ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತರ ನಾಡಿ ಅರಿಯಲು ವಿವಿಗಳು ವಿಫಲ

Rashmi Kasaragodu
Updated On : 9 Aug 2013, 12:41 pm

ಕ.ಪ್ರ.ವಾರ್ತೆ   ಕೋಲಾರ   ಆ.8
ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯಗಳು ಗ್ರಾಮೀಣ ಭಾಗದ ರೈತರ ನಾಡಿ ಮಿಡಿತವನ್ನು ಅರಿತು ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ವಿಫಲವಾಗಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಟೀಕಿಸಿದರು.
ನಗರದ ಹೊರವಲಯದ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಮಹಾವಿದ್ಯಾಲಯದ ನೂತನ ಕಟ್ಟಡಗಳ ಉದ್ಘಾಟನೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರಿಗೆ ವೈಜ್ಞಾನಿಕವಾದ ಸಂಶೋಧನೆಗಳಿಂದ ಆಗುವ ಪ್ರಯೋಜನಗಳನ್ನು ತಿಳಿಸಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಿಲ್ಲವೆಂದು ವಿಷಾದಿಸಿದರು. ಕೃಷಿಯನ್ನೇ ನಂಬಿರುವ ರೈತಾಪಿ ವರ್ಗ ವಿವಿಗಳ ಬಗ್ಗೆ ಸಂದೇಹದಿಂದ ನೋಡುವ ಮೊದಲೇ ವಿವಿಗಳು ವೈಜ್ಞಾನಿಕ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವುದಲ್ಲದೆ ನಂಬಿಕೆ ಮೂಡಿಸಿ, ಹೊಸ ತಳಿಗಳಿಂದ ಲಾಭ ಪಡೆಯುವಂತೆ ಮಾಡಬೇಕೆಂದು ತಿಳಿಸಿದರು.
ರಾಜ್ಯಕ್ಕೆ ಪ್ರಸ್ತುತ 40 ಲಕ್ಷ ಟನ್ ಬಿತ್ತನೆ ಬೀಜಗಳ ಬೇಡಿಕೆಯಿದೆ.ಆದರೆ ಬೀಜ ನಿಗಮದಲ್ಲಿ ಕೇವಲ 5 ಲಕ್ಷ ಟಟ್ ಬಿತ್ತನೆ ಬೀಜಗಳನ್ನು ಮಾತ್ರ ಉತ್ಪಾದನೆ ಮಾಡಲಾಗುತ್ತಿದ್ದು, ಉಳಿದ 35 ಲಕ್ಷ ಟನ್ ಬೀಜ ಬೇರೆ ರಾಜ್ಯಗಳಿಂದ ಅಮದು ಮಾಡಿಕೊಳ್ಳುತ್ತಿರುವುದರಿಂದ ಸಮಸ್ಯೆ ಕೊರತೆ ನಿವಾರಣೆ ಮಾಡಲು ವಿವಿಗಳು ಗಮನ ನೀಡಬೇಕೆಂದು ಸಲಹೆ ನೀಡಿದರು.
ಇಚ್ಛಾಶಕ್ತಿ ಕೊರತೆ:  ಅಧ್ಯಕ್ಷತೆ ವಹಿಸಿದ್ದ ಶಾಸಕ ವರ್ತೂರು ಪ್ರಕಾಶ್ ಮಾತನಾಡಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರಲ್ಲಿ ಕೋಲಾರ ಜಿಲ್ಲೆ ನಂಬರ್ 1 ಸ್ಥಾನದಲ್ಲಿದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ತೋಟಗಾರಿಕೆ ಕಾಲೇಜಿಗೆ ನಾವು ತೃಪ್ತಿ ಪಡಬೇಕಾಗಿದೆ, ಜನಪ್ರತಿನಿಧಿಗಳ ಶಕ್ತಿ ಸಾಬೀತು ಮಾಡಿದ್ದರೆ ವಿವಿ ಸ್ಥಾಪನೆ ಮಾಡಿಸಬಹುದಾಗಿತ್ತೆಂದು ಅಭಿಪ್ರಾಯಪಟ್ಟರು.
ತೋಟಗಾರಿಕೆ ಕಾಲೇಜಿನಿಂದ ಜಿಲ್ಲೆಯ ರೈತನಿಗೆ ನಯಾ ಪೈಸೆ ಉಪಯೋಗವಾಗುವುದಿಲ್ಲ ಎಂದ ಅವರು, ರೈತರ ಸಮೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಪ್ರವಾಹ ರೀತಿಯಲ್ಲಿ ಹಣ ಹರಿದು ಬರುತ್ತಿದೆ. ಇದು ಕೆಲವರ ಜೇಬಿಗೆ ಸೇರುತ್ತಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಬಿಕ್ಕಟ್ಟು ನಿವಾರಣೆಯಾಗದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎತ್ತಿನಹೊಳೆಯನ್ನು ಕಾಂಗ್ರೆಸ್ ಸರ್ಕಾರ 5 ವರ್ಷದಲ್ಲಿ ಪೂರ್ಣಗೊಳಿಸಬೇಕು, ಇದಕ್ಕಾಗಿ ವಿಶೇಷ ಟೆಂಡರ್ ಕರೆದು ಐದು ಪ್ಯಾಕೇಜ್ಗಳಲ್ಲಿ ಕಾಮಗಾರಿ ನಡೆಸಿದರೆ ಮಾತ್ರ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುತ್ತದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಶಂಕರಲಿಂಗೇಗೌಡ ಮಾತನಾಡಿ ಶ್ರೀನಿವಾಸಪುರದ ಹೊಗಳಗೆರೆಯಲ್ಲಿ ಮಾವಿನ ಸಂಶೋಧನಾ ಕೇಂದ್ರದಲ್ಲಿ ತಳಿಗಳ ಸಂಶೋಧನೆಗಾಗಿ ಸರ್ಕಾರ 5 ಕೋಟಿ ರು. ಗಳನ್ನು ಮೀಸಲಿಟ್ಟಿದ್ದು, ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ರಾಜ್ಯ ಕಾಫಿ, ತೆಂಗು, ಮಾವು ಬೆಳೆಯುವುದರಲ್ಲಿ 1 ನೇ ಸ್ಥಾನದಲ್ಲಿದ್ದರೂ ಇಂದು ಈ ಬೆಳೆಗಳಿಂದ ಸಾಕಷ್ಟು ಸಮಸ್ಯೆಗಳನ್ನು ರೈತರನ್ನು ಅನುಭವಿಸುತ್ತಿರುವುದರಿಂದ ವಿವಿ.ಗಳು ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಆವಿಷ್ಕಾರಗಳನ್ನು ಮಾಡಬೇಕಾಗಿದೆ ಎಂದರು.
ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮಹಾನಿರ್ದೇಶಕ ಡಾ.ಎಸ್. ಅಯ್ಯಪ್ಪನ್, ಭಾರತೀಯ ಕೃಷಿ ಅನುಸಂಧಾನ ಪರಿಷತ್ ವಲಯ ಯೋಜನಾ ನಿರ್ದೇಶಕ ಡಾ.ಎಸ್. ಪ್ರಭುಕುಮಾರ್, ತೋಟಗಾರಿಕೆ ವಿವಿ ಸದಸ್ಯ ಡಾ.ಟಿ.ವಿ. ಮುನಿಯಪ್ಪ, ಎಚ್.ಕೆ. ಶ್ರೀಕಂಠ ತೋಟಗಾರಿಕೆ ಇಲಾಖೆ ಡೀನ್ ್ನಾಚೇಗೌಡ ಇದ್ದರು. ತೋಟಗಾರಿಕೆ ವಿಜ್ಞಾನ ವಿವಿ ಕುಲಪತಿ ಡಾ.ಎಸ್.ಬಿ. ದಂಡಿನ್ ಸ್ವಾಗತಿಸಿ, ಡಾ. ಹಾಲೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement