ರೈತರ ಸರ್ಟಿಫಿಕೇಟ್ನಿಂದಷ್ಟೇ ವಿವಿ ಘನತೆ ವೃದ್ಧಿ
ಕ.ಪ್ರ.ವಾರ್ತೆ ಕೋಲಾರ ಆ.8
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ತಮ್ಮಷ್ಟಕ್ಕೇ ತಾವೇ ಸರ್ಟಿಫಿಕೇಟ್ ಪಡೆಯುವುದರಲ್ಲಿ ಅರ್ಥವಿಲ್ಲ, ವಿವಿಗಳಿಂದ ಪ್ರಯೋಜನ ಪಡೆಯುವ ರೈತರು ಸರ್ಟಿಫಿಕೇಟ್ ನೀಡಿದಾಗ ಮಾತ್ರ ವಿವಿಗಳ ಘನತೆ ಹೆಚ್ಚುತ್ತದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ನಗರದ ಹೊರವಲಯದ ಟಮಕದಲ್ಲಿ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ವಿದ್ಯಾರ್ಥಿ ನಿಲಯಗಳ ಉದ್ಘಾಟನೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ವಿವಿಗಳು, ಸಂಶೋಧನಾ ಕೇಂದ್ರಗಳು ನಿಮಗೆ ನೀವೇ ಸರ್ಟಿಫಿಕೇಟ್ ಕೊಟ್ಟುಕೊಳ್ಳುವುದಲ್ಲ, ನಿಜವಾದ ಸರ್ಟಿಫಿಕೇಟ್ ನೀಡುವುದು ರೈತ. ಆಗ ನಾವೂ ನಿಮ್ಮ ಸಾಧನೆಗೆ ಶಹಬ್ಬಾಸ್ ಅಂತೀವಿ ಎಂದರು.
ವಿವಿಗಳಲ್ಲಿ ಕೆಲಸ ನಿರ್ವಹಿಸುವವರು ನಾಲ್ಕು ಗೋಡೆಗಳಿಂದಾಚೆಗೆ ಬಂದು ರೈತರಿಗೆ ಬೇಕಾದ ವಿಚಾರಗಳ ಕುರಿತು ಸಂವಾದ, ಚರ್ಚೆಗಳನ್ನು ನಡೆಸಿ, ರೈತರ ಸಮ್ಮುಖದಲ್ಲೇ ಪ್ರಯೋಗಗಳನ್ನು ಮಾಡಿ, ರೈತರಲ್ಲಿನ ಸಂಶಯಗಳಿಗೆ ಪರಿಹಾರ ನೀಡಿದಲ್ಲಿ ವಿವಿಗಳ ಮೇಲೆ ರೈತರಿಗೆ ವಿಶ್ವಾಸ ಉಂಟಾಗುತ್ತದೆ ಎಂದು ತಿಳಿಸಿದರು.
ನಮ್ಮ ವಿವಿಯಿಂದ ಅದು ಮಾಡಿದ್ದೇವೆ, ಇದು ಮಾಡಿದ್ದೇವೆಂದು ಬಡಾಯಿ ಕೊಚ್ಚಿಕೊಳ್ಳುವುದರಿಂದ ಅನುಮಾನ ಉಂಟಾಗುತ್ತದೆ, ಇದಕ್ಕೆ ಬದಲು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಶೋಧನೆ, ಪ್ರಾತ್ಯಕ್ಷಿಕೆಗಳನ್ನು ನಡೆಸಿದಲ್ಲಿ ರೈತರಿಗೆ ತಾವೇನು ಮಾಡಬೇಕೆಂಬುದು ತಿಳಿಯುತ್ತದೆ, ನಾಲ್ಕು ಗೋಡೆಗಳ ಮಧ್ಯೆ ನಡೆಸುವ ಸಂಶೋಧನೆಗಳಿಂದ ರೈತರಿಗೆ ಆಗುವ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ವಿವಿಗಳಿಂದ ಈ ಹಿಂದೆ ಸಾಕಷ್ಟು ಪ್ರಯೋಜನವಾಗಿವೆ, ಅದೇ ರೀತಿಯ ಪ್ರಗತಿ ಸಾಗಬೇಕು, ರೈತರು ಸಹ ಈಗ ಬುದ್ಧಿವಂತರಿದ್ದಾರೆ, ಶಿಕ್ಷಣದಿಂದಾಗಿ ಅರಿವು ಉಂಟಾಗಿದೆ. ಇಂತಹ ಸಂದರ್ಭದಲ್ಲಿ ವಿವಿಗಳು ನಾವು ಹೇಳಿದ್ದೆ ಸರಿ ಎಂದು ಪ್ರತಿಪಾದಿಸುವುದರಿಂದ ಸರ್ಕಾರದ ಉದ್ದೇಶ ಈಡೇರುವುದಿಲ್ಲ, ರೈತರಿಗಾಗಿ ವಿವಿಗಳು ಪರಿಣಾಮಕಾರಿ ಕಾರ್ಯಸೂಚಿಯನ್ನು ಹೊಂದುವುದು ಅಗತ್ಯವೆಂದರು.
ನಮ್ಮ ಕೈಯಲ್ಲಿ ಏಕೆ ಆಗಲ್ಲ: ಯಾವುದೇ ಬೆಳೆ ತೆಗೆದುಕೊಂಡರೂ ಏಷ್ಯಾದ ಇತರೆ ದೇಶಗಳಲ್ಲಿ 1 ಎಕರೆಗೆ ಎಷ್ಟು ಉತ್ಪಾದನೆ ಆಗುತ್ತಿದೆಯೋ ಅದರ ಅರ್ಧದಷ್ಟು ಮಾತ್ರ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿದೆ. 1 ಎಕರೆಯಲ್ಲಿ ಬೆಳೆಯುವ ಬೆಳೆಯನ್ನು ದ್ವಿಗುಣಗೊಳಿಸುವ ಅವಕಾಶವಿದೆ ಎಂಬುದನ್ನು ನಮ್ಮ ಅಕ್ಕಪಕ್ಕದ ದೇಶಗಳು ಮಾಡಿ ತೋರಿಸಿದೆ. ಆದರೆ ನಮ್ಮ ಕೈಯಲ್ಲಿ ಏಕೆ ಈ ಪ್ರಯತ್ನವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಹಸಿರು ಕ್ರಾಂತಿ ನೀರಾವರಿ ಪ್ರದೇಶಕ್ಕೆ ಮಾತ್ರ ಅನುಕೂಲವಾಯಿತು. ಆದರೆ ಮಳೆಯಿಲ್ಲದ ಜಿಲ್ಲೆಗಳಿಗೆ ಹಸಿರುವ ಕ್ರಾಂತಿ ಆಗುವುದು ಯಾವಾಗ, ಇದಕ್ಕೆ ವಿವಿಗಳಿಂದ ಆಗಿರುವ ಸಂಶೋಧನೆಯೇನು ಎಂದರು.
ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದಕತೆ ಹೆಚ್ಚಿಸಲು ನಮ್ಮ ಸಂಶೋಧನಾ ಸಂಸ್ಥೆಗಳು ಮತ್ತು ವಿವಿಗಳು ರೈತರಿಗೆ ದಾರಿತೋರಿಸಬೇಕು. ಈ ನಿಟ್ಟಿನಲ್ಲಿ ವಿವಿಗಳು ರೈತರ ಮನೆ ಬಾಗಿಲಿಗೆ ಹೋಗಿ ಅವರ ಕಷ್ಟ ಅರ್ಥಮಾಡಿಕೊಂಡು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಸಲಹೆ ನೀಡಿದರು.
ಶಾಸಕ ವರ್ತೂರ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮಹಾನಿರ್ದೇಶಕ ಡಾ.ಎಸ್. ಅಯ್ಯಪ್ಪನ್, ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಶಂಕರಲಿಂಗೇಗೌಡ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ವಲಯ ಯೋಜನಾ ನಿರ್ದೇಶಕ ಡಾ.ಎಸ್. ಪ್ರಭುಕುಮಾರ್, ಬಾಗಲಕೋಟೆ ತೋಟಗಾರಿಕೆ ವಿ.ವಿ ಸದಸ್ಯ ಡಾ.ಟಿ.ವಿ. ಮುನಿಯಪ್ಪ, ಎಚ್.ಕೆ. ಶ್ರೀಕಂಠ, ತೋಟಗಾರಿಕೆ ಇಲಾಖೆಯ ಡೀನ್ ನಾಚೇಗೌಡ ಇದ್ದರು.
ತೋಟಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ.ಎಸ್.ಬಿ. ದಂಡಿನ್ ಸ್ವಾಗತಿಸಿದರು. ಡಾ. ಹಾಲೇಶ್ ನಿರೂಪಿಸಿದರು.