ಪ.ಬಂಗಾಳದಲ್ಲಿ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ
ಚಿಂತಾಮಣಿ: ಪಶ್ಚಿಮ ಬಂಗಾಳದಲ್ಲಿ ಎಡರಂಗ ಕಾರ್ಯಕರ್ತರ ಮೇಲೆ ದೌರ್ಜನ್ಯ ವಿರೋಧಿಸಿ ಸಿಪಿಎಂ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿನ ಯೋಗಿನಾರಾಯಣ ವೃತ್ತದ ಬಳಿ ತಾಲೂಕು ಸಿಪಿಎಂ ಶಾಖಾ ಘಟಕದ ವತಿಯಿಂದ ಪಶ್ಚಿಮಬಂಗಾಳ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿ ಎಡರಂಗ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯ, ಹಲ್ಲೆ ಮಾಡುವ ಧೋರಣೆ ಖಂಡಿಸಿ, ಸಿಪಿಎಂ ಕಾರ್ಯಕರ್ತರು ಪಶ್ಚಿಮ ಬಂಗಾಳದ ಕಾರ್ಯವೈಖರಿ ಬಗ್ಗೆ ಹಾಗೂ ಕೇಂದ್ರ ಸರ್ಕಾರ ವಿರುದ್ಧ ದಿಕ್ಕಾರಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಗೋಪಿನಾಥ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಸಿಪಿಎಂ ಕಾರ್ಯಕರ್ತರನ್ನು ರಾಜಕೀಯ ದುರುದ್ದೇಶದಿಂದ ದಮನ ಮಾಡಲು ಹೊರಟಿರುವ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ನೀತಿ ವಿರುದ್ಧ ಕಿಡಿಕಾರಿದರು. ಈ ಕೂಡಲೇ ಕೇಂದ್ರ ಸರ್ಕಾರ ಎತ್ತೆಚ್ಚುಕೊಂಡು ಅಲ್ಲಿನ ರಾಜಕೀಯ ಪರಿಸ್ಥಿತಿ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆ ಬಗ್ಗೆ ನ್ಯಾಯ ಸಮ್ಮತವಾದ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಪಿಎಂ ಮುಖಂಡರಾದ ಗೋಪಸಂದ್ರ ಶ್ರೀನಿವಾಸರೆಡ್ಡಿ, ಜಹೀರ್,ಲಕ್ಷ್ಮಿನಾರಾಯಣರೆಡ್ಡಿ, ಬಾಬುರೆಡ್ಡಿ, ಸಿಐಟಿಯು ಮುಖಂಡರಾದ ಮಂಜುನಾಥ್, ಬಾಬು, ಅನುಸೂಯಮ್ಮ, ಖಾಸಗಿ ಸಾರಿಗೆ ನೌಕರರು ಮತ್ತಿತರರು ಭಾಗವಹಿಸಿದ್ದರು.