ಸುದ್ದಿ ಸಂಕ್ಷೇಪ
ಲೆಕ್ಕ ಒಪ್ಪಿಸಿದ ಜಿಲ್ಲಾ ಕಸಾಪ
ಕೋಲಾರ: ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಕೊಠಡಿಯಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ 2012 -13ನೇ ಸಾಲಿನ ಖರ್ಚು, ವೆಚ್ಚಗಳ ಲೆಕ್ಕಪತ್ರಗಳನ್ನು ಒಪ್ಪಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ.ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಏಪ್ರಿಲ್‌ನಿಂದ ಮಾರ್ಚ್ 2012 ರವರೆಗಿನ ಲೆಕ್ಕ ಪತ್ರಗಳನ್ನು, ಪರಿಷತ್ತಿನ ಅನುದಾನ ಹಾಗೂ ಸಾರ್ವಜನಿಕರ ವಂತಿಕೆಯ ವಿವರಗಳನ್ನು ಮಂಡಿಸಲಾಯಿತು. ಜಿಲ್ಲಾ ಕ.ಸಾ.ಪ.ಗೆ ಬಂದ ಒಟ್ಟು ಅನುದಾನ 20,82,958. ವಾರ್ಷಿಕ ಕಾರ್ಯಕ್ರಮಗಳಿಗೆ ಮತ್ತು ಸಮ್ಮೇಳನಗಳಿಗೆ ಆದ ಖರ್ಚು 16,83,250 ಹಾಗೂ ಉಳಿದ ಹಣ 3.99,708 ಬ್ಯಾಂಕಿನ ಖಾತೆಯಲ್ಲಿದೆ ಎಂದು ಜೆ.ಜಿ.ನಾಗರಾಜ್ ತಿಳಿಸಿದ್ದಾರೆ. ಉಳಿಕೆ ಹಣ ವಾರ್ಷಿಕ ಕಾರ್ಯಕ್ರಮ ಹಾಗೂ ಕೆಜಿಎಫ್‌ನಲ್ಲಿ ನಡೆಯುವ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಬಳಸಿಕೊಳ್ಳಲಾಗುವುದು. ಇದೇ ಮೊದಲ ಬಾರಿ ಪರಿಷತ್ತಿನ ಲೆಕ್ಕವನ್ನು ಸಾರ್ವಜನಿಕರಿಗೆ, ಪರಿಷತ್ತಿನ ಸದಸ್ಯರಿಗೆ ನೀಡಲು ತೀರ್ಮಾನಿಸಿದ್ದು, ಲೆಕ್ಕಪತ್ರಗಳ ಬಗ್ಗೆ ಮಾಹಿತಿ ಪಡೆಯುವ ಆಸಕ್ತರು ಕ.ಸಾ.ಪ. ಕಚೇರಿಯಲ್ಲಿ ವಿಚಾರಿಸಬಹುದೆಂದು ತಿಳಿಸಿದ್ದಾರೆ. ಇದೇ ಸಂದರ್ಭ ಜಿಲ್ಲಾ ಕ.ಸಾ.ಪ. ಸಂಚಾಲಕರನ್ನಾಗಿ ಮುಳಬಾಗಿಲಿನ ಮಲ್ಲನಾಯಕನಹಳ್ಳಿ ಎಸ್.ಸುರೇಶ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಮೀಸಲು ಕುರಿತು ವಿಚಾರ ಸಂಕಿರಣ
ಕೋಲಾರ: ಛತ್ರಪತಿ ಶಾಹು ಮಹಾರಾಜ್‌ರ 139ನೇ ಜನ್ಮದಿನ ಅಂಗವಾಗಿ 'ಪ್ರಸ್ತುತ ಮೀಸಲಾತಿ- ಒಂದು ಚರ್ಚೆ' ಎಂಬ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೋಲಾರ ಶಾಖೆ ವತಿಯಿಂದ ಆ.10ರ ಬೆಳಗ್ಗೆ 10 ಗಂಟೆಗೆ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಡಿವೈಎಸ್ಪಿ ಶ್ರೀಹರಿ ಬರಗೂರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೋಲಾರ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಡಾ.ಡಾಮನಿಕ್ ಅಧ್ಯಕ್ಷತೆ ವಹಿಸುವರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮೋಹನ್ ರಾವ್ ಸೇರಿದಂತೆ ಇತರ ಗಣ್ಯರು ಭಾಗವಹಿಸುವರು ಎಂದು ಮೇಡಿಹಾಳ ಬೈರಪ್ಪ ತಿಳಿಸಿದ್ದಾರೆ.
ಇಂದು ಕಾರ್ಯಾಗಾರ
ಕೋಲಾರ: ನಗರದ ಕೆಇಬಿ ಸಮುದಾಯ ಭವನದಲ್ಲಿ ಕೈಗಾರಿಕೆ ಇಲಾಖೆಯಿಂದ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಕಾರ್ಯಾಗಾರ ಆ.10 ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಭಾಗವಹಿಸಲಿದ್ದಾರೆ.