ವಾರ್ತಾ ಇಲಾಖೆ ಮೂಲಕವೇ ಜಾಹಿರಾತಿಗೆ ಒತ್ತಾಯ
ಕ.ಪ್ರ.ವಾರ್ತೆ ಕೋಲಾರ ಆ.7
ಸರ್ಕಾರಿ ಜಾಹಿರಾತುಗಳನ್ನು ವಾರ್ತಾ ಇಲಾಖೆ ಮೂಲಕವೇ ನೀಡಬೇಕೆಂದು ಜಿಲ್ಲಾ ಸ್ಥಳೀಯ ಪತ್ರಿಕೆಗಳ ಸಂಪಾದಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಪತ್ರಿಕೆಗಳ ಸಂಪಾದಕರು ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ನಡುವೆಯೂ ಪತ್ರಿಕೆಗಳನ್ನು ಹೊರ ತರಲಾಗುತ್ತಿದೆ. ಇದೀಗ ಮಾರ್ಕೆಟಿಂಗ್ ಅಂಡ್ ಕನ್ಸಲ್ಟೆನ್ಸಿ ಏಜೆನ್ಸಿ ಮೂಲಕ ಜಾಹಿರಾತು ನೀಡುವ ನಿರ್ಧಾರ ಹೊರಬರುತ್ತಿರುವುದು ದುರದೃಷ್ಟಕರ ಎಂದು ತಿಳಿಸಿದರು.
ಏಜೆನ್ಸಿ ಮೂಲಕ ಜಾಹಿರಾತು ನೀಡಿದಲ್ಲಿ ಶೇ.15ರಷ್ಟು ಕಮಿಷನ್ ಅನ್ನು ಈ ಏಜೆನ್ಸಿ ಪತ್ರಿಕೆಗಳಿಂದ ವಸೂಲಿ ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಸಂಪಾದಕರು, ವಾರ್ತಾ ಇಲಾಖೆಯಿಂದಲೇ ಇದುವರೆಗೂ ಜಾಹಿರಾತು ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಮುಂದುವರಿಯಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಏಜೆನ್ಸಿ ಮೂಲಕ ಜಾಹಿರಾತು ನೀಡುವ ನಿರ್ಧಾರದ ವಿರುದ್ಧ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿ ಗಮನ ಸೆಳೆದು ವಾರ್ತಾ ಇಲಾಖೆ ಮೂಲಕವೇ ಜಾಹಿರಾತು ನೀಡುವಂತೆ ಸರ್ಕಾರದ ಮನವೊಲಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದಕ್ಕೆ ಸ್ಪಂದಿಸದಿದ್ದಲ್ಲಿ ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಿಯಾದರೂ, ಸಮಸ್ಯೆ ಇತ್ಯರ್ಥಗೊಳಿಸಿಕೊಳ್ಳಲು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗಣೇಶ್, ವಿವಿಧ ಜಿಲ್ಲಾ ಪತ್ರಿಕೆಗಳ ಸಂಪಾದಕರಾದ ಅಬ್ಬಣಿ ಶಂಕರ್, ಮುರಳೀಧರ್, ಕೋ.ನಾ. ಪ್ರಭಾಕರ್, ಗೋಪಿಕಾ ಮಲ್ಲೇಶ್, ಹರೀಶ್, ವೆಂಕಟೇಶ್ ಬಾಬಾ, ಚಾನ್ ಪಾಷ, ಬದರೀನಾಥ್, ಎಚ್.ಎಲ್. ಸುರೇಶ್, ಮುನಿಯಪ್ಪ, ಸಿ.ಎಲ್.ಶ್ರೀನಿವಾಸಲು, ರಮೇಶ್ ಮತ್ತಿತರರಿದ್ದರು.