ಚಿರತೆ ದಾಳಿಗೆ ಹಸು ಬಲಿ
ಚಿಕ್ಕಬಳ್ಳಾಪುರ: ತಾಲೂಕಿನಲ್ಲಿರುವ ಸ್ಕಂದಗಿರಿ, ನಂದಿ ಗಿರಿ ಸೇರಿದಂತೆ ಪಂಚಗಿರಿಗಳ ತಪ್ಪಲಿನಲ್ಲಿರುವ ಅರಣ್ಯ ಪ್ರದೇಶದಲ್ಲಿ ಆಗಾಗ ಚಿರತೆಗಳು ಪ್ರತ್ಯಕ್ಷವಾಗುತ್ತಿವೆ. ಈ ನಡುವೆ ಗ್ರಾಮಗಳ ಮೂಲಕ ಹಾದು ಹೋಗಿ ಭಯದ ವಾತಾವರಣವನ್ನು ಮೂಡಿಸಿರುವುದರ ನಡುವೆ ಚಿರತೆಗಳ ದಾಳಿಗೆ ಹಸುಗಳು ಬಲಿಯಾಗುತ್ತಿವೆ. ಮಂಗಳವಾರ ತಾಲೂಕಿನ ಹನುಮಂತಪುರ ಗ್ರಾಮದ ಸುತ್ತಮುತ್ತಲಿನ ಜನರು ತಮ್ಮ ಹಸುಗಳನ್ನು ಮೇಯಿಸಲು ಸಮೀಪದ ಗುಡ್ಡದ ತಪ್ಪಲಿನ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಸಂಜೆ ಮನೆಗೆ ವಾಪಸ್ ಕರೆದುಕೊಂಡು ಬರುವ ಸಂದರ್ಭದಲ್ಲಿ ಗ್ರಾಮದ ಅಂತೋಣಿ ಎನ್ನುವವರಿಗೆ ಸೇರಿದ್ದ ಹಸುವೊಂದು ಕಾಣೆಯಾಗಿದ್ದು ಇದರಿಂದ ಕಾಡಿನಲ್ಲಿ ಪರಿಶೀಲನೆ ನಡೆಸಿದಾಗ ಚಿರತೆ ಹಸುವನ್ನು ಕೊಂದು ಹಾಕಿರುವುದು ಪತ್ತೆಯಾಗಿದೆ. ಇದಕ್ಕೆ ಸಾಕ್ಷಿಯಾಗಿ ಸತ್ತು ಬಿದ್ದಿದ್ದ ಹಸುವಿನ ದೇಹದ ಬಳಿ ಚಿರತೆಯ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಈ ನಡುವೆ ಗ್ರಾಮಕ್ಕೆ ಚಿರತೆ ಬಂದ ಸಂದರ್ಭದಲ್ಲಿ ನಾಯಿಗಳು ಗುಂಪು ಗುಂಪಾಗಿ ಮುಗಿ ಬಿದ್ದಿದ್ದರಿಂದ ಕಾಡಿನತ್ತ ಚಿರತೆ ಓಡಿ ಹೋಗಿದ್ದನ್ನು ಗ್ರಾಮಸ್ಥರು ಸಹ ಕಂಡಿದ್ದಾರೆ. ಕಾಡಿನ ತಪ್ಪಲಿನಲ್ಲಿ ಆಗಾಗ ಚಿರತೆಗಳ ಕಾಣಿಸಿಕೊಂಡು ಸಾಕುಪ್ರಾಣಿಗಳನ್ನು ಕೊಂದು ಹಾಕುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಹಸುಗಳು ಬಲಿಯಾಗುತ್ತಿರುವುದರಿಂದ ಆರ್ಥಿಕ ನಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇತ್ತ ಅಧಿಕಾರಿಗಳು ಕಾಡಿಗೆ ಒಂಟಿಯಾಗಿ ಹೋಗಬಾರದು. ಗ್ರಾಮಗಳಲ್ಲೂ ಸಹ ನಿರ್ಲಕ್ಷ್ಯದಿಂದ ಇರಬಾರದೆಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.