'ಸಮಯ ವ್ಯರ್ಥ ಮಾಡದೆ ಭವಿಷ್ಯದ ಕಡೆ ಚಿಂತಿಸಿ'
ಕೋಲಾರ: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ತಮ್ಮ ಮುಂದಿನ ಉಜ್ವಲ ಭವಿಷ್ಯದತ್ತ ಗಮನ ನೀಡಬೇಕೆಂದು ಡಿವೈಎಸ್ಪಿ ಶ್ರೀಹರಿ ಬರಗೂರು ಕಿವಿಮಾತು ಹೇಳಿದರು.
ಅವರು ಕೋಲಾರದ ಕೆಇಬಿ ಸಮುದಾಯ ಭವನದಲ್ಲಿ ಗುರುವಾರ ಕನ್ನಡಪ್ರಭ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಣ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಕೀಳರಿಮೆ ಮತ್ತು ಅಂಜಿಕೆ ಇರಬಾರದು, ಗುರಿ ಸಾಧನೆಗಾಗಿ ಪರಿಣಿತರಿಂದ ಮಾರ್ಗದರ್ಶನ ಪಡೆಯಬೇಕು, ಕೇವಲ ಇಂಜಿನಿಯರ್, ಡಾಕ್ಟರ್ ಆಗುವುದರಿಂದ ಮಾತ್ರ ಉತ್ತಮ ಜೀವನ ಎಂಬುದು ಸರಿಯಲ್ಲ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಕಷ್ಟು ಅವಕಾಶಗಳು ಇರುವುದರಿಂದ ವಿದ್ಯಾರ್ಥಿಗಳು ಮೊದಲು ಗುಣಮಟ್ಟದ ಶಿಕ್ಷಣ ನಂತರ ವೃತ್ತಿ ಜೀವನದ ಬಗ್ಗೆ ವಿಶೇಷ ಗಮನ ನೀಡಬೇಕು, ಇದಕ್ಕೆ ಮಾರ್ಗದರ್ಶನ ಪಡೆಯುವುದಕ್ಕೆ ಅವಕಾಶಗಳಿವೆ ಎಂದರು.
ಕಡಿಮೆ ಅಂಕ ಪಡೆಯುವುದರಿಂದ ಭವಿಷ್ಯವಿಲ್ಲವೆಂಬ ಆತಂಕ ಬೇಡ, ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದ ಮುಂದಿನ ಹಜ್ಜೆ ಇಟ್ಟಾಗ ಯಶಸ್ಸು ತಾನಾಗಿಯೇ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ. ಗೋಪಿನಾಥ್ ಮಾತನಾಡಿದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್, ನಮ್ಮ ಬಳಿಗೆ ಉದ್ಯೋಗ ಆರಿಸಿ ಬರುತ್ತಿರುವುದರಿಂದ ಅದಕ್ಕೆ ಬೇಕಾದ ಕೌಶಲ್ಯವನ್ನು ಪಡೆಯುವುದಕ್ಕೆ ವಿದ್ಯಾರ್ಥಿಗಳು ಗಮನ ನೀಡಬೇಕೆಂದರು. ಜಗತ್ತಿನಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತಿರುವುದರಿಂದ ಬೇಡಿಕೆಗೆ ತಕ್ಕ ಅಂಶಗಳನ್ನು ಒದಗಿಸಲು ಸಿದ್ಧರಾಗಿ ಎಂದರು.
ಯುವರಾಜ್ ಅವರು ಮಾತನಾಡಿ, ವೃತ್ತಿ ಜೀವನದ ಬಗ್ಗೆ ಮಾರ್ಗದರ್ಶನ ನೀಡಿದರಲ್ಲದೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅನೇಕ ಪ್ರಶ್ನೆಗಳಿಗೆ ಮತ್ತು ಸಂದೇಹಗಳಿಗೆ ಉತ್ತರ ನೀಡಿದರು. ಪ್ರಸಾರಾಂಗ ಪ್ರತಿನಿಧಿ ಸಂದೀಪ್, ವಿತರಕ ಮಂಜುನಾಥ್ ಇದ್ದರು.