ಜಿಲ್ಲಾದ್ಯಂತ ಸಂಭ್ರಮದ ರಂಜಾನ್
ಕ.ಪ್ರ,ವಾರ್ತೆ ಕೋಲಾರ ಆ.9
ಭಾವೈಕ್ಯತೆಯ ಸಂಕೇತ ಹಾಗೂ ಮುಸ್ಲಿಂ ಸಮುದಾಯದ ಪವಿತ್ರ ಉಪವಾಸ ಹಬ್ಬವಾದ ರಂಜಾನ್ ಹಬ್ಬವನ್ನು ನಗರದಲ್ಲಿ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಾವಿರರು ಮುಸ್ಲಿಂರು ಹೊಸ ಉಡುಪು ಧರಿಸಿ ನಗರದ ಈದ್ಗಾ ಮೈದಾನದಲ್ಲಿ ಜಮಾಯಿಸಿ ಸಾಮೂಹಿಕ ಪ್ರಾರ್ಥನೆ ನಡೆಸಿದರು. ನೆರೆದಿದ್ದ ಮುಸ್ಲಿಮ್ ಬಂಧುಗಳನ್ನು ಉದ್ದೇಶಿಸಿ ಇಸ್ಲಾಂ ಧರ್ಮಗುರು ಮೌಲ್ವಿ ಶಹಬುದ್ದೀನ್ ಅಸ್ಮತಿ ಅವರು ರಂಜಾನ್ ಹಬ್ಬದ ವಿಶೇಷತೆ ಬಗ್ಗೆ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ವರ್ತೂರ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್, ಡಿ.ಎಸ್. ವೀರಯ್ಯ, ಮಾಜಿ ಸಚಿವ ನಿಸಾರ್ ಅಹಮ್ಮದ್, ಅಂಜುಮನ್ ಇಸ್ಲಾಮಿಯಾ ಸಂಸ್ಥೆಯ ಅಧ್ಯಕ್ಷ ಜಮೀಲ್ ಅಹಮ್ಮದ್, ಕಾರ್ಯದರ್ಶಿ ಸೈಫುಲ್ಲಾ, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಸಾಬೀರ್ ಪಾಷ, ಕೂಡಾ ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೂಂ, ಕಾಂಗ್ರೆಸ್ ಮುಖಂಡರಾದ ಕುಮಾರ್, ಹಾರೋಹಳ್ಳಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಬೆಗ್ಲಿ ಸಿರಾಜ್ ಮುಂತಾದವರು ಹಾಜರಿದ್ದು ರಂಜಾನ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್, ನಗರಸಭೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಕೋಲಾರದ ಕೋಟೆ, ಕಠಾರಿಪಾಳ್ಯ, ಗೌರಿಪೇಟೆ ಸೇರಿದಂತೆ ಇನ್ನಿತರ ಕಡೆ ಹಿಂದೂಗಳು ಮುಸ್ಲಿಮರಿಗೆ ರಂಜಾನ್ ಶುಭಾಶಯ ತಿಳಿಸಿದರಲ್ಲದೆ ತಂಪು ಪಾನಿಯ ನೀಡಿ ಸೌಹಾರ್ದತೆ ಪ್ರದರ್ಶಿಸಿದರು.