ಮಕ್ಕಳಿಗೆ ವಾರ್ಡನ್ಗಳ ಕಿರುಕುಳ ತಪ್ಪಿಸಿ
ಚಿಕ್ಕಬಳ್ಳಾಪುರ: ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ತಯಾರಿಸಲು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಕೆಲ ವಾರ್ಡನ್ಗಳು ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದನ್ನು ತಪ್ಪಿಸಬೇಕೆಂದು ತಾಲೂಕು ಪಂಚಾಯತ್ ಅಧ್ಯಕ್ಷ ಓಬಳೇಶಪ್ಪ ಸೂಚಿಸಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಸಮರ್ಪಕವಾಗಿ ಊಟ, ವಿದ್ಯಾರ್ಥಿ ವೇತನ ಹಾಗೂ ಇತರೆ ಸೌಕರ್ಯಗಳನ್ನು ನೀಡಬೇಕು.
ಕೆಲ ಶಾಲಾ ಕಾಲೇಜುಗಳಲ್ಲಿ ಬ್ಯಾಂಕ್ ಖಾತೆಯಿಲ್ಲದೆ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಸಂಬಂಧಿತ ಪ್ರಾಂಶುಪಾಲರು ಮುಖ್ಯೋಪಾಧ್ಯಾಯರ ಖಾತೆಗೆ ಜಮಾ ಆಗುತ್ತಿದೆ. ನಂತರ ಅದು ವಿದ್ಯಾರ್ಥಿಗಳಿಗೆ ತಲುಪುತ್ತಿದೆ. ಇಲ್ಲಿ ಗೋಲ್ಮಾಲ್ ಆಗುವ ಸಾಧ್ಯತೆಗಳಿದ್ದು ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ವೇತನ ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ತಲುಪಿಸಬೇಕು. ಪ್ರಮುಖವಾಗಿ ಅಡುಗೆಯನ್ನು ತಯಾರಿಸಲು ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನು ಹಾಸ್ಟೆಲ್ಗಳು ಉಪಯೋಗಿಸಬೇಕು ಎಂದರು.
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣಾಧಿಕಾರಿ ಕೃಷ್ಣಪ್ಪ, ವಿದ್ಯಾರ್ಥಿಗಳಿಗೆ ಉತ್ತಮ ಆಹಾರ, ವಸತಿ ನೀಡಲಾಗುತ್ತದೆ. ಅಡುಗೆ ತಯಾರಿಸಲು ಹಾಸ್ಟೆಲ್ಗಳಲ್ಲಿ ಬಳಸುವ ಆಹಾರ ಧಾನ್ಯಗಳ ದಾಸ್ತಾನು ಒಳ್ಳೆಯ ಗುಣಮಟ್ಟದ್ದಾಗಿದೆ. ಆದರೆ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಈ ನಡುವೆಯೂ ಇರುವ ಸಂಪನ್ಮೂಲದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.
4 ಡೆಂಘಿ ಪ್ರಕರಣ: ಆರೋಗ್ಯ ಇಲಾಖೆ ಅಧಿಕಾರಿ ಮಿತ್ರಣ್ಣ ಮಾತನಾಡಿ, ತಾಲೂಕಿನಲ್ಲಿ ವಿವಿಧ ಲಸಿಕೆಯನ್ನು ಸರಿಯಾಗಿ ನೀಡಲಾಗುತ್ತಿದೆ. ಇನ್ನೂ ಒಟ್ಟು 4 ಡೆಂಘಿ ಪ್ರಕರಣಗಳು ಪತ್ತೆಯಾಗಿವೆ. ನಾಯಿ ಕಡಿತ ಪ್ರಕರಣಗಳು ಸಹ ವರದಿಯಾಗಿದ್ದು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೃಷಿ ಇಲಾಖೆಯಿಂದ ರಸಗೊಬ್ಬರ ವಿತರಣೆಯಾಗುತ್ತಿದೆ. ಈಗ ಮಿನಿ ಟ್ರ್ಯಾಕ್ಟರ್ಗಳಿಗೆ ಬೇಡಿಕೆಯಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ಶಿಕ್ಷಣ ಇಲಾಖೆಯಿಂದ ಶಾಲಾ ಮಕ್ಕಳಿಗೆ ವಾರಕ್ಕೆ 3 ಬಾರಿ ಹಾಲು ನೀಡಲಾಗುತ್ತಿವೆ. ಕೆಎಂಎಫ್ ಹಾಲಿನಪುಡಿ ವಿತರಿಸುತ್ತಿದೆ ಎಂದು ಅಕ್ಷರ ದಾಸೋಹದ ಅಧಿಕಾರಿಗಳು ತಿಳಿಸಿದರು.
ಇನ್ನೂ ಸಭೆಯಲ್ಲಿ ಬಿಸಿಎಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೀನುಗಾರಿಕೆ, ರೇಷ್ಮೆ ಹಾಗೂ ಇನ್ನಿತರ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ಭಾರತಿ, ಸದಸ್ಯರಾದ ಕೃಷ್ಣಮೂರ್ತಿ, ವೆಂಕಟನಾರಾಯಣಪ್ಪ, ಕಾರ್ಯ ನಿರ್ವಹಣಾಧಿಕಾರಿ ಶಶಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.