ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೌಲ್ಯಾಧಾರಿತ ಶಿಕ್ಷಣದಿಂದ ದೇಶದ ಪ್ರಗತಿ: ಶಾಸಕ ನಾರಾಯಣಸ್ವಾಮಿ

Rashmi Kasaragodu
Updated On : 9 Aug 2013, 12:48 pm

ಕ.ಪ್ರ.ವಾರ್ತೆ ಟಿ ಬಂಗಾರಪೇಟೆ ಟಿ ಆ.8
ಉತ್ತಮವಾಗಿ ಅಂಕಗಳನ್ನು ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರಿಗೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಅಕ್ಕಚಮ್ಮ ಕಲ್ಯಾಣ ಮಂಟಪದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶವನ್ನು ಮುನ್ನೆಡೆಸುವ ಪಾತ್ರದಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ. ಶಿಕ್ಷಕರು ಮಕ್ಕಳಿಗೆ ಮೌಲ್ಯಾಧರಿತ ಶಿಕ್ಷಣವನ್ನು ಕೊಟ್ಟಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದರು.
ಸರ್ಕಾರಿ ಶಾಲೆಗಳು ಇಂದು ಯಾವುದೇ ಖಾಸಗಿ ಶಾಲೆಗಳಿಗಿಂತಲೂ ಕಡಿಮೆ ಇಲ್ಲ. ಎಲ್ಲಾ ಅನುಕೂಲಗಳನ್ನು ಹೊಂದಿ ಖಾಸಗಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಸ್ಪರ್ಧೆ ನೀಡುವಷ್ಟು ಅಭಿವೃದ್ಧಿಯಾಗಿವೆ. ಪೋಷಕರು ದುಬಾರಿ ವೆಚ್ಚ ಮಾಡಿ ಖಾಸಗಿ ಕಾನ್ವೆಂಟ್ಗಳಲ್ಲಿ ಮಕ್ಕಳನ್ನು ಸೇರಿಸದೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕಲ್ಪಿಸಬೇಕು ಎಂದು ಹೇಳಿದರು.
ಮುಂದಿನ ವರ್ಷ ಕ್ಷೇತ್ರದ ಶೈಕ್ಷಣಿಕ ಫಲತಾಂಶವನ್ನು ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ನಿಲ್ಲಿಸುವ ಜವಾಬ್ದಾರಿ ಶಿಕ್ಷಕರು ನಿರ್ವಹಿಸಬೇಕು. ಕೆಲವು ಶಿಕ್ಷಕರು ಸಂಘಟನೆ ಹೆಸರಲ್ಲಿ ಶಾಲೆಗಳಿಗೆ ಹೋಗದೆ ಕಾಲಹರಣ ಮಾಡುತ್ತಿದ್ದಾರೆ. ಅಂತಹ ಶಿಕ್ಷಕರು ತಮ್ಮ ಧೋರಣೆ ಬದಲಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕುಸಿತಗೊಂಡಿದೆ. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಮಕ್ಕಳನ್ನು ಆಕರ್ಷಿಸಲು 2 ಪ್ರೋತ್ಸಾಹಧನ ಸೇರಿದಂತೆ ಇತ್ತೀಚಿಗೆ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಹಾಗೂ ಮೌಲ್ಯಗಳಿಲ್ಲ ಶಿಕ್ಷಣ ಬೋಧಿಸುವುದರಿಂದ ಸರ್ಕಾರದ ಯೋಜನೆಗಳು ಫಲಕಾರಿಯಾಗುತ್ತಿಲ್ಲ. ಈ ನಿಲುವು ಬದಲಾದರೆ ಮಾತ್ರ ಪೋಷಕರು ತಮ್ಮ ನಿಲುವು ಬದಲಾಯಿಸಲು ಸಾಧ್ಯ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬಿಪಿಒ ಕೆ.ಜಯರಾಜ್, ನೌಕರ ಸಂಘದ ಅಧ್ಯಕ್ಷ ಸಿ.ಚಂದ್ರಶೇಖರಗೌಡ ಮಾತನಾಡಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ, ಜಿಪಂ ಸದಸ್ಯ ಆ.ಮು. ಲಕ್ಷ್ಮೀನಾರಾಯಣ, ಕಸಾಪ ಅಧ್ಯಕ್ಷ ಅಶ್ವತ್ಥ್, ನವಚೇತನ ಶಾಲೆ ಕಾರ್ಯದರ್ಶಿ ರಾಮಕೃಷ್ಣ, ಮುಖಂಡ ಮಂಜುನಾಥಗೌಡ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement