ಟಿಪ್ಪರ್ ಹರಿದು ಮಗು ಗಾಯ:ಲಾರಿಗೆ ಕಲ್ಲು
ಟೇಕಲ್: ಮಗುವಿನ ಮೇಲೆ ಟಿಪ್ಪರ್ ಹರಿದ ಪರಿಣಾಮ ಎರಡು ಕಾಲುಗಳನ್ನು ಕಳೆದುಕೊಂಡ ದಾರುಣ ಘಟನೆ ಟೇಕಲ್ ಸಮೀಪದ ದಿನ್ನೆ ಮನೆಗಳ ಬಳಿ ಬುಧವಾರ ಮುಂಜಾನೆ ನಡೆದಿದೆ.
ಮಾಮೂಲಿನಂತೆ ಶಾಲಾ ವಾಹನಕ್ಕೆ ಮಕ್ಕಳನ್ನು ಹತ್ತಿಸಲು ಬಂದಿದ್ದ ಸಂದರ್ಭ ತನ್ನ ತಾಯಿ ಜೊತೆ ಬಂದಿದ್ದ 3 ವರ್ಷ ಮನೋಜ್ ಆಕಸ್ಮಿಕವಾಗಿ ಜಲ್ಲಿ ತುಂಬಿದ ಟಿಪ್ಪರ್ ಲಾರಿಗೆ ಸಿಲುಕಿದ್ದಾನೆ. ಇದರಿಂದ ಉದ್ರಿಕ್ತಗೊಂಡ ಜನತೆ ಲಾರಿ ಮೇಲೆ ಕಲ್ಲು ತೂರಾಟ ನಡೆಸಿದರು.
ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಮಗುವನ್ನು ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಟೇಕಲ್ ಮತ್ತು ಮಾಸ್ತಿ ಪೊಲೀಸರು ಆಗಮಿಸಿ ಲಾರಿ ವಶಪಡಿಸಿಕೊಂಡರು. ಪರಾರಿಯಾಗಿರುವ ಚಾಲಕನ ಪತ್ತೆಗೆ ಕ್ರಮ ಜರುಗಿಸಲಾಗಿದೆ. ಮಾಸ್ತಿ ಪೊಲೀಸರು ದೂರು ದಾಖಲಿಸಿದ್ದಾರೆ.