ಅಕ್ರಮ ಮದ್ಯಕೊಳೆ ನಾಶ
ಮಾಲೂರು: ತಾಲೂಕಿನಾದ್ಯಂತ ಅಬಕಾರಿ ಇಲಾಖೆ ವಶ ಪಡಿಸಿಕೊಂಡಿದ್ದ ಅಕ್ರಮ ಮದ್ಯಕೊಳೆಯನ್ನು ಇಲ್ಲಿನ ಪ್ರವಾಸಿ ಮಂದಿರದ ಬಳಿ ಗುರುವಾರ ನಾಶ ಪಡಿಸಿದರು. ಕೋಲಾರ ಅಬಕಾರಿ ಉಪಅಯುಕ್ತ ಮಹದೇವಸ್ವಾಮಿ ಹಾಗೂ ತಹಸೀಲ್ದಾರ್ ನಾಗರಾಜ್ ಸಮ್ಮುಖದಲ್ಲಿ ತಾಲೂಕಿನ ವಿವಿಧ 264 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 485 ಲೀ ಮದ್ಯ,77.3 ಲೀ ಬೀರ್, 2 ಲೀ ಕಳ್ಳಭಟ್ಟಿ ಹಾಗೂ 51 ಕೆ.ಜಿ. ಚೆಕ್ಕೆಯನ್ನು ಬೆಂಕಿ ಹಾಕಿ ನಾಶ ಪಡಿಸಲಾಯಿತು. ಅಬಕಾರಿ ಡಿವೈಎಸ್ಪಿ ಮಹೇಂದ್ರ, ಇನ್ಸೆಪೆಕ್ಟರ್ ರಂಗಪ್ಪ, ಕೆ.ಎಸ್.ಬಿ.ಸಿ.ಎಲ್.ನ ವ್ಯವಸ್ಥಾಪಕ ಶ್ರೀನಿವಾಸ್ ಶೆಟ್ಟಿ, ಎಸ್ಐ ಮಂಜುನಾಥ್, ಚೆನ್ನಬಸಪ್ಪ ಭಾಗವಹಿಸಿದ್ದರು.
ಅಪಘಾತ: ಬೈಕ್ ಸವಾರನಿಗೆ ಗಾಯ
ಗುಡಿಬಂಡೆ: ಆಟೋ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವಾಹನ ಸವಾರನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಲಕ್ಕೇನಹಳ್ಳಿ ಕ್ರಾಸ್ ಬಳಿ ಗುರುವಾರ ನಡೆದಿದೆ. ಮೂಲಗಳ ಪ್ರಕಾರ ದ್ವಿಚಕ್ರ ವಾಹನ ಸವಾರ, ಲಕ್ಕೇನಹಳ್ಳಿ ಗ್ರಾಮದ ರಸ್ತೆಯಿಂದ ಮುಖ್ಯರಸ್ತೆಗೆ ತಿರುವು ತೆಗೆದುಕೊಳ್ಳುವ ವೇಳೆ ಹಂಪಸಂದ್ರ ಕಡೆಯಿಂದ ಗುಡಿಬಂಡೆಗೆ ತೆರಳುತ್ತಿದ್ದ ಆಟೋ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಗರುಡಾಚಾರ್ಲಹಳ್ಳಿ ಗ್ರಾಮದ ಕೃಷ್ಣಮೂರ್ತಿ (50) ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.