'ಸುಂದರಪಾಳ್ಯ-ಎನ್.ಜಿ. ಹುಲ್ಕೂರು ರಸ್ತೆ ದುರಸ್ತಿ ಮಾಡಿ'
ಕೆಜಿಎಫ್: ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಗ್ರಾಹಕರ ಹಕ್ಕುಗಳ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಎಲ್. ಬಾಬು ನೇತೃತ್ವದಲ್ಲಿ ಬೇತಮಂಗಲ ಗ್ರಾಮದ ಸುಂದರಪಾಳ್ಯ ಗ್ರಾಮದಿಂದ ಎನ್.ಜಿ. ಹುಲ್ಕೂರು ಗ್ರಾಮದ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ರಸ್ತೆತಡೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಎಲ್. ಬಾಬು ಸುಂದರಪಾಳ್ಯದಿಂದ ಎನ್.ಜಿ. ಹುಲ್ಕೂರು ಗ್ರಾಮದ ರಸ್ತೆಗಳು ತೀರಾ ಹದ್ದೆಗೆಟ್ಟು ಹಳ್ಳಕೊಳ್ಳಗಳಿಂದ ಕೂಡಿರುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೀರಾ ತೊಂದರೆಯಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಮತ್ತು ವೃದ್ಧರಿಗೆ ಪ್ರತಿದಿನ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು.
ಅಲ್ಲದೆ ಸುಮಾರು ವರ್ಷಗಳಿಂದ ದುರಸ್ತಿಗೊಂಡಿರುವ ರಸ್ತೆಯಲ್ಲಿ ಹಲವಾರು ಅಪಘಾತಗಳು ನಡೆಯುತ್ತಿದ್ದು ಆಟೋ ಚಾಲಕರು ಪರದಾಡುವಂತಾಗಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೆ ಕೈಕಟ್ಟಿ ಕುಳುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಲೋಕೋಪಯೋಗಿ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗಳ ದುರಸ್ತಿ ಬಗ್ಗೆ ಕ್ರಮಕೈಗೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಇದೇ ವೇಳೆ ನೂರಾರು ಆಟೋ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮಗಾಗುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದು ರಸ್ತೆತಡೆ ನಡೆಸಿ ಪ್ರತಿಭಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಅಧ್ಯಕ್ಷ ಮಗೇಂದ್ರನ್, ಯುವ ಕಾರ್ಯದರ್ಶಿ ಗೋವಿಂದರಾಜ್, ಉಪಾಧ್ಯಕ್ಷ ಗಣೇಶ್, ಅಧ್ಯಕ್ಷ ತಿಪ್ಪಣ್ಣ, ಅಶೋಕ್, ವೆಂಕಟರಾಮ, ಸುಂದರಪಾಳ್ಯ ಗ್ರಾ.ಪಂ. ವೆಂಕಟರಾಮ್, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಅಪ್ಸರಪಾಷಾ, ಮಂಜುನಾಥ್, ಮೋಹನ್ ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಹಾಜರಿದ್ದರು.