ವೈದ್ಯರ ಮೇಲೆ ಹಲ್ಲೆ: ಐವರ ಬಂಧನ
ಕೋಲಾರ: ನೀರಿನ ತೊಟ್ಟಿಯಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಗುವಿಗೆ ಸಕಾಲಿಕ ವೈದ್ಯರು ಚಿಕಿತ್ಸೆ ನೀಡದ ಕಾರಣ ಮಗು ಸತ್ತಿದೆ ಎಂದು ಆರೋಪಿಸಿ ಮಗುವಿನ ಕಡೆಯವರು ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆ ಪೀಠೋಪಕರಣ, ಕಂಪ್ಯೂಟರ್ ಇನ್ನಿತರ ವಸ್ತುಗಳನ್ನು ದ್ವಂಸ ಮಾಡಿರುವ ಘಟನೆ ನಗರದ ಟಮಕದಲ್ಲಿನ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.
ತಾಲೂಕಿನ ಉಪ್ಪುಕುಂಟೆ ಗ್ರಾಮದ ಮನೆಯ ಮುಂದೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಪವನ್ ಎಂಬ ಮಗು ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಗಾಯಗೊಂಡಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದಾಗ ಮಗುವಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದಾಗ ಕುಪಿತರಾದ ಮಗುವಿನ ಪೋಷಕರು ವೈದ್ಯರು ಬೇಕಾಗಿಯೇ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ಮಾಡಿದರು ಎಂದು ಆರೋಪಿಸಿ ಡಾ.ಶ್ರೀಕಾಂತ್ ಸೇರಿದಂತೆ ಇಬ್ಬರು ವೈದ್ಯರ ಮೇಲೆ ಹಲ್ಲೆ ನಡೆಸಿ, ಇಸಿಜಿ ಕಂಪ್ಯೂಟರ್ ವ್ಯವಸ್ಥೆ ದ್ವಂಸಗೊಳಿಸಿ, ಗಾಜುಗಳನ್ನು ಒಡೆದು ಹಾಕಿ ದಾಂದಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಮಗನ ಸಾವಿನಿಂದ ವಿಚಲಿತರಾದ ತಂದೆ ಮುನೇಗೌಡ ಮತ್ತು ಗ್ರಾಮಸ್ಥರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದು ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.