ದುಡಿಮೆ ಅಲ್ಪಭಾಗ ಬಡವರಿಗೆ ಮೀಸಲಿಡಿ
ಕ.ಪ್ರ.ವಾರ್ತೆ, ಬಾಗೇಪಲ್ಲಿ, ಆ.9
ತಮ್ಮ ಸಂಪಾದನೆಯಲ್ಲಿ ಸ್ವಲ್ಪ ಭಾಗ ಬಡ ಜನರ ಸಹಾಯಕ್ಕಾಗಿ ಮೀಸಲಿಟ್ಟು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕರೆ ನೀಡಿದರು.
ರಂಜಾನ್ ಹಬ್ಬದ ಪ್ರಯಕ್ತ ಪಟ್ಟಣದ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಸ್ಲಿಂ ಜನಾಂಗವದರಲ್ಲಿ ಕೂಡ ಶ್ರೀಮಂತರಿದ್ದಾರೆ. ಕುರಾನ್‌ನಲ್ಲಿ ಹೇಳಿರುವಂತೆ ತಮ್ಮ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಬಡ ಜನರಿಗೆ ದಾನ -ಧರ್ಮ ಮಾಡುವ ಮೂಲಕ ಬಡವರಿಗೆ ಅನಕೂಲ ಮಾಡಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಲಹೆ ನೀಡಿದರು.
ಹಾಗೆಯೇ ಮುಸ್ಲಿಂ ಜನಾಂಗದಲ್ಲಿ ಬಡ ಜನರು ಹೆಚ್ಚಾಗಿದ್ದಾರೆ. ನಮ್ಮ ಚಾರಿಟಬಲ್ ಟ್ರಸ್ಟ್‌ನಿಂದ ಸಾಮೂಹಿಕ ವಿವಾಹಗಳು, ವೈದ್ಯಕೀಯ, ಶಿಕ್ಷಣ, ಆರ್ಥಿಕ ನೆರವು ನೀಡುವ ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪಟ್ಟಣದಿಂದ ನೆರೆಯ ಆಂಧ್ರಪ್ರದೇಶಕ್ಕೆ ಸಂಪರ್ಕ ಕೊಂಡಿಯಾಗಿರುವ ಬಾಗೇಪಲ್ಲಿ- ಕೊಡಿಕೊಂಡ ರಸ್ತೆ ತೀರಾ ಹದಗಟ್ಟಿದೆ. ಈ ರಸ್ತೆ ಡಾಂಬರೀಕರಣ ಮಾಡಿಸುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಈದ್ಗಾ ಮೈದಾನದಲ್ಲಿ ನೂತನವಾಗಿ ಕೊರೆಸಿರುವ ಕೊಳವೆಬಾವಿಗೆ ಪಂಪು ಮೋಟಾರ್ ನೀಡಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮೊದಲು ಮುಸ್ಲಿಂ ಬಾಂಧವರು ಪಟ್ಟಣದ ಜಾಮೀಯಾ, ಫಾರೂಕ್, ಸೇರಿದಂತೆ 13 ಮಸೀದಿಗಳಿಂದ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಜಿ.ಪಂ. ಮಾಜಿ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ, ಮಾಜಿ ಉಪಾಧ್ಯಕ್ಷ ಚೆಂಡೂರ್ ವೆಂಕಟೇಶ್, ಪುರಸಭೆ ಸದಸ್ಯರಾದ ಆ.ನ. ಮೂರ್ತಿ, ಇನಾತುಲ್ಲಾ, ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ನರೇಂದ್ರ, ಮಾಜಿ ಪುರಸಭೆ ಸದಸ್ಯ ಎ.ಅಬ್ದುಲ್ ಲತೀಪ್ ಖಾನ್ ಹಾಜರಿದ್ದರು.