'ಸ್ವಾತಂತ್ರ್ಯೋತ್ಸವದಂದು ಗ್ರಾಪಂಗಳಲ್ಲಿ ರಾಷ್ಟ್ರಧ್ವಜ ಹಾರಿಸಿ'
ಕ.ಪ್ರ.ವಾರ್ತೆ ಕೋಲಾರ ಆ.7
ಭಾರತದ ರಾಷ್ಟ್ರಧ್ವಜವು ಸಮಗ್ರ ಭಾರತೀಯರ ಭರವಸೆ, ಭಾವೈಕ್ಯತೆ, ಮಹತ್ವಾಕಾಂಕ್ಷೆ ಹಾಗೂ ಹೆಮ್ಮೆಯ ಪ್ರತೀಕವಾಗಿದೆ. ಇದನ್ನು ಸ್ವಾತಂತ್ರ್ಯ ದಿನದಂದು ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಹಾರಿಸಿ ಗೌರವ ಸೂಚಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಭಟ್ ತಿಳಿಸಿದರು.
ತಾಲೂಕು ಪಂಚಾಯಿತಿಯಲ್ಲಿ ಪಂಚಾಯಿತಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳಿಗಾಗಿ ಏರ್ಪಡಿಸಿದ್ದ ರಾಷ್ಟ್ರಧ್ವಜ ಮಾಹಿತಿ ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶಿಷ್ಟಾಚಾರ ನಿಯಮಗಳನ್ವಯ ರಾಷ್ಟ್ರಧ್ವಜವನ್ನು ರಾಷ್ಟ್ರೀಯ ಹಬ್ಬಗಳ ದಿನವಲ್ಲದೆ ಪ್ರತಿನಿತ್ಯ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಕಚೇರಿಗಳ ಆವರಣದ ಧ್ವಜಸ್ತಂಭದ ಮೇಲೆ ಹಾರಿಸಿ, ಗೌರವ ಸೂಚಿಸುವ ಮೂಲಕ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ರಾಷ್ಟ್ರಧ್ವಜ ಆರೋಹಣ, ಅವರೋಹಣ ವಿಧಿವಿಧಾನಗಳ ಪ್ರಾತ್ಯಕ್ಷಿತೆ ನಡೆಸಿಕೊಟ್ಟ, ಜಿಲ್ಲಾ ಭಾರತ ಸೇವಾದಳ ಸಂಘಟಕ ವಿ.ಮಂಜುನಾಥ ಮಾತನಾಡಿ, ರಾಷ್ಟ್ರಧ್ವಜ ಯಾವುದೇ ದೇಶದ ಪವಿತ್ರತೆಯನ್ನು ಸೂಚಿಸುವ ಸಂಕೇತ. ರಾಷ್ಟ್ರದ ಪ್ರತಿ ಪ್ರಜೆಯೂ ಸಹ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಬೇಕು ಎಂದರು.
ನಿರ್ಮಲ ಭಾರತ ಅಭಿಯಾನದ ತಾಲೂಕು ಸಂಯೋಜಕ ಜಿ.ಶ್ರೀನಿವಾಸ್ ಮಾತನಾಡಿ ಧ್ವಜದ ಬಗ್ಗೆ ಗೌರವ, ಸಮಯಪ್ರಜ್ಞೆ, ಶಿಷ್ಟಾಚಾರ ನೀತಿ ನಿಯಮಗಳನ್ನು ಪಾಲಿಸುವುದರಿಂದ ರಾಷ್ಟ್ರಭಕ್ತಿ, ರಾಷ್ಟ್ರೀಯ ಪ್ರೇಮ ಮೂಡತ್ತದೆ ಎಂದರು.
ತಾ.ಪಂ. ಸಹಾಯಕ ನಿರ್ದೇಶಕ ಎಸ್.ಪಿ. ಚನ್ನಬಸವಣ್ಣ, ಪಂಚಾಯಿತಿ ಸಿಬ್ಬಂದಿ ಜಯರಾಂ, ಸಂಜೀವಪ್ಪ, ಸಾಕ್ಷರತಾ ನೋಡಲ್ ಅಧಿಕಾರಿ ಡಿ.ಆರ್.ರಾಜಪ್ಪ , ಜಿಲ್ಲಾ ಎಂ.ಐ.ಎಸ್. ಸಂಯೋಜಕ ರವಿರಾಜ್ ಇದ್ದರು.