರಂಜಿಕಟ್ಟೆ ನಿವಾಸಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಉಪ ಖಜಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ರವಿ (32) ಆತ್ಮಹತ್ಯೆಗೆ ಶರಣಾದ ಕೆಎಎಸ್ ಅಧಿಕಾರಿ.
ಮೂಲತಃ ಚಿಂತಾಮಣಿ ತಾಲೂಕಿನ ಸೀಗೇಹಳ್ಳಿ ಗ್ರಾಮದ ರವಿ 2002ರಲ್ಲಿ ಪೊಲೀಸ್ ಇಲಾಖೆಗೆ ಸೇರಿ 8 ವರ್ಷಗಳ ಕಾಲ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕೆಲಸ ಮಾಡಿದ್ದರು. ಪದವಿ ಮುಗಿಸಿ ನಂತರ 2010ರಲ್ಲಿ ಕೆಎಎಸ್ ಪರೀಕ್ಷೆ ಬರೆದಿದ್ದರು. ಕೆಎಎಸ್ ಪರೀಕ್ಷೆ ತೇರ್ಗಡೆ ಬಳಿಕ 2011ರಲ್ಲಿ ರವಿ ಶಿಡ್ಲಘಟ್ಟದ ಉಪ ಖಜಾನೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಸೇರಿಕೊಂಡು ಕೆಲಸ ನಿರ್ವಹಿಸುತ್ತಿದ್ದರು.
ಪೊಲೀಸ್ ಇಲಾಖೆಗೆ ಸೇರಿದ 1 ವರ್ಷದ ನಂತರ, ಅಂದರೆ 2003ರಲ್ಲಿ ಚಿಂತಾಮಣಿಯ ಸುಕನ್ಯಾ ಎಂಬವರನ್ನು ಮದುವೆಯಾಗಿದ್ದರು.  ಕೋಲಾರದಲ್ಲಿ ಪೊಲೀಸ್ ಕೆಲಸ ನಿರ್ವಹಿಸುತ್ತಿದ್ದರಿಂದ ಹೆಂಡತಿ ಒತ್ತಾಯದ ಮೇರೆಗೆ ರವಿ ಚಿಂತಾಮಣಿಯಿಂದ ಕೋಲಾರಕ್ಕೆ ಸಂಸಾರ ಸ್ಥಳಾಂತರ ಮಾಡಿ, ಪ್ರಾರಂಭದಲ್ಲಿ ಕೆಲ ತಿಂಗಳು ಗಾಂಧಿನಗರದಲ್ಲಿ ವಾಸವಿದ್ದು, ನಂತರ ಕಾರಂಜಿಕಟ್ಟೆಯ 11ನೇ ಕ್ರಾಸಿಗೆ ಬಂದು ನೆಲಸಿದ್ದರು.
ರವಿ-ಸುಕನಾ ದಂಪತಿಗೆ ಧನುಷ್ (9) ಹಾಗೂ ಸಿಂಚನ (7) ಎಂಬ ಮಕ್ಕಳಿದ್ದಾರೆ. ಕೆಎಎಸ್ ಅಧಿಕಾರಿಯಾದ ನಂತರ ಗಂಡ-ಹೆಂಡತಿ ನಡುವೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಯಿತು. ಜತೆಗೆ ಹೆಂಡತಿ ಗಂಡನ ಮೇಲೆ ಅನುಮಾನ ಪಡಲಾರಂಭಿಸಿದ್ದರಿಂದ ಸಂಸಾರದಲ್ಲಿ ಬಿರುಕು ಉಂಟಾಗಿತ್ತು. ಇದರಿಂದ ರವಿ ಬೇಸತ್ತಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಗಂಡ ದೊಡ್ಡ ಹುದ್ದೆಯಲ್ಲಿದ್ದರೂ ಹಣದಾಸೆಯಿಂದ ಸುಕನ್ಯಾ ಖಾಸಗಿ ಕಂಪನಿಗೆ ಸೇರಿದ್ದರು. ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಆದ್ದರಿಂದ ಗಂಡ ಪ್ರಶ್ನಿಸಿದಾಗ ಜಗಳಕ್ಕೆ ಇಳಿಯುತ್ತಿದ್ದರು ಎಂದು ಮೃತನ ಸಂಬಂಧಿಸಿದರು ದೂರಿದ್ದಾರೆ. ಇದೇ ಕಾರಣಕ್ಕೆ ಪತ್ನಿ ಸುಕನ್ಯಾ ಚಿಂತಾಮಣಿಯಲ್ಲಿ ಗಂಡನ ವಿರುದ್ಧ ಮಹಿಳಾ ಸಂತ್ವಾನ ಕೇಂದ್ರದಲ್ಲಿ ದೂರು ನೀಡಿದ್ದರಿಂದ ಆಗಾಗ ರವಿ ಮತ್ತು ಸುಕನ್ಯಾ ವಿಚಾರಣೆಗಾಗಿ ಚಿಂತಾಮಣಿಗೆ ಹೋಗಿ ಬರುತ್ತಿದ್ದರು.
ಮಂಗಳವಾರ ಚಿಂತಾಮಣಿಗೆ ಹೋಗಿದ್ದ ರವಿ ಸಂಜೆ 5.30ಕ್ಕೆ ಕೋಲಾರಕ್ಕೆ ಬಂದು ತನ್ನ ಮನೆ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಗಂಡನ ಜತೆ ಕೋಲಾರಕ್ಕೆ ಬರದೆ ಚಿಂತಾಮಣಿಯ ತನ್ನ ತಂದೆ ಮನೆಗೆ ಹೋಗಿದ್ದ ಸುಕನ್ಯಾ ಕೋಲಾರಕ್ಕೆ ವಾಪಸ್ ಬಂದು ನೋಡಿದಾಗ ಗಂಡ ಹೆಣವಾಗಿದ್ದರು.
ರವಿ ಆತ್ಮಹತ್ಯೆ ಡೆತ್‌ನೋಟ್ ಬರೆದಿದ್ದು ಪೊಲೀಸರ ಕೈಗೆ ಸಿಕ್ಕಿದೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ರಮೇಶ್ ಮೃತನ ಪತ್ನಿ ಸುಕನ್ಯಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತನ ಅಣ್ಣ ಸುಬ್ರಮಣಿ ಅವರು ತಮ್ಮನ ಸಾವಿಗೆ ನಾದಿನಿಯೇ ಕಾರಣ ಎಂದು ಆರೋಪಿಸಿದ್ದಾರೆ.


13 ಪುಟಗಳ ಡೆತ್‌ನೋಟ್
ಆತ್ಮಹತ್ಯೆ ಮುನ್ನ ರವಿ ಬರೆದಿಟ್ಟಿರುವ 13 ಪುಟಗಳ ಡೆತ್‌ನೋಟಿನಲ್ಲಿ ಪತ್ನಿಯು ಧನದಾಹಿ, ಮಾನಸಿಕ ಹಿಂಸೆ ನೀಡುತ್ತಿದ್ದಳು. ಮಲಗುವಾಗ ಪಕ್ಕದಲ್ಲಿ ಚಾಕು ಇಟ್ಟುಕೊಳ್ಳುತ್ತಿದ್ದಳು. ಜತೆಗೆ ನನ್ನ ವಿರುದ್ಧ ಜಗಳವಾಡುತ್ತಿದ್ದಳು. ನಿನಗೆ ಏಡ್ಸ್ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಳು.
ಅಲ್ಲದೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಸಹ ಮಾಡಿಸಿದ್ದೆ. ಮದುವೆಯಾದ ನಂತರ ನನ್ನ ತಂದೆ-ತಾಯಿಯನ್ನು ದೂರ ಮಾಡಿದಳು, ಮಕ್ಕಳೊಂದಿಗೂ ಬೇರೆಯಲು ಬಿಡುತ್ತಿರಲಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement