'ಸಿಪಿಎಂ ನಿರ್ನಾಮ ಮಾಡಲು ಕಾಂಗ್ರೆಸ್ ಷಡ್ಯಂತ್ರ'
ಬಾಗೇಪಲ್ಲಿ: ಕಮ್ಯೂನಿಸ್ಟ್ ಪಕ್ಷವನ್ನು ನಿರ್ನಾಮ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ನಿರಂತರವಾಗಿ ಪ್ರಯತ್ನ ನಡೆಸುತ್ತಿವೆ ಎಂದು ಸಿಪಿಎಂ ಮುಖಂಡ ಡಾ. ಅನಿಲ್‌ಕುಮಾರ್ ತಿಳಿಸಿದರು.
ಬಾಗೇಪಲ್ಲಿಯಲ್ಲಿ ನಡೆದ ಗೋಲಿಬಾರ್‌ಗೆ ಬಲಿಯಾದ ಸಂಗಾತಿಗಳಿಗೆ ಸಂತಾಪವನ್ನು ಸೂಚಿಸುವ ನಿಟ್ಟನಲ್ಲಿ ಹುತಾತ್ಮ ದಿನಾಚರಣೆ ಸಿಪಿಎಂ ವತಿಯಿಂದ ಪಟ್ಟಣದ ಹೊರವಲಯದಲ್ಲಿರುವ ಹುತಾತ್ಮ ಸ್ತೂಪದ ಬಳಿ ಹಮ್ಮಿಕೊಂಡಿದ್ದ ಸಂತಾಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಸ್ಟರನ್ನು ತುಳಿಯಲು ಇತ್ತೀಚೆಗೆ ನಡೆದ ತಾ.ಪಂ. ಜಿ.ಪಂ.ಹಾಗೂ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಯದಂತೆ ದೌರ್ಜನ್ಯ ಹಾಗೂ ಹತ್ಯೆಗಳನ್ನು ನಡೆಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ಸಿಪಿಎಂ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸುಮಾರು ವರ್ಷಗಳ ಕಾಲ ಅಧಿಕಾರವನ್ನು ನಡೆಸಿರುವುದರಿಂದ ಅಲ್ಲಿನ ಜನತೆಗೆ ಹಣವನ್ನು ಖರ್ಚು ಮಾಡಿದರೂ ಸಹ ಅಧಿಕಾರವನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ ಕಮ್ಯೂನಿಸಸ್ಟ್ಸಿದ್ದಾಂತದಿಂದ ಬಂದಿರುವವರು ಅಷ್ಟು ಸುಲಭವಾಗಿ ಹಣಕ್ಕೆ ಬಗ್ಗುವ ಜಾಯಮಾನ ಅವರದ್ದಲ್ಲ ಎಂಬ ಸತ್ಯವನ್ನು ಅರಿತು ದೌರ್ಜನ್ಯ ಮಾಡುವ ಮೂಲಕ ಅಧಿಕಾರವನ್ನು ಪಡೆಯುವ ನಿಟ್ಟಿನಲ್ಲಿ ಸಿಪಿಎಂ ಕಾರ್ಯಕರ್ತರ ಮೇಲೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ನಿರಂತರವಾಗಿ ದೌರ್ಜನ್ಯ ಮತ್ತು ಹತ್ಯೆಗಳನ್ನು ನಡೆಸುತ್ತಿದ್ದಾರೆ. ಆದರೆ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಪರಿಸ್ಥಿತಿಯೇ ಬೇರೆ ಬಹುತೇಕ ಬಡವರೆ ಇರುವ ಈ ಕ್ಷೇತ್ರದ ಜನತೆಗೆ ಹಣದ ಆಸೆ-ಆಮಿಷಗಳನ್ನು ತೋರಿಸಿ ಬಡವರ ಮತಗಳನ್ನು ಕೊಂಡುಕೊಳ್ಳುವ ಮೂಲಕ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಮೆರೆಯುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಪುರಸಭೆಯ ಸದಸ್ಯರಾದ ಮಹಮ್ಮದ್ ಆಕ್ರಂ ಮುಂತಾದವರು ಮಾತನಾಡಿದರು.
ಜಿ.ಪಂ. ಮಾಜಿ ಉಪಾಧ್ಯಕ್ಷೆ ಸಾವಿತ್ರಮ್ಮ, ತಾ.ಪಂ. ಮಾಜಿ ಅಧ್ಯಕ್ಷೆ ಶೋಭಾ ಮಂಜುನಾಥರೆಡ್ಡಿ, ಮಜೀದ್ ಸಾಬ್, ರಾಮಲಿಂಗಪ್ಪ, ನಾರಾಯಣಮ್ಮ, ಗೌರಮ್ಮ, ಚಂದ್ರಶೇಖರರೆಡ್ಡಿ, ಶ್ರೀರಾಮಪ್ಪ ಮುಂತಾದವರು ಭಾಗವಹಿಸಿದ್ದರು.